ವಿಶೇಷ ವರದಿ : ವಿ.ಎಸ್. ಪ್ರಭು
ಮೇ.10ರಂದು ನಿಗಧಿಯಾಗಿರುವ ವಿಧಾನಸಭಾ ಚುನಾವಣೆ ಸಂಬಂಧ ಮಂಡ್ಯ ಜಿಲ್ಲಾಡಳಿತದ ಸೂಚನೆ ಮೇರೆಗೆ ಮದ್ದೂರು ತಾಲೂಕಿನ ನಿಡಘಟ್ಟ, ಕೊಂಗಬೋರನದೊಡ್ಡಿ, ಕೂಳಗೆರೆ ಮತ್ತು ಮಲ್ಲನಕುಪ್ಪೆ ಗ್ರಾಮಗಳಲ್ಲಿ ತೆರೆದಿರುವ ನಾಲ್ಕು ತಪಾಸಣಾ ಕೇಂದ್ರಗಳ ಸಿಬ್ಬಂದಿಯ ಸ್ಥಿತಿ ಹೇಳತೀರದಾಗಿದೆ.
ಕುಡಿಯುವ ನೀರು, ಶೌಚಾಲಯ, ನೆರಳು, ಭದ್ರತೆಯಿಲ್ಲದೆ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲೇ ಬೇಕಾದ ಇಲ್ಲಿನ ನಿಯೋಜಿತ ಸಿಬ್ಬಂದಿಗೆ ಊಟ, ಉಪಹಾರ ಮರೀಚಿಕೆಯಾಗಿದ್ದು ದೂರದ ನಾಲ್ಕು ಕಿ.ಮೀ.ಗಳಿಗೂ ಹೆಚ್ಚು ದೂರ ಊಟ ತಿಂಡಿಗಾಗಿ ಕ್ರಮಿಸಬೇಕಾದ ಸ್ಥಿತಿ ಬಂದೊದಗಿದ್ದು ಮದ್ದೂರು ತಾಲೂಕಿನ ಗಡಿಭಾಗಗಳಲ್ಲಿ ನಾಲ್ಕು ವಿವಿಧೆಡೆ ತೆರೆದಿರುವ ಚುನಾವಣಾ ಅಕ್ರಮ ತಡೆ ಸಂಬಂಧದ ಚೆಕ್‌ಪೋಸ್ಟ್ ಗಳಲ್ಲಿನ ತಪಾಸಣಾ ಮತ್ತು ಭದ್ರತಾ ಸಿಬ್ಬಂದಿ ಅಗತ್ಯ ಸೌಲಭ್ಯಗಳ ಕೊರತೆ ನಡುವೆ ಜೀವ ಭಯದೊಟ್ಟಿಗೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಬಂದೊದಗಿದೆ.

ತಪಾಸಣಾ ಕೇಂದ್ರದ ತಾತ್ಕಾಲಿಕ ಶೆಡ್‌ಗಳಲ್ಲಿ ಸಿಸಿ ಕ್ಯಾಮೆರಾ, ಮೇಜು, ಖುರ್ಚಿ, ಅಳವಡಿಸಿದ್ದು ಕಿರಿದಾಗಿ ನಿರ್ಮಿಸಿರುವ ನೆರಳು ವ್ಯವಸ್ಥೆ ಸಾಲದಾಗಿದ್ದು 34 ಡಿಗ್ರಿ ಸೆಲ್ಸಿಯಸ್ ಮೀರಿರುವ ತಾಪಮಾನದ ನಡುವೆ ಬಿರು ಬಿಸಿಲಿನಲ್ಲಿ ಕಾದು ನಿಂತ ಡಾಂಬರ್ ರಸ್ತೆ ಮಧ್ಯೆ ಹೆದ್ದಾರಿಯ ವಾಹನಗಳ ತಪಾಸಣೆ ಅನಿವಾರ್ಯವಾಗಿದೆ. ವಾರಾಂತ್ಯದ ಶನಿವಾರ, ಭಾನುವಾರ ಮತ್ತು ಸರಕಾರಿ ರಜಾ ದಿನಗಳಲ್ಲಿ ಮೈಸೂರು, ಬೆಂಗಳೂರು ನಡುವೆ ಸಂಚರಿಸುವ ವಾಹನಗಳ ಸಂಖ್ಯೆ ದುಪ್ಪಟ್ಟಾಗುವ ಜತೆಗೆ ನೂತನ ದಶಪಥ ಹೆದ್ದಾರಿಯಲ್ಲಿ ಶರವೇಗದಲ್ಲಿ ಬರುವ (100 ರಿಂದ 120 ಕಿ.ಮೀ) ವಾಹನಗಳು ತಪಾಸಣಾ ಕೇಂದ್ರದ ಸಮೀಪದಲ್ಲಿ ವೇಗ ತಗ್ಗಿಸುವ ಭರದಲ್ಲಿ ಸಿಬ್ಬಂದಿಗಳಿಗೆ ನಿರ್ಮಿಸಿರುವ ತಾತ್ಕಾಲಿಕ ಟೆಂಟ್‌ಗಳಿಗೆ ನುಗ್ಗಿರುವ ಉದಾಹರಣೆಗಳಿವೆ.
