ಮಂಡ್ಯ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಪಿ.ರವಿಕುಮಾರ್ ಅವರಿಗೆ ಮಂಡ್ಯ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಮಿತಿಯ ಅಧ್ಯಕ್ಷ ಅಪ್ಪಾಜಿಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ರವಿಕುಮಾರ್(ಗಣಿಗ)ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದರಿಂದ ನಮಗೆ ಸಂತೋಷವಾಗಿದೆ. ಪಿ.ರವಿಕುಮಾರ್ ಕಳೆದ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋತರು ಸಹ ಕ್ಷೇತ್ರವನ್ನು ಬಿಡದೇ ಗ್ರಾಮ ಪಂಚಾಯಿತಿ, ಮಂಡಲ ಪಂಚಾಯಿತಿ, ಹಾಲಿನ ಡೈರಿಗಳ ಸಹಕಾರ ಸಂಘಗಳ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದರು.
ರವಿಕುಮಾರ್ ರವರು ಅಕಾಲಿಕ ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ವಿತರಣೆ, ಕರೋನಾದಂತ ಮಹಾಮಾರಿಯಿಂದ ಕಂಗೆಟ್ಟು ರೈತರು ಕೂಲಿಕಾರರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಫುಡ್ ಕಿಟ್ ವಿತರಿಸಿದ್ದಾರೆ. ರೈತರು ಬೆಳೆದ ತರಕಾರಿಗಳನ್ನು ತಾವೇ ಹಣ ಕೊಟ್ಟು, ಖರೀದಿಸಿ ಉಚಿತವಾಗಿ ಹಂಚಿಸಿದ್ದಲ್ಲದ ಕರೋನಾಕ್ಕೆ ತುತ್ತಾಗಿ ಔಷಧಿಗೂ ಹಣವಿಲ್ಲದೆ ಮನೆಯಿಂದ ಹೊರಬರಲು ಆಗದ ಪರಿತಪಿಸುತ್ತಿದ್ದ ಜನರಿಗೆ ಉಚಿತವಾಗಿ ಔಷಧಿಗಳನ್ನು ಹಣ್ಣು ಹಂಪಲುಗಳನ್ನು ಸ್ಯಾನಿಟಜೈರ್ ಗಳನ್ನು ಮನೆಮನೆಗೆ ತಲುಪಿಸಿ ಗ್ರಾಮೀಣ ಜನರಲ್ಲಿ ಧೈರ್ಯ ತುಂಬಿದ್ದಾರೆ ಎಂದರು.
ಇಷ್ಟೇ ಅಲ್ಲದೇ ಗ್ರಾಮಗಳ ಎಲ್ಲಾ ಹಬ್ಬ ಹರಿದಿನ, ಸಾವು-ನೋವುಗಳಲ್ಲಿ ಸಭೆ, ಮದುವೆ ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಹಿರಿಯರು ಕಿರಿಯರೆಲ್ಲರಲ್ಲೂ ರವಿಕುಮಾರ್ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ನಮ್ಮಲ್ಲೂ ಸಹ ಉತ್ಸಾಹ ಮೂಡಿಸಿದೆ. ರವಿಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಡಿರುವುದರಿಂದ ಗ್ರಾಮಾಂತರ ಪುದೇಶದ ಎಲ್ಲಾ ರೈತಾಪಿ ಬಂಧುಗಳು, ಕಾರ್ಮಿಕ ಬಂಧುಗಳು ಹಾಗೂ ಎಲ್ಲಾ ವರ್ಗದ ಜನತೆ ರವಿಕುಮಾರ್ ರವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಮುಖಂಡರಾದ ಸಾತನೂರು ಸತೀಶ್, ಪಾಪಣ್ಣ, ಚಂದ್ರು, ದೊರೆ, ಸಾತನೂರು ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.




