Friday, November 20, 2026

ಪ್ರಾಯೋಗಿಕ ಆವೃತ್ತಿ

ಪಕ್ಷ ನಿಷ್ಠೆ ಇಲ್ಲದ ರಮೇಶ್ ಬಾಬು ಬಂಡಿಸಿದ್ದೇಗೌಡ : ರವೀಂದ್ರ ಶ್ರೀಕಂಠಯ್ಯ

”ಕಾಂಗ್ರೆಸ್ ಪಕ್ಷದ ಚಿಹ್ನೆ ಮುಚ್ಚಿ ಬಾಬಣ್ಣನಿಗೆ ವೋಟು ಹಾಕಿ” ಎಂದು ಕೇಳುವ ಮೂಲಕ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತನಗೆ ಪಕ್ಷ ನಿಷ್ಠೆ ಇಲ್ಲ ಎಂಬುದನ್ನು ತೋರಿಸಿಕೊಂಡಿದ್ದಾರೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಕ್ಷ ಬಿಟ್ಟು ಮತಯಾಚಿಸುವ ನೀವು ರಾಜಕಾರಣ ಮಾಡಲು ಸಾಧ್ಯವಿಲ್ಲ, ಕ್ಷೇತ್ರದ ಸ್ವಾಭಿಮಾನಿ ಜನರ ತೀರ್ಮಾನವೇ ಅಂತಿಮವಾಗಿದ್ದು, ನಿಮಗೆ ಕಾಂಗ್ರೆಸ್ ನಿಷ್ಠರು ಪಾಠ ಕಲಿಸಲಿದ್ದಾರೆ. ಇಬ್ಬರೂ  ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾಗೋಣ. ಆಗಲೂ ಮತದಾರರು ಯಾರನ್ನು ಕೈ ಹಿಡಿಯುತ್ತಾರೆ ನೋಡೋಣವೇ ? ಎಂದು ಸವಾಲು ಹಾಕಿದರು.

ಕ್ಷೇತ್ರದ ಅಭಿವೃದ್ದಿಗೆ ತಡೆಯಾಜ್ಞೆ ತರುವುದೇ ನಿಮ್ಮ ಕಾಯಕವಾಗಿದೆ. ಸರ್ಕಾರಿ ಶಾಲೆ ಜಾಗದಲ್ಲಿ ನಿಮ್ಮ ನಿವಾಸಕ್ಕೆ ರಸ್ತೆ, ಅರಕೆರೆ-ಮೈಸೂರು ರಸ್ತೆ ಅಭಿವೃದ್ದಿ ಅಡ್ಡಿಪಡಿಸುವುದು, ಶ್ರೀರಂಗಪಟ್ಟಣದ ರಸ್ತೆ ಅಭಿವೃದ್ದಿಗೆ ಅಡ್ಡಿಪಡಿಸುವುದು, ರಸ್ತೆ ಕಾಮಗಾರಿಗೆ ಮುಂದಾಗಿರುವ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸುವುದು ನಿಮ್ಮಿಂದ ಮಾತ್ರ ಸಾಧ್ಯ ಇಂತಹವರು ಕ್ಷೇತ್ರದ ಜನನಾಯಕರಾಗಲು ನಾಯಕಲ್ಲ ಎಂದು ಹರಿಹಾಯ್ದರು.

ಚೊಚ್ಚಲ ಅವಧಿಯಲ್ಲೆ ವಿಧಾನಸಭೆಯ ಸದಸದಲ್ಲಿ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಶ್ರೀರಂಗಪಟ್ಟಣ ಕ್ಷೇತ್ರದ ಮತದಾರರ ಗೌರವವನ್ನು ಎತ್ತಿ ಹಿಡಿದಿದ್ದೇನೆ. ನೀವು ಶಾಸಕರಾಗಿದ್ದಾಗ ಮಾತನಾಡಿರುವ ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಪಂಚರತ್ನ ಯೋಜನೆಯಿಂದ ವೃದ್ದರು, ಅಂಗವಿಕಲರು, ವಿಧವೆಯರ ಬದುಕು ಹಸನಾಗಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ನಾಂದಿಯಾಗಲಿದ್ದು, ಜೆಡಿಎಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.

