ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾಸಕ ಎಂ.ಶ್ರೀನಿವಾಸ್ ಎಂದು ಘೋಷಣೆಯಾಗಿ ಎರಡು ತಿಂಗಳು ಕಳೆದಿದೆ.ಆದರೂ ಕೂಡ ಎಂ.ಶ್ರೀನಿವಾಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮೊಗದಲ್ಲಿ ಹರ್ಷ ಕಾಣುತ್ತಿಲ್ಲ.
ಚುನಾವಣೆ ದಿನಾಂಕ ಘೋಷಣೆಯಾದರೂ ಜೆಡಿಎಸ್ ಅಭ್ಯರ್ಥಿ ಬಗ್ಗೆ ಸ್ಪಷ್ಟವಾದ ನಿರ್ಧಾರ ಇನ್ನೂ ಹೊರ ಬೀಳದಿರುವುದರಿಂದ ಶಾಸಕ ಎಂ.ಶ್ರೀನಿವಾಸ್ ಹಾಗೂ ಅವರ ಅಭಿಮಾನಿಗಳು, ಕಾರ್ಯಕರ್ತರಲ್ಲಿ
ತಳಮಳ ಹೆಚ್ಚಾಗಿದೆ.
ಕೊನೆ ಗಳಿಗೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬದಲಾವಣೆ ಆಗಬಹುದು ಎಂಬ ಗಾಳಿ ಸುದ್ದಿಯು ಕೂಡ ಜೋರಾಗಿ ಬೀಸುತ್ತಿರುವುದರಿಂದ ಎಂ.ಶ್ರೀನಿವಾಸ್ ಹಾಗೂ ಅವರ ಅಭಿಮಾನಿಗಳು, ಕಾರ್ಯಕರ್ತರು ಕೂಡ ಗೊಂದಲದಲ್ಲಿ ಮುಳುಗಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿರುವ ಎಂ.ಶ್ರೀನಿವಾಸ್ ಅವರ ಹೆಸರನ್ನು ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ ಮೇಲೆ ಅವರು ಕೂಡ ಪಕ್ಷ ಸಂಘಟನೆಯಲ್ಲಿ ಗಂಭೀರವಾಗಿ ತೊಡಗಿಕೊಂಡು ಪಂಚರತ್ನ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾದ ನಂತರವೂ ಶ್ರೀನಿವಾಸ್ ಅವರಿಗೆ ವರಿಷ್ಠರು ಸ್ಪಷ್ಟವಾಗಿ ನೀವೇ ಅಭ್ಯರ್ಥಿ ಎಂದು ಮತ್ತೊಂದು ಬಾರಿ ಹೇಳಬೇಕಿತ್ತು .ಕೊನೆ ಗಳಿಗೆಯಲ್ಲಿ ಅಭ್ಯರ್ಥಿ ಬದಲಾಗಬಹುದೆಂಬ ಸುದ್ದಿ ಕೂಡ ಕ್ಷೇತ್ರದಾದ್ಯಂತ ಹಬ್ಬಿರುವುದರಿಂದ ಟಿಕೆಟ್ ಘೋಷಣೆಯಾದರೂ ನಾನೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಮುಕ್ತವಾಗಿ ಓಡಾಡಲು ಶಾಸಕ ಎಂ.ಶ್ರೀನಿವಾಸ್ ಅವರಿಗೆ ಸಾಧ್ಯವಾಗಿಲ್ಲ.
ಮಂಡ್ಯ ಕ್ಷೇತ್ರದಲ್ಲಿ ಬರಿ ಗೊಂದಲಗಳೇ ತುಂಬಿದ್ದು, ಜೆಡಿಎಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಚರ್ಚೆಗಳು ಜೋರಾಗಿದೆ. ಎರಡು ತಿಂಗಳ ಹಿಂದೆಯೇ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಇದರಲ್ಲಿ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿತ್ತು.
ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಟಿ. ಮಂಜು ಅವರನ್ನು ಆಯ್ಕೆ ಮಾಡಿ, ಉಳಿದ ಎಲ್ಲಾ ಕ್ಷೇತ್ರಗಳಲ್ಲಿಯೂ ಹಾಲಿ ಶಾಸಕರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು. ಇದಾದ ನಂತರ ಎಲ್ಲಾ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ನಿಯೋಜಿತ ಅಭ್ಯರ್ಥಿಗಳು ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಮಂಡ್ಯದಲ್ಲೂ ಹಾಲಿ ಶಾಸಕ ಎಂ.ಶ್ರೀನಿವಾಸ್ ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರು, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಕೂಡ ಜೆಡಿಎಸ್ ಟಿಕೆಟ್ ಪಡೆಯಲು ಶತ ಪ್ರಯತ್ನ ನಡೆಸಿದ್ದಾರೆ. ಪಂಚರತ್ನ ಯಾತ್ರೆಯ ಸಂದರ್ಭದಲ್ಲೂ ರಾಮಚಂದ್ರು, ವಿಜಯ್ ಆನಂದ್ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಮನವೊಲಿಸಲು ಕೆಲಸ ಮಾಡಿದ್ದಾರೆ. ಅಂತಿಮವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುವರೋ ಎಂಬ ಕುತೂಹಲ ಮೂಡಿಸಿದೆ.




