Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಮೂಲ್ ವಹಿವಾಟು ಸ್ಥಗಿತಗೊಳಿಸದಿದ್ದರೆ ತಕ್ಕ ಪರಿಣಾಮ : ಜವರೇಗೌಡ

ಗುಜರಾತ್ ಮೂಲದ ಅಮೂಲ್ ವಹಿವಾಟನ್ನು ರಾಜ್ಯದಲ್ಲಿ ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಎಚ್ಚರಿಕೆ ನೀಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಉತ್ಪನ್ನಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಕೆಎಂಎಫ್‌ಗೆ ಸಲ್ಲುತ್ತದೆ. ಗುಣಮಟ್ಟ, ದರದಲ್ಲಿ ನಂದಿನಿ ಬ್ರಾೃಂಡ್ ಅನ್ನು ಮೀರಿಸುವವರಿಲ್ಲ. ಅಲ್ಲದೇ ಲಕ್ಷಾಂತರ ಕುಟುಂಬದವರ ಬದುಕಿಗೆ ಆಧಾರವಾಗಿದೆ. ಆದರೆ ಕೇಂದ್ರ ಸಚಿವ ಅಮಿತ್ ಶಾ ಮಂಡ್ಯಕ್ಕೆ ಬಂದಾಗಲೇ ನಂದಿನಿ ಬ್ರಾಂಡ್ ಮೇಲೆ ಕಣ್ಣು ಹಾಕಿರಬಹುದು. ಆ ಕಾರಣಕ್ಕೆಯೇ ಅಮೂಲ್ ಮತ್ತು ನಂದಿನಿ ಬ್ರಾಂಡ್ ಗಳ ವಿಲೀನದ ಬಗ್ಗೆ ಹೇಳಿಕೆ ಕೊಟ್ಟಿದ್ದರು ಎಂದರು.

ಡಾ.ಡಿ.ಎನ್.ಕೃಷ್ಣೇಗೌಡ ಅಮೂಲ್ ಏಜೆನ್ಸಿದಾರ

ಅಮೂಲ್ ಉತ್ಪನ್ನಗಳ ರಾಜ್ಯದಲ್ಲಿ ಮಾರಾಟ ಮಾಡಲು ಏಜೆನ್ಸಿಯನ್ನು ಡಾ.ಡಿ.ಎನ್.ಕೃಷ್ಣೇಗೌಡ ಎಂಬುವರು ಪಡೆದುಕೊಂಡಿದ್ದಾರೆ. ಇವರು ಕೆಎಂಎಫ್‌ನ ವಿವಿಧ ಹುದ್ದೆಯಲ್ಲಿ ಕೆಲಸ ನಿರ್ವಹಿಸಿ ಎಂಡಿಯಾಗಿ ನಂತರ ನಿವೃತ್ತಿಯಾಗಿದ್ದಾರೆ.

ವ್ಯಾಪಾರದ ದೃಷ್ಟಿಯಿಂದ ಅವರು ಪಡೆದುಕೊಂಡಿದ್ದರೂ, ನಮ್ಮವರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಜವರೇಗೌಡ ಕಿವಿಮಾತು ಹೇಳಿದರು.

ಈಗಾಗಲೇ ಕರ್ನಾಟಕದ ಹಲವು ಬ್ಯಾಂಕ್‌ಗಳು ಗುಜರಾತ್ ಪಾಲಾಗಿದೆ. ಇದೀಗ ಕೆಎಂಎಫ್ ಮೇಲೆಯೂ ವಕ್ರದೃಷ್ಟಿ ಬಿದ್ದಿದೆ. ಈ ಕಾರಣದಿಂದಲೇ ಗಧಾಪ್ರಹಾರ ನಡೆಸಲು ಆರಂಭಿಸಿದ್ದಾರೆ. ಸಹಕಾರಿ ತತ್ವಗಳ ಬಗ್ಗೆ ಬಿಜೆಪಿಗರಿಗೆ ಒಂದಿಷ್ಟು ಕಾಳಜಿ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹಾಗೂ ತಮ್ಮ ಪ್ರಭಾವ ಬಳಸಿ ಇಷ್ಟಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಒಂದು ವೇಳೆ ಅನ್ಯಾಯವಾದರೆ ರಾಜ್ಯದ ರೈತರು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಹಕಾರಿ ತತ್ವದಂತೆ ಎಲ್ಲರೂ ಕೆಲಸ ನಿರ್ವಹಿಸಬೇಕು. ಪ್ರಮುಖವಾಗಿ ರಾಜ್ಯದಲ್ಲಿ ಅಮೂಲ್ ಉತ್ಪನ್ನಗಳನ್ನು ಚಿಲ್ಲರೆ ವ್ಯಾಪಾರ ವಹಿವಾಟು ಮಾಡುವುದನ್ನು ನಿಲ್ಲಿಸಬೇಕು. ಜತೆಗೆ ಅಮೂಲ್ ಉತ್ಪನ್ನ ಖರೀದಿಸದಂತೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಮನ್‌ಮುಲ್ ಮಾಜಿ ಅಧ್ಯಕ್ಷ ವೈರಮುಡಿಗೌಡ ಮಾತನಾಡಿ, ಮನ್‌ಮುಲ್ ಇತ್ತೀಚಿನ ವರ್ಷದಲ್ಲಿ ಭ್ರಷ್ಟಾಚಾರದ ಕೂಪವಾಗಿದೆ. ನೌಕರರ ಸಂಖ್ಯೆ ಹಾಗೂ ವೇತನದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಮೆಗಾ ಡೇರಿ ಪ್ರಾರಂಭಿಸಲಾಯಿತು. ಆದರೆ ಕೋಟ್ಯಂತರ ರೂ. ಲಂಚ ಪಡೆದು 150ಕ್ಕೂ ಹೆಚ್ಚು ಹುದ್ದೆಗಳನ್ನು ಇತ್ತೀಚೆಗೆ ಭರ್ತಿ ಮಾಡಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮನ್‌ಮುಲ್ ಮಾಜಿ ಅಧ್ಯಕ್ಷರಾದ ಎಚ್.ಟಿ.ಚಂದ್ರು, ಸಿ.ತಮ್ಮಯ್ಯ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!