Saturday, May 18, 2024

ಪ್ರಾಯೋಗಿಕ ಆವೃತ್ತಿ

ಆರೆಸ್ಸೆಸ್ ಹಿನ್ನೆಲೆಯ ಗೂಂಡಾಗಳಿಂದ ಇದ್ರೀಸ್ ಪಾಷ ಹತ್ಯೆ : ₹ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ

ಗೋರಕ್ಷಣೆಯ ಮುಖವಾಡದ ಗೂಂಡಾಗಳಿಂದ ಕನಕಪುರ ಸಮೀಪದ ಸಾತನೂರು ಬಳಿ ಹತ್ಯೆಯಾದ ಮಂಡ್ಯದ ಗುತ್ತಲು ನಿವಾಸಿ ಇದ್ರೀಸ್ ಪಾಷ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಆತನ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) CPIM ಮಂಡ್ಯ ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ಮಂಡ್ಯನಗರದ ಸಂಜಯ ಸರ್ಕಲ್ ನಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆರೆಸ್ಸೆಸ್ ಸಂಘ ಪರಿವಾರದ ಹಿನ್ನೆಲೆಯ ಗೂಂಡಾ ಪಡೆ ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಬಡ ಮುಸಲ್ಮಾನರ ಮೇಲೆ ಹಲ್ಲೆ ನಡೆಸುವ, ಕೊಲ್ಲುವ ಕ್ರಿಮಿನಲ್‌ ಕೃತ್ಯದಲ್ಲಿ ನಿರತವಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಇಂತಹ ಗೂಂಡಾಗಳ ಮೇಲೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳದೆ ಸಮಾಜ ಘಾತುಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದೆ, ಇದರಿಂದ ಅಮಾಯಕ ಜನತೆ ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇಂತಹ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಈ ರೀತಿಯ ದುಷ್ಕೃತ್ಯಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಒತ್ತಾಯಿಸಿದರು.

ವಿದ್ಯುತ್ ಶಾಕ್ ಮೂಲಕ ಚಿತ್ರಹಿಂಸೆ ನೀಡಿ ಕಗ್ಗೊಲೆ
ಕನಕಪುರ ತಾಲೂಕಿನ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ನೇತೃತ್ವದ ಗೋರಕ್ಷಣೆಯ ಮುಸುಕಿನ ಕೊಲೆಗಡುಕ ಗೂಂಡಾ ಪಡೆ ಇದ್ರೀಸ್ ಪಾಷ ಎಂಬ ಬಡ ಕಾರ್ಮಿಕನನ್ನು ಬಲವಂತವಾಗಿ ಕಾಂಪೌಂಡ್ ಒಳಗೆ ಎಳೆದೊಯ್ದು ವಿದ್ಯುತ್ ಶಾಕ್ ಮೂಲಕ ಚಿತ್ರಹಿಂಸೆ ನೀಡಿ ಕಗ್ಗೊಲೆಗೈದಿದೆ. ಈ ಹಿಂದುತ್ವವಾದಿ ಮತಾಂಧರ ಕೊಲೆಗಡುಕತನವನ್ನು ಖಂಡಿಸುತ್ತವೆ. ಕೊಲೆಗಡುಕರನ್ನು ಈಗಾಗಲೇ ಬಂಧಿಸಲಾಗಿದೆ, ಆದರೆ ಇವರಿಗೆ ಬೆಂಬಲವಾಗಿರುವ ವ್ಯಕ್ತಿಗಳು ಮತ್ತು ಶಕ್ತಿಗಳನ್ನು ಬಂಧಿಸಿ ಕಾನೂನಿನ ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಮುಸ್ಲಿಂ ಸಮುದಾಯ ರಂಜಾನ್‌ ಹಬ್ಬದಲ್ಲಿ ತೊಡಗಿರುವಾಗ ಅವರಿಗೆ ನೆರವಾಗುವಂತಹ ಉಡುಗೊರೆ ನೀಡುವ ಬದಲು, ರಾಜ್ಯ ಸರಕಾರ ಒಂದೆಡೆ ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ತಾರತಮ್ಯ ಮೆರೆದಿದೆ, ಇನ್ನೊಂದೆಡೆ ಹಿಂದೂ ಕೊಲೆಗಡುಕ ಮತಾಂಧರು ಕಾನೂನನ್ನು ಕೈಗೆತ್ತಿಕೊಂಡು ಅಮಾಯಕ ಬಡ ಮುಸ್ಲಿಂ ವ್ಯಕ್ತಿಯ ಕೊಲೆಗೆ ಮುಂದಾಗಿದ್ದಾರೆ. ಈಚೆಗಿನ ಈ ಎರಡು ಘಟನೆಗಳು ಜಗತ್ತಿನ ಮುಂದೆ ನಾಗರೀಕ ಸಮಾಜ ತೀವ್ರ ನಾಚಿಕೆಯಿಂದ ತಲೆ ತಗ್ಗಿಸುವಂಹ ಹೇಯ ದುಷ್ಕೃತ್ಯಗಳಾಗಿವೆ, ಈ ಮತಾಂಧ ಕೊಲೆಗಳು ಹಾಗೂ ರಾಜಕಾರಣವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾಡಳಿತದ ನಿರ್ಲಕ್ಷ್ಯ
ಮಂಡ್ಯ ಜಿಲ್ಲೆಯ ನಾಗರೀಕನೊಬ್ಬ ತನ್ನದಲ್ಲದ ತಪ್ಪಿಗೆ ಧಾರುಣವಾಗಿ ಕೊಲ್ಲಲ್ಪಟ್ಟು ಆತನ ಹೆಂಡತಿ ಮತ್ತು ಸಣ್ಣ ಮಕ್ಕಳು ಬೀದಿ ಪಾಲಾಗಿದ್ದರೂ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಇದುವರೆಗೂ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳುವ ಮತ್ತು ಬೀದಿಗೆ ಬಿದ್ದ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ಭರವಸೆ ನೀಡುವ ಮಾನವೀಯತೆ ಮೆರೆದಿಲ್ಲ. ಅಧಿಕಾರಿಗಳ ಈ ನಡೆಯು ಮುಸ್ಲಿಂ ಧಾರ್ಮಿಕ ಅಲ್ಪಸಂಖ್ಯಾತರ ಬಗೆಗಿನ ರಾಜ್ಯ ಸರ್ಕಾರದ ಧೋರಣೆಯ ಪ್ರತಿಬಿಂಬವಾಗಿದೆ. ಇದನ್ನು CPIM ಬಲವಾಗಿ ಖಂಡಿಸುತ್ತದೆ ಮತ್ತು ತಕ್ಷಣ ಜಿಲ್ಲಾಡಳಿತ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯ ಪ್ರವೃತ್ತರಾಗಿ ನೊಂದವರ ಜೊತೆ ನಿಲ್ಲಬೇಕೆಂದು ಒತ್ತಾಯಿಸಿದರು.

ಕೊಲೆಗಡುಕರ ಮೇಲೆ ಕಠಿಣ ಕಾನೂನು ಆಗಿಲ್ಲ
ಆರೆಸ್ಸೆಸ್ ಮತ್ತಿತರೆ ಮತಾಂಧ ಗೂಂಡಾಪಡೆ ಗೋರಕ್ಷಣೆ, ನೈತಿಕ ಪೋಲೀಸ್ ಗಿರಿ ಧರ್ಮ ರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರಗತಿಪರರು, ದಲಿತರು ಹಾಗೂ ಮುಸಲ್ಮಾನರನ್ನು ಕೊಲ್ಲುವ ಕ್ರಿಮಿನಲ್ ದುಷ್ಕೃತ್ಯದಲ್ಲಿ ನಿರತವಾಗಿವೆ. ರಾಜ್ಯದ ಬಿಜೆಪಿ ಸರ್ಕಾರ ಇಂತಹ ಗೂಂಡಾಗಳನ್ನು ನಿಗ್ರಹಿಸಿ ದುಷ್ಕೃತ್ಯವನ್ನು ತಡೆಯುವ ಬದಲು ಅಂತಹ ಕೆಲಸಗಳಿಗೆ ಕುಮ್ಮಕ್ಕು ದೊರೆಯುವಂತೆ ತಾರತಮ್ಯಕ್ಕೆ ಕ್ರಮವಹಿಸುವ ಮೂಲಕ ಮುಕ್ತ ಸ್ವಾತಂತ್ರ್ಯ ನೀಡಿದೆ. ಇದರಿಂದ ಅಮಾಯಕ ಜನತೆ ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿವೆ, ನರಗುಂದ ದಕ್ಷಿಣ ಕನ್ನಡ ಮುಂತಾದೆಡೆ ಕೊಲ್ಲಲ್ಪಟ್ಟ ಮುಸ್ಲಿಂ ಯುವಜನರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಲಿಲ್ಲ ಮಾತ್ರವಲ್ಲ ಕೊಲೆಗಡುಕರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ. ಇಂತಹ ಎಲ್ಲ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದನದ ವ್ಯಾಪಾರಿಗಳ ಮೇಲೆ ದಾಳಿ ಹೆಚ್ಚಳ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದರಲ್ಲೂ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದ ನಂತರ ದನದ ವ್ಯಾಪಾರಿಗಳ ಮೇಲೆ ದಾಳಿಗಳು ವಿಪರೀತ ಹೆಚ್ಚಾಗಿವೆ, ಗೋರಕ್ಷಕ ಮುಸುಕಿನ ಮತಾಂಧ ಗೂಂಡಾಗಳು ದಾಳಿ ಮಾಡಿ ಹಲ್ಲೆ ನಡೆಸುವಾಗ ರಾಜ್ಯ ಸರ್ಕಾರದ ಪೊಲೀಸರು ಒಂದೋ ಮೂಕ ಪ್ರೇಕ್ಷಕರಾಗುವುದು ಇಲ್ಲವೇ, ದಾಳಿಕೋರರ ಜೊತೆ ಕೈಜೋಡಿಸುವುದು ನಡೆದಿದೆ. ಇದರಿಂದಾಗಿ ದಾಳಿ ಹಲ್ಲೆ ನಡೆಸುವವರಿಗೆ ಹೆಚ್ಚಿನ ಬಲ ಬಂದಂತಾಗಿದೆ. ಇಂತಹ ವ್ಯಕ್ತಿಗಳು ಮತ್ತು ಶಕ್ತಿಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ನಾಯಕಿ ಸಿ.ಕುಮಾರಿ, ಮುಖಂಡರಾದ ಕೃಷ್ಣ ಆರ್, ಹನುಮೇಶ್, ಶೋಭಾ, ರಿಜ್ವಾನ್ ಹಾಗೂ ಶಿವಲಿಂಗಯ್ಯ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!