Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಮುಲ್ ಉತ್ಪನ್ನಗಳಿಂದ ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆ- ದಿನೇಶ್ ಗೂಳಿಗೌಡ

ಕೆಎಂಎಫ್‌ ಜೊತೆ ಅಮುಲ್ ಸೇರ್ಪಡೆ ಅಥವಾ ಆ ಸಂಸ್ಥೆಯ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡಿದಲ್ಲಿ ಕೆಎಂಎಫ್ ಸಂಸ್ಥೆಗೆ ಧಕ್ಕೆಯಾಗಲಿದೆ. ಅಲ್ಲದೆ, ಮಂಡ್ಯ ಜಿಲ್ಲೆಯಲ್ಲಿ ಇದನ್ನೇ ನಂಬಿರುವ ರೈತ ಕುಟುಂಬಗಳಿಗೆ ಅನ್ಯಾಯವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ ಗೂಳಿಗೌಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಎಂಎಫ್‌ ಹಾಗೂ ಅದರಡಿಯ ಎಲ್ಲಾ ಒಕ್ಕೂಟಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಅಮೂಲ್‌ನೊಂದಿಗೆ ವಿಲೀನ ಅಥವಾ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮಂಡ್ಯ ಜಿಲ್ಲೆಯೊಂದರಲ್ಲೇ 1,277 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ಅದರಲ್ಲಿ 777 ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. 1,05,000 ಸಾವಿರ ರೈತರು ಸಹಕಾರ ಸಂಘಗಳ ಮೂಲಕ ಒಕ್ಕೂಟಕ್ಕೆ ಹಾಲು ನೀಡುತ್ತಿದ್ದಾರೆ. ಪ್ರತಿ ದಿನ 8.5 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ.ಅಲ್ಲದೆ ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿ 257 ಕಾಯಂ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ 1,057 ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಕುಟುಂಬಗಳಿಗೆ ಒಕ್ಕೂಟ ಜೀವನ ನೀಡಿದೆ. ಅಮೂಲ್‌ನೊಂದಿಗೆ ಯಾವುದೇ ಕಾರಣಕ್ಕೂ ವಿಲೀನ ಮಾಡಬಾರದು. ವಿಲೀನ ಮಾಡುವುದರಿಂದ ನಮ್ಮ ರಾಜ್ಯದ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ರೈತರ ಅಸ್ಮಿತೆಗೆ ಹೊಡೆತ ಬೀಳುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೆಎಂಎಫ್‌ ರಾಜ್ಯದ ಹೆಮ್ಮೆಯ ಸಂಸ್ಥೆ. ಲಕ್ಷಾಂತರ ಕೃಷಿಕರು, ಕೃಷಿ ಕೂಲಿಕಾರರ ಬದುಕಿಗೆ ಈ ಸಂಸ್ಥೆ ಬೆಳಕಾಗಿದೆ. ಹಾಲನ್ನು ಖರೀದಿಸುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಕೃಷಿಗೂ ಸಹಕಾರಿಯಾಗಿದೆ. ಮಾತ್ರವಲ್ಲ, ರಾಜ್ಯದ ಕೋಟ್ಯಂತರ ಜನರ ಹಾಲು ಹಾಗೂ ಹಾಲಿನ ಬೇಡಿಕೆಗಳನ್ನು ಈಡೇರಿಸುತ್ತಿದೆ. ಅಲ್ಲದೆ, ಜನರಿಗೆ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡುವ ಮೂಲಕ ಹೊರ ರಾಜ್ಯಗಳಲ್ಲೂ ಪ್ರಸಿದ್ಧವಾಗಿದೆ ಎಂದಿದ್ದಾರೆ.

ಕೆಎಂಎಫ್‌ನಿಂದ ರಾಜ್ಯದ ಲಕ್ಷಾಂತರ ಕೃಷಿಕರು, ಕೃಷಿ ಕೂಲಿಕಾರರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ, ಪ್ರತಿ ತಿಂಗಳ ಜೀವನ ನಿರ್ವಹಣೆಗೆ ಹಾಲು ಮಾರಾಟದ ಹಣ ನೆರವಾಗುತ್ತಿದೆ. ಇದರಿಂದ ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ದೊರೆಯಲು ಕೆಎಂಎಫ್‌ ಪ್ರಮುಖ ಕಾರಣವಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಈಗ ಏಕಾಏಕಿ ಮಾರುಕಟ್ಟೆಗೆ ಅಮುಲ್‌ ಹಾಲು ಮತ್ತು ಮೊಸರು ಪ್ರವೇಶ ಮಾಡಿದರೆ ಇದರಿಂದ ರಾಜ್ಯದ ಹೈನುಗಾರಿಗೆಗೆ ಹೊಡೆತ ಬೀಳಲಿದೆ. ಮಂಡ್ಯ ಜಿಲ್ಲೆಯಲ್ಲಂತೂ ಹೈನುಗಾರಿಕೆಯನ್ನೇ ನಂಬಿಕೊಂಡು ರೈತರು ಜೀವನ ಸಾಗಿಸುತ್ತಿದ್ದಾರೆ. ಈಗ ಅಭಿವೃದ್ಧಿ, ಪೈಪೋಟಿ ಹೆಸರಿನಲ್ಲಿ ಇಂತಹ ಕ್ರಮಗಳನ್ನು ಕೈಗೊಂಡರೆ ರೈತರ ಜೀವನಕ್ಕೆ ಕೊಳ್ಳಿ ಇಟ್ಟ ಹಾಗೆ ಆಗುತ್ತದೆ. ಹೀಗಾಗಿ ಇಂತಹ ಯಾವುದೇ ಪ್ರಯತ್ನಗಳಿಗೂ ಅವಕಾಶವನ್ನು ಮಾಡಿಕೊಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!