ರಮೇಶ್ ಬಾಬು ಅವರ ಕುಟುಂಬ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗಳ ಬಳಿ ಹಲ್ಲುಗಿಂಜಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಜಿ ಕ್ಯಾಟಗರಿ ನಿವೇಶನಗಳನ್ನು ಪಡೆಯಲು ಶಾಸಕರಾಗಬೇಕೇ ? ಜೀವನಪೂರ್ತಿ ಮದುವೆ, ಮುಂಜಿ, ತಿಥಿ ಕಾರ್ಯಗಳಿಗೆ ಭೇಟಿ ನೀಡಿ ಮತದಾರರ ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆಯಿಂದ ಮಾತನಾಡುವುದು, ಕೆನ್ನೆ ಸವರುವುದು, ಊಟ ಮಾಡುತ್ತಿರುವ ವ್ಯಕ್ತಿಯ ಎಲೆಯಿಂದ ಅರ್ಧ ಲಾಡು ಮುರಿದು ತಿನ್ನುವ ನಾಟಕವಾಡಿ ಕ್ಷೇತ್ರದ ಅಭಿವೃದ್ಧಿಯನ್ನು ಮರಮಾಚಿರುವ ನಿಮ್ಮಂತಹವರು ಯಾವ ಪುರುಷಾರ್ಥಕ್ಕೆ ಶಾಸಕರಾಗಿ ಆಯ್ಕೆಯಾಗಬೇಕೆಂದು ಪ್ರಶ್ನಿಸಿದರು.

ನಾನು ಪರಿಶ್ರಮದ ರಾಜಕಾರಣಕ್ಕೆ ಕಳಂಕ ಬಾರದಂತೆ ಕಾರ್ಯನಿರ್ವಹಿಸಿ 5 ವರ್ಷದ ಅಧಿಕಾರದಲ್ಲಿ ಒಂದೂರಿಗೆ ಹೆಚ್ಚು ಅಥವಾ ಕಡಿಮೆ ಎಂಬಂತೆ ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ನನ್ನ ಕೈಲಾದ ಅಭಿವೃದ್ದಿ ಮಾಡಿದ್ದೇನೆ, ಆದರೆ ನಿಮ್ಮಿಂದ ಕ್ಷೇತ್ರ ವ್ಯಾಪ್ತಿಯ ಯಾವೊಂದು ರಸ್ತೆಯನ್ನು ದುರಸ್ತಿ ಮಾಡಿಸಲು ಸಾಧ್ಯವಾಗಲಿಲ್ಲವೇಕೆ ಎಂದು ಛೇಡಿಸಿದರು.

ನನ್ನ ಅಧಿಕಾರಾವಧಿಯಲ್ಲಿ ಶ್ರೀರಂಗಪಟ್ಟಣದ ರಂಗನಾಥ ಕಾಲೋನಿ, ತಾಲ್ಲೂಕಿನ ಅಲ್ಲಾಪಟ್ಟಣ, ಬೆಳಗೊಳ ವ್ಯಾಪ್ತಿಯ ಕೆಳಮಂಟಿ ಹಾಗೂ ಕೆ.ಆರ್.ಎಸ್ ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ ನೀಡಲಾಗಿದೆ. ಇದು ನಿಮ್ಮಿಂದ ಏಕೆ ಸಾಧ್ಯವಾಗಲಿಲ್ಲ. ನಿಮ್ಮ ಕುಟುಂಬ ಅಧಿಕಾರದಲ್ಲಿದ್ದಾಗ ದೇವೇಗೌಡರು, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿರಲಿಲ್ಲವೇ ? ಎಂದು ತಿರುಗೇಟು ನೀಡಿದರು.

ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸುಗಳು ದಾಖಲಾಗಿಲ್ಲ, ನಮ್ಮೊಂದಿಗಿದ್ದ ಕೆಲವರನ್ನು ನೀವು ಖರೀದಿಸಿ ರವೀಂದ್ರ ಸ್ಪಂದಿಸಿಲ್ಲ ಎಂದು ಹೇಳಿಸುತ್ತೀರಿ, ಇಂತಹವರೇ ವಾರದ ಹಿಂದೆ ನಮ್ಮ ಜೀವಮಾನದಲ್ಲಿ ಇಂತಹ ಶಾಸಕರ ಅಭಿವೃದ್ದಿಯನ್ನು ಎಂದು ಕಂಡಿರಲಿಲ್ಲ ಎಂದು ಹೇಳಿಕೆ ನೀಡಿ, ಈಗ ಸರಿಯಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಲೋಕಾಯುಕ್ತ ಸಂಸ್ಥೆಗೆ ನೀವು ಸಲ್ಲಿಸಿರುವ ಅಫಿಡವಿಡ್ ನಲ್ಲಿ ಇರುವ ನಿಮ್ಮ ಸಂಪತ್ತಿನ ಮೌಲ್ಯವನ್ನು ಪತ್ರಿಕೆಗಳಿಗೆ ಬಹಿರಂಗ ಪಡಿಸಿ, ಆ ಮೂಲಕ ನಿಮ್ಮ ನೈಜ್ಯತೆ ಜನರಿಗೆ ಅರಿವಾಗಲಿ, ಜಗತ್ತಿನಲ್ಲಿ ಎಲ್ಲ ಕಷ್ಟಗಳು ನನ್ನೊಬ್ಬನಿಗೆ ಬರುತ್ತವೆ ಎಂದು ಕಣ್ಣೀರು ಹಾಕುವ ಪ್ರವೃತ್ತಿ ನನ್ನದಲ್ಲ ಎಂದು ತಿರುಗೇಟು ನೀಡಿದರು.

35 ವರ್ಷಗಳ ಕಾಲ ನಿಮ್ಮ ಕುಟುಂಬಕ್ಕೆ ಅಧಿಕಾರ ನೀಡದ ಜೆಡಿಎಸ್ ಪಕ್ಷ ಹಾಗೂ ಕಾರ್ಯಕರ್ತರನ್ನು ತಬ್ಬಲಿಯಾಗಿಸಿ ಪಕ್ಷದ ವರಿಷ್ಠರಿಗೆ ವಂಚಿಸಿ ಹಣದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ರಮೇಶ್ ಬಾಬು ಮಾರಾಟವಾಗಿದ್ದಾರೆಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನೀವು ಉತ್ತರಿಸಬೇಕೆಂದು ಆಗ್ರಹಿಸಿದರು.

ಎಸ್.ಎಂ.ಕೃಷ್ಣ ಅವರನ್ನು ಅವಮಾನಿಸಿದ ಘಟನೆಯಿಂದ ಮನನೊಂದು ನಾನು ಗೌರವದಿಂದ ಕಾಂಗ್ರೆಸ್ ಪಕ್ಷ ತೇಜಿಸಿದ್ದೇನೆ, ಆದರೆ ನೀವು ಜೆಡಿಎಸ್ ನಲ್ಲಿ ಅಪಾರ ರಾಜಕೀಯ ಲಾಭ ಪಡೆದು ದ್ರೋಹವೆಸಗಿ ಕಾಂಗ್ರೆಸ್ ಪಕ್ಷಕ್ಕೆ ಬಂದು ದರಿದ್ರ ಪಕ್ಷ, ಪಕ್ಷದ ಚಿಹ್ನೆ ಮುಚ್ಚಿ ಬಾಬಣ್ಣನಿಗೆ ಮತ ಹಾಕಿ ಎಂದು ಪ್ರಚಾರ ನಡೆಸುತ್ತೀರಿ, ಸ್ವಾಭಿಮಾನಿ ಕಾಂಗ್ರೆಸಿಗರು ನಿಮಗೆ ಮತ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಎ.ಎಚ್.ನಾರಾಯಣ, ಮರೀಗೌಡ, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಪೈಲ್ವಾನ್ ಮುಕುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