ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮಾತುಗಳಲ್ಲಿ ಮೂಲಭೂತವಾದ, ಸಂವಿಧಾನ ವಿರೋಧಿ, ಸನಾತನವಾದದ ಛಾಯೆ ಎದ್ದು ಕಾಣುತ್ತಿದೆ. ದೇಶದ ಸಂವಿಧಾನ, ಕಾನೂನು ವ್ಯವಸ್ಥೆಗೆ ವಿರುದ್ಧವಾದ ಧ್ವನಿ ಅವರ ಮಾತುಗಳಲ್ಲಿವೆ ಎಂದು ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್.ಶಿವಣ್ಣ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೋಹನ್ ಭಾಗವತ್ ಆಡಿರುವ ಮಾತಿನ ವಿರುದ್ದ ನಾಡಿನ ಬಹುಜನರು ಧ್ವನಿ ಎತ್ತಬೇಕಾದ ಅಗತ್ಯವಿದೆ. ಆರೆಸ್ಸೆಸ್ ಕಾರ್ಯಕರ್ತರಿಂದ ಪಡೆಯುವ ಗುರುದಕ್ಷಿಣೆಗೆ ಆದಾಯ ತೆರಿಗೆ ವಿನಾಯಿತಿ ಇದೆ ಎಂಬ ಮಾತೇ ಸಂವಿಧಾನ ವಿರೋಧಿಯಾದದ್ದು, ಕಾರ್ಯಕರ್ತರು ಎಂದರೆ ಯಾರು? ಅವರು ದೇವಲೋಕದಿಂದ ಹಣ ಪಡೆಯುತ್ತಾರಾ? ಎಂಬ ಬಗ್ಗೆ ಎಲ್ಲರೂ ಪ್ರಶ್ನೆ ಮಾಡಬೇಕಾಗಿದೆ ಎಂದರು.
ಆರೆಸ್ಸೆಸ್ ನೋಂದಣಿಯೇ ಬೇಕಿಲ್ಲ ಎಂದು ಭಂಡ ಭಾಷಣ ಮಾಡಿರುವ ಭಾಗವತ್ ಸಂವಿಧಾನದ ವಿರುದ್ಧ ತಮ್ಮ ಅಂತರಾಳದಲ್ಲಿರುವ ಅಸಹನೆಯನ್ನು ಹೊರಹಾಕಿದ್ದಾರೆ. ಮೌಡ್ಯ, ಕಂದಾಚಾರ, ಅಸ್ಪೃಶ್ಯತೆ, ಮನುವಾದವನ್ನು ಆಚರಿಸುವವರು, ಸದಾ ತಮ್ಮ ಶ್ರೇಷ್ಠತೆಯನ್ನು ಪ್ರತಿವಾದಿಸುತ್ತಾರೆ. ಮಿಕ್ಕವರನ್ನು ತಮ್ಮ ಗುಲಾಮರು ಎಂಬಂತೆ ಕಾಣುತ್ತಾರೆ. ಅದೇ ಚಾತುವರ್ಣದ ತತ್ವವೂ ಆಗಿದೆ ಎಂದು ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.
ಹೊರಗಿನಿಂದ ಬಂದ ಆರ್ಯರು ಮೂಲಭೂತವಾದವನ್ನೇ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅವರ ವಿರುದ್ದ ನಾವೆಲ್ಲರೂ ಒಂದಾಗಿ ‘ಅಹಿಂದ ಪ್ರತ್ಯೇಕ ಧರ್ಮ’ ಸ್ಥಾಪನೆಗಾಗಿ ಒತ್ತಾಯ ಮಾಡಬೇಕಿದೆ. 2017ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮುನ್ನೆಲೆಯಲ್ಲಿದ್ದಾಗ ನಾನು ಅಹಿಂದ ಪ್ರತ್ಯೇಕ ಧರ್ಮ ಸ್ಥಾಪನೆಯಾಗಬೇಕು ಎಂದು ಧ್ವನಿ ಎತ್ತಿದ್ದೆ ಈ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಿದ್ದೆ ಎಂದು ತಿಳಿಸಿದ್ದಾರೆ.




