ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು 132ನೇ ಅಂಬೇಡ್ಕರ್ ಜಯಂತಿಯ ಅಂಗವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್ ಗಣಿಗ ಬೆಂಬಲಿಗರೊಂದಿಗೆ ಆಗಮಿಸಿ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರೆ, ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರ ಬೆಂಬಲಿಗರೊಂದಿಗೆ ಆಗಮಿಸಿ ಪುಷ್ಪಮಾಲೆ ಅರ್ಪಿಸಿ ನಮನ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಅವರು ಕೂಡ ಬೆಂಬಲಿಗರೊಂದಿಗೆ ಆಗಮಿಸಿ ಮಾಲಾರ್ಪಣೆ ಮಾಡಿದರು.
ಪ್ರಸ್ತುತ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯುತ್ತಿದ್ದು, ಅಂಬೇಡ್ಕರ್ ಜಯಂತಿ ಅಂಗವಾಗಿ ಇಂದು ಸರ್ಕಾರಿ ರಜೆ ಇದ್ದಿದ್ದರಿಂದ ಮೂವರು ಅಭ್ಯರ್ಥಿಗಳು ಅಂಬೇಡ್ಕರ್ ಗೆ ನಮನ ಸಲ್ಲಿಸಿ, ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಆಯಾಯ ಪಕ್ಷದ ಅಭ್ಯರ್ಥಿಗಳ ಬೆಂಬಲಿಗರ ಆಗಮಿಸಿ ತಮ್ಮ ನಾಯಕರಿಗೆ ಸಾಥ್ ನೀಡಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಮಚಂದ್ರು, ರಾಜೀವ್, ಮಹೇಶ್ ಮತ್ತಿತರರಿದ್ದರು.