ಕನ್ನಡಿಗರ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ಸೆಡ್ಡು ಹೊಡೆದು ಗುಜರಾತಿನ ಆಮೂಲ್ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲು ಸಂಚು ನಡೆಯುತ್ತಿದ್ದು, ಇದರ ವಿರುದ್ಧ ಅಮೂಲ್ ಹಾಲು, ಮೊಸರು, ಉತ್ಪನ್ನಗಳನ್ನು ತಿರಸ್ಕರಿಸಿ ಎಂದು ರಾಜ್ಯಾದ್ಯಂತ ಕದಂಬ ಸೈನ್ಯದ ವತಿಯಿಂದ ಏ.19ರಿಂದ ಆಂದೋಲನ ನಡೆಸಲಾಗುವುದು ಎಂದು ಸೈನ್ಯದ ಅಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರೈತರ ಪಾಲಿನ ಸಂಜೀವಿನಿ ನಂದಿನಿ ಉತ್ಪನ್ನಗಳು ಎಲ್ಲೆಡೆ ಅದಿಪಥ್ಯ ಸ್ಥಾಪಿಸಿವೆ, ಈ ಸಂದರ್ಭದಲ್ಲಿ ಅಮೂಲ್ ಉತ್ಪನ್ನಗಳನ್ನು ರಾಜ್ಯದ ಬೆಳಗಾವಿ ಹಾಗೂ ಮಹಾನಗರ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಮಹಾನಗರದಲ್ಲಿ ಕೆಲ ದಿನಗಳಿಂದ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಕೃತಕ ಅಭಾವ ಸೃಷ್ಟಿಸಿ ಈಗ ಆ ಜಾಗದಲ್ಲಿ ಅಮೂಲ್ ಉತ್ಪನ್ನಗಳು ದೊರೆಯುವಂತೆ ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದಾರೆಂದು ಆರೋಪಿಸಿದರು.
ಬಿ.ಜೆ.ಪಿ. ಸರ್ಕಾರ ನಂದಿನಿ ಉತ್ಪನ್ನಗಳ ಅಭಾವ ಸೃಷ್ಟಿಸಿ ಅಮೂಲ್‌ಗೆ ದಾರಿ ಮಾಡಿಕೊಡುತ್ತಿವೆ. ಮಂಡ್ಯ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಿದಾಗ ಗುಜರಾತ್ ಅಮೂಲ್ ಜೊತೆಗೆ ಕರ್ನಾಟಕ ನಂದಿನಿ ಸೇರ್ಪಡೆಯಾದರೆ ಸಹಕಾರಿ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಬಹುದೆಂದು ಹೇಳಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾದರು, ಆನಂತರ ಒಂದಲ್ಲ ಒಂದು ರೀತಿಯಲ್ಲಿ ನಂದಿನಿಯನ್ನು ಹಾಳುಗೆಡವಲು ಸಂಚು ರೂಪಿಸಿದ್ದಾರೆಂದು ದೂರಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಮೈಸೂರು ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಮಹದೇವ ಸ್ವಾಮಿ, ಆರಾಧ್ಯ ಉಪಸ್ಥಿತರಿದ್ದರು.




