Friday, November 20, 2026

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರೇ ಇದ್ದರೂ ಅಭಿವೃದ್ಧಿ ಶೂನ್ಯ : ಎನ್.ಚಲುವರಾಯಸ್ವಾಮಿ

ಮದ್ದೂರು ಜಿಲ್ಲೆಯಲ್ಲಿ 7 ಮಂದಿ ಜೆಡಿಎಸ್ ಶಾಸಕರಿದ್ದರೂ ಅಭಿವೃದ್ಧಿ ಶೂನ್ಯವಾಗಿದ್ದು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಒಂದೂ ಈಡೇರಿಲ್ಲವೆಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಡ್ಯ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು
ಚುನಾವಣೆ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ, ಆಶ್ರಯ ಮನೆ, ಬೈಸಿಕಲ್ ವಿತರಣೆ, ಕೃಷಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದ್ದು ಇದು ವರೆವಿಗೂ ಯಾವುದೇ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿರುವ ಉದಾಹರಣೆಗಳಿಲ್ಲವೆಂದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿರುವ ಉದಾಹರಣೆಗಳಿಲ್ಲವೆಂದು ಆರೋಪಿಸಿದರಲ್ಲದೇ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನರು ತತ್ತರಿಸಿರುವುದಾಗಿ ಹೇಳಿದರು.

ಪ್ರಸಕ್ತ ಎದುರಾಗಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದ ಅವರು ಈಗಾಗಲೇ ಪಕ್ಷವು ನಾಲ್ಕು ಭರವಸೆಗಳನ್ನು ಘೋಷಿಸಿದ್ದು ಅಧಿಕಾರಕ್ಕೆ ಬಂದ ದಿನದಿಂದಲೇ ಪ್ರತಿ ಮನೆಗೆ 2 ಸಾವಿರ ರೂ. 200 ಯುನಿಟ್ ವಿದ್ಯುತ್, 10 ಕೆ.ಜಿ. ಅಕ್ಕಿ ಹಾಗೂ ಪದವೀಧರರಿಗೆ 3 ಸಾವಿರ ರೂ. ವಿತರಿಸಲು ಮುಂದಾಗಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು 7 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಲಿದ್ದು ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆ ಜತೆಗೆ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು.

ಮತ ಪ್ರಚಾರ 
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಅಂಕುಶಪುರ, ಹರಳಕೆರೆ, ಚನ್ನಮ್ಮನಕೊಪ್ಪಲು, ಮೂಡ್ಯ, ಉಪ್ಪಾರಕೊಪ್ಪಲು, ಅರಗಿನಮೆಳೆ, ತಗ್ಗಹಳ್ಳಿ, ಟಿ. ಬಳ್ಳೇಕೆರೆ, ಚಿಕ್ಕೋನಹಳ್ಳಿ, ಯು.ಸಿ. ದೊಡ್ಡಿ, ಹುರಗಲವಾಡಿ.
ಕೋಡಿದೊಡ್ಡಿ ಮತ್ತು ಕೊಪ್ಪ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ಕೈಗೊಂಡು ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ದಿವಾಕರ್, ತಾ.ಪಂ. ಮಾಜಿ ಉಪಾದ್ಯಕ್ಷ ಬಿ.ಎಂ. ರಘು, ತಾ.ಪಂ. ಮಾಜಿ ಸದಸ್ಯ ತೋಯಿಜಾಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗೀಗೌಡ, ಮುಖಂಡರಾದ ಕರಿಯಪ್ಪ, ರಾಮ್‌ದಾಸ್, ರಾಮಕೃಷ್ಣ, ಮರಳಿಗಸ್ವಾಮಿ, ಯುವ ಮುಖಂಡ ಮೂಡ್ಯ ಮಂಜು ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