ಕಳೆದ ಎರಡು ದಿನಗಳ ಹಿಂದೆ ವೇಗವಾಗಿ ಬಂದ ವಾಹನವೊಂದು ನಿಡಘಟ್ಟ ಚೆಕ್‌ಪೋಸ್ಟ್ ಬಳಿ ವೇಗ ನಿಯಂತ್ರಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭದ್ರತೆಗಾಗಿ ಅಳವಡಿಸಿದ್ದು ಬ್ಯಾರಿಕೇಡ್‌ಗಳನ್ನೂ ಭೇದಿಸಿ ತಪಾಸಣಾ ಸಿಬ್ಬಂದಿಯತ್ತ ನುಗ್ಗಿ ಸ್ವಲ್ಪದರಲ್ಲೇ ಭಾರಿ ಅಪಾಯ ತಪ್ಪಿದ ಗಂಭೀರ ಘಟನೆಯೂ ಜರುಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕೆ.ಗೋಪಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಸೇರಿದಂತೆ ಉನ್ನತಾಧಿಕಾರಿಗಳ ತಂಡವೇ ಭೇಟಿ ನೀಡಿ ಕೆಲ ಗಂಟೆಗಳು ಸ್ಥಳದಲ್ಲೇ ವಾಸ್ತವ್ಯವಿದ್ದು ಖುದ್ದು ತಪಾಸಣೆ ನಡೆಸಿ ವಾಪಸ್ಸಾಗಿದ್ದು ಅಲ್ಲಿನ ಅವ್ಯವಸ್ಥೆಗಳು ಯಥಾ ಸ್ಥಿತಿ ಮುಂದುವರೆದಿವೆ.
ಮೈಸೂರಿನಿಂದ ಬೆಂಗಳೂರಿನತ್ತ ತೆರಳುವ ವಾಹನಗಳ ಸಂಖ್ಯೆ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಮೂರು ಪಟ್ಟು ಅಧಿಕವಾಗುವ ಜತೆಗೆ ತಪಾಸಣೆಗೆಂದು ನಿಲ್ಲಿಸುವ ವಾಹನಗಳ ಸಂಖ್ಯೆ ಉದ್ದಕ್ಕೂ ಬೆಳೆದು ನಿಂತು ವಾಹನ ದಟ್ಟಣೆಯೇ ಎದುರಾಗುತ್ತಿರುವುದು ಸ್ಥಳೀಯ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದರೊಟ್ಟಿಗೆ ತಾಲೂಕಿನ ಮದ್ದೂರು, ಹಲಗೂರು ಮಾರ್ಗದ ಕೂಳಗೆರೆ ಗೇಟ್ ಮತ್ತು ಮದ್ದೂರು ಕುಣಿಗಲ್ ಮಾರ್ಗ ಮಧ್ಯದ ಗಡಿಗ್ರಾಮ ಮಲ್ಲನಕುಪ್ಪೆ ಗೇಟ್ ಬಳಿ ಪ್ರತ್ಯೇಕ ಎರಡು ತಪಾಸಣಾ ಕೇಂದ್ರಗಳಿದ್ದು ಇಲ್ಲಿಯೂ ಸಹ ನೀರು ನೆರಳಿನ ಜತೆಗೆ ಆಹಾರ ಪೂರೈಕೆ, ಶೌಚಾಲಯಕ್ಕೆ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಬಂದೊದಗಿದ್ದು ಇಲ್ಲಿನ ಸಿಬ್ಬಂದಿಗಳ ಸಂಕಷ್ಟ ಹೇಳತೀರದಾಗಿದೆ.
ಜಿಲ್ಲಾಡಳಿತ ಮೇಲಿನ ನಾಲ್ಕು ಚುನಾವಣಾ ಸಂಬಂಧದ ಭದ್ರತಾ ಮತ್ತು ತಪಾಸಣಾ ಕೇಂದ್ರಗಳ ಮೂಲ ಸೌಲಭ್ಯ ಕಲ್ಪಿಸುವ ಮತ್ತು ಇಲ್ಲಿನ ಸಿಬ್ಬಂದಿಯ ಭದ್ರತೆಗೆ ಅಗತ್ಯ ಕ್ರಮವಹಿಸಬೇಕೆಂಬುದು ಸ್ಥಳೀಯ ಜನರ ಆಗ್ರಹವಾಗಿದೆ.




