ಬೆಳೆದು ನಿಂತ ಮರಗಳ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗಳನ್ನು ಸ್ಪರ್ಶಿಸಿ ಅಪಾಯಕ್ಕೆ ಆಹ್ವಾನ ನೀಡುತಿದ್ದರೂ ಮಂಡ್ಯ ನಗರಸಭೆಯಾಗಲಿ, ಅರಣ್ಯ ಇಲಾಖೆಯಾಗಲಿ ಕ್ರಮ ಕೈಗೊಂಡಿಲ್ಲ ಎಂದು ಮಂಡ್ಯನಗರ ನೂರಡಿ ರಸ್ತೆಯ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೇ ಮಂಡ್ಯದ ತಾವರೆಗೆರೆ ಬಡಾವಣೆಯಲ್ಲಿ ಮರದ ಕೊಂಬೆ ಉರುಳಿ ಬಿದ್ದು ಪೌರ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದ. ಈ ಘಟನೆಯ ನಂತರ ಎಚ್ಚೆತ್ತ ನಗರಸಭೆ ಮಂಡ್ಯ ನಗರಸಭೆ ಮಂಡ್ಯನಗರದ ವಿವಿಧೆಡೆ ಒಣಗಿದ ಮರದ ಕೊಂಬೆಗಳನ್ನು ತೆರವು ಮಾಡಿತ್ತು. ಆದರೆ ನೂರಡಿ ರಸ್ತೆಯ IDBI ಬ್ಯಾಂಕ್ ಹಾಗೂ ಪ್ರಾಸ್ಟೀಜ್ ಶೋ ರೂಂ ಸಮೀಪ ವಿದ್ಯುತ್ ಲೈನ್ ಗಿಂತ ಎತ್ತರಕ್ಕೆ ಬೆಳೆದ ಮರದ ಕೊಂಬೆಗಳು ಬಾಗಿ ನಿಂತು ವಿದ್ಯುತ್ ತಂತಿಯನ್ನು ಮುಟ್ಟುತ್ತಿವೆ. ಈ ಬಗ್ಗೆ ನಗರಸಭೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂದು ಇಲ್ಲಿನ ವ್ಯಾಪಾರಿಗಳು ಕಿಡಿಕಾರಿದ್ದಾರೆ.
ಸ್ಥಳೀಯ ಅಂಗಡಿ ಮಾಲೀಕರು ಕೋಟ್ಯಾಂತರ ರೂ. ಬಂಡವಾಳ ಹಾಕಿ ಎಲೆಕ್ಟ್ರಾನಿಕ್ಸ್ ಮಳಿಗೆಗಳನ್ನು ತೆರೆದಿದ್ದು, ಗ್ರಾಹಕರ ವೀಕ್ಷಣೆಗಾಗಿ ಟಿವಿ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾಲನೆಯಲ್ಲಿಡಲಾಗಿರುತ್ತದೆ, ಒಂದು ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದರೆ ಆಗುವ ನಷ್ಟಕ್ಕೆ ಯಾರು ಹೊಣೆಯಾಗುತ್ತಾರೆ. ನಾವು ವ್ಯಾಪಾರಿಗಳು ಬೀದಿಗೆ ಬೀಳ ಬೇಕಾಗುತ್ತದೆ ಎಂದು ಅಂಗಡಿ ಮಾಲೀಕರ ಅಳಲು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಮರದ ರೆಂಬೆ ಕೊಂಬೆಗಳು ಜೋರಾಗಿ ಗಾಳಿ ಬೀಸಿದಾಗ ವಿದ್ಯುತ್ ತಂತಿಗೆ ಪ್ರವಹಿಸಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಟಿವಿ, ಪ್ರೀಡ್ಜ್ ಸೇರಿದಂತೆ ಹಲವು ಗೃಹೋಪಯೋಗಿ ಸುಟ್ಟು ಹೋಗಿ ನಷ್ಟವುಂಟಾಗಿದೆ. ಈಗಿರುವಾಗ ಈ ಬಗ್ಗೆ ಹಲವಾರು ಬಾರಿ ಮಂಡ್ಯ ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಸ್ತುತ ಮಳೆಗಾಲ ಪ್ರಾರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಜೋರಾದ ಗಾಳಿ ಮಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಲ್ಲದೇ ಪ್ರಾಣಹಾನಿಗಳಂತಹ ಘಟನೆಗಳು ಸಂಭವಿಸುವ ಅಪಾಯವಿದ್ದು, ಕೂಡಲೇ ನಗರಸಭೆ ಅಧಿಕಾರಿಗಳು ಅಪಾಯಕಾರಿ ರಂಬೆ, ಕೊಂಬೆಗಳನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ವಿದ್ಯುತ್ ತಂತಿ ಹಾಗೂ ಮರಗಳಿಂದ ಏನೆಲ್ಲ ಅವಘಡಗಳು ಸಂಭವಿಸಬಹುದು
ವಿದ್ಯುತ್ ತಂತಿಗಳನ್ನು ಇರುವ ಸಮೀಪದಲ್ಲಿ ಮರದ ರೆಂಬೆ ಕೊಂಬೆಗಳಿರುವುದು ಹೆಚ್ಚು ಅಪಾಯಕಾರಿ. ಏಕೆಂದರೆ ಅತೀ ಹೆಚ್ಚು ವಿದ್ಯುತ್ ಕಡಿತ ಪ್ರಕರಣಗಳು ಮರದ ರೆಂಬೆ ಕೊಂಬೆಗಳಿಂದಲೇ ಸಂಭವಿಸುತ್ತವೆ.
ಜೋರಾದ ಗಾಳಿ ಬೀಸಿದಾಗ ಮರಗಳು ಮತ್ತು ಅವುಗಳ ಅವಶೇಷಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಲೈನ್ಗಳು ಶಾರ್ಟ್-ಸರ್ಕ್ಯೂಟ್ಗೆ ಒಳಗಾಗಬಹುದು. ಅಲ್ಲದೇ ವಿದ್ಯುತ್ ಉಪಕರಣಗಳಿಗೆ ಹಾನಿಯನ್ನುಂಟು ಮಾಡಬಹುದು, ಇದರ ಪರಿಣಾಮವಾಗಿ ವಿದ್ಯುತ್ ಕಡಿತವಾಗುತ್ತದೆ.

ವಿದ್ಯುತ್ ಲೈನ್ಗಳಿಗೆ ತುಂಬಾ ಹತ್ತಿರದಲ್ಲಿ ಬೆಳೆಯುವ ಮರಗಳು ಹೆಚ್ಚು ಅಪಾಯಕಾರಿಯಾಗಿವೆ. ಏಕೆಂದರೆ ಅವು ವಿದ್ಯುತ್ ನೆಲಕ್ಕೆ ಪ್ರಯಾಣಿಸಲು ಮಾರ್ಗವನ್ನು ಸೃಷ್ಟಿಸುತ್ತವೆ. ಇದರಿಂದ ಹತ್ತಿರದ ಸ್ಥಳೀಯರಿಗೆ ವಿದ್ಯುತ್ ಪ್ರವಹಿಸಿ ಪ್ರಾಣಹಾನಿ ಸಂಭವಿಸಬಹುದು. ಇದರಿಂದ ವಿದ್ಯುದಾಘಾತಕ್ಕೊಳಗಾಗುವ ವ್ಯಕ್ತಿಗೆ ಗಂಭೀರ ಅಪಾಯಗಳು ಉಂಟಾಗುತ್ತವೆ. ಬೇಸಿಗೆಯಂತಹ ಹವಾಮಾನ ಪರಿಸ್ಥಿತಿಗಳಲ್ಲಿ ವಿದ್ಯುತ್ ಮಾರ್ಗಗಳ ಬಳಿ ಮರಗಳು ಸಹ ಗಂಭೀರವಾದ ಬೆಂಕಿ ಅಪಾಯವನ್ನು ಉಂಟು ಮಾಡುತ್ತವೆ.
ರಾಷ್ಟ್ರೀಯ ಎಲೆಕ್ಟ್ರಿಕ್ ಸೇಫ್ಟಿ ಕೋಡ್ ಪ್ರಕಾರ ನಿರ್ದಿಷ್ಟ ಅಂತರದಲ್ಲಿ ವಿದ್ಯುತ್ ತಂತಿಗಳನ್ನು ಇರಿಸಬೇಕು. ಆದರೆ ಮಂಡ್ಯ ನಗರಸಭೆಯೂ ಇದನ್ನೂ ಪಾಲಿಸುತ್ತಿದೆಯೇ ಎಂದು ಗ್ರಾಹಕರು ಪ್ರಶ್ನಿಸುತ್ತಾರೆ.




