Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ವರಿಷ್ಠರು ಅವಕಾಶ ನೀಡಿದರೆ ಮಂಡ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ : ಡಾ.ಕೃಷ್ಣ

ಮಂಡ್ಯ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ಯೋಜನೆ ಸಿದ್ಧಪಡಿಸಿ ಕೊಂಡಿದ್ದು, ವರಿಷ್ಠರು ಅವಕಾಶ ನೀಡಿದರೆ ಮಂಡ್ಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಡಾ. ಕೃಷ್ಣ ತಿಳಿಸಿದರು.

ಮಂಡ್ಯ ನಗರದ ಅಶೋಕ ನಗರದ ಒಂದನೇ ಕ್ರಾಸ್ ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು‌.

ಮಂಡ್ಯ ವಿಧಾನಸಭಾ ಕ್ಷೇತ್ರ ಬಹಳ ಹಿಂದುಳಿದಿದೆ. ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿದೆ. ಎಲ್ಲಾ ರಸ್ತೆಗಳು ಬಹಳ ಹದಗೆಟ್ಟಿದ್ದು, ಜನರು ಓಡಾಡಲು ಆಗದ ಪರಿಸ್ಥಿತಿಯಲ್ಲಿದೆ. ಮೈಸೂರು ಸಕ್ಕರೆ ಕಾರ್ಖಾನೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕ್ಷೇತ್ರದಲ್ಲಿ ನಿರುದ್ಯೋಗ, ಬಡತನ ಹಾಸುಹೊಕ್ಕಾಗಿದೆ. ಕಬ್ಬು,ಭತ್ತ ಸೇರಿದಂತೆ ಇತರ ಬೆಳೆಗಳಿಗೆ ರೈತರು ಕನಿಷ್ಠ ಬೆಂಬಲ ಬೆಲೆ ಪಡೆಯಲು ಆಗುತ್ತಿಲ್ಲ. ಕಾಂಗ್ರೆಸ್ ವರಿಷ್ಠರು ನನಗೊಂದು ಅವಕಾಶ ನೀಡಿದರೆ, ಎಲ್ಲಾ ಸಮಸ್ಯೆಗಳ ಪರಿಹರಿಸಲು ನನ್ನದೇ ಆದ ಯೋಜನೆ ಹಾಕಿಕೊಂಡಿದ್ದೇನೆ ಎಂದರು.

ಉಚಿತ ಆರೋಗ್ಯ-ಶಿಕ್ಷಣ

ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಿಗೆ ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣ ನೀಡಬೇಕೆಂಬುದು ನನ್ನ ಗುರಿ. ಆರೋಗ್ಯ ಸಮಸ್ಯೆ ತುಂಬಾ ಇದೆ. ಕ್ಷೇತ್ರದ ಜನರಿಗೆ ಉಚಿತ ಆರೋಗ್ಯ ಭಾಗ್ಯ ಕಲ್ಪಿಸುತ್ತೇನೆ. ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ನನ್ನ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇನೆ. ಸ್ವಂತ ಖರ್ಚಿನಿಂದ ಜನರಿಗೆ ಶಸ್ತ್ರಚಿಕಿತ್ಸೆ ನೀಡಲು ಬದ್ಧನಾಗಿದ್ದೇನೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಬೇಕು. ಸಾರ್ವಜನಿಕ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಬಯೋ ಟಾಯ್ಲೆಟ್ಸ್ ನಿರ್ಮಾಣ ಮಾಡಲಾಗುವುದು.ಹೀಗೆ ನನ್ನ ಮನಸ್ಸಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಮಗ್ರ ಯೋಜನೆಯಿದ್ದು,ವರಿಷ್ಠರು ಒಂದು ಅವಕಾಶ ನೀಡಲಿ ಎಂದರು

ಜನರ ಸೇವೆಗೆ ಸಿದ್ಧ

ನಾನು 35 ವರ್ಷಗಳ ಹಿಂದೆ ಮಂಡ್ಯಕ್ಕೆ ಬಂದು ಕಾವೇರಿ ನರ್ಸಿಂಗ್ ಹೋಂ ಸ್ಥಾಪನೆ ಮಾಡಿ, ಜನರಿಗೆ ಆರೋಗ್ಯ ಸೇವೆ ಒದಗಿಸಿದ್ದೇನೆ. ಮಂಡ್ಯದಲ್ಲಿ ಆಸ್ಪತ್ರೆ, ಶಾಲೆ,ಕಾಲೇಜು ಸ್ಥಾಪಿಸಿದ್ದೇನೆ. ಈಗಾಗಲೇ ನನ್ನ ಶಾಲೆಯಲ್ಲಿ ಹಲವು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇನೆ. ನರ್ಸಿಂಗ್ ಹೋಂನಲ್ಲೂ ಬಡವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಿದ್ದೇನೆ. ಜನರ ಕೆಲಸ ಮಾಡಲು,ಅವರ ಕುಂದುಕೊರತೆ ನಿವಾರಿಸುವ ನಿಟ್ಟಿನಲ್ಲಿ ಈ ಕಚೇರಿ ತೆರೆದಿದ್ದೇನೆ. ಇಲ್ಲಿ ಬರುವ ಕ್ಷೇತ್ರದ ಪ್ರತಿ ಜನರಿಗೆ ಖಾತೆ ಬದಲಾವಣೆ, ಆರ್ ಟಿ ಸಿ, ರೇಷನ್ ಕಾರ್ಡ್ ಸೇರಿದಂತೆ ಯಾವುದೇ ಕೆಲಸವಿರಲಿ. ಅದನ್ನು ಮಾಡಿಕೊಡಲು ನಾನು ಸಿಬ್ಬಂದಿಯನ್ನು ನೇಮಿಸಿದ್ದೇನೆ. ಜನತೆ ಇದರ ಉಪಯೋಗ ಪಡೆಯಲಿ ಎಂದು ಮನವಿ ಮಾಡಿದರು.

ವರಿಷ್ಠರ ಮಾತಿಗೆ ಬದ್ಧ

ನಾನು ಜೆಡಿಎಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂ. ಶ್ರೀನಿವಾಸ್ ರವರಿಗೆ ಟಿಕೆಟ್ ನೀಡಿದ ಸಂದರ್ಭದಲ್ಲಿ ನಾನು ಇನ್ನು ಇಲ್ಲೇ ಇರುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ವರಿಷ್ಠರಾದ ಡಿ.ಕೆ‌.ಶಿವಕುಮಾರ್, ಸಿದ್ದರಾಮಯ್ಯ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಮೊದಲಾದ ನಾಯಕರ ಮಾತಿಗೆ ನಾನು ಬದ್ಧನಾಗಿದ್ದೇನೆ‌. ನನಗೆ ಈ ಬಾರಿ ಅವಕಾಶ ನೀಡಿದರೆ ಮಂಡ್ಯದ ಸಮಗ್ರ ಅಭಿವೃದ್ಧಿಗೆ ನನ್ನದೇ ಆದ ಯೋಜನೆಯ ಮೂಲಕ ಅಭಿವೃದ್ಧಿ ಪಡಿಸುತ್ತೇನೆ. ವೈದ್ಯಕೀಯ ವೃತ್ತಿ ನನಗೆ ಸಂತೃಪ್ತಿ ನೀಡಿದ್ದು, ಈಗ ಜನರಿಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ರಾಜಕೀಯ ಅಧಿಕಾರ ಪಡೆಯಲು ಬಯಸಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಡಾ.ಕೃಷ್ಣರವರು 2023 ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ಅಮ್ಜದ್ ಪಾಷ, ವೇಣು, ಶಶಿಕುಮಾರ್, ಹಮೀದ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!