Saturday, May 18, 2024

ಪ್ರಾಯೋಗಿಕ ಆವೃತ್ತಿ

ಗುಜರಾತ್‌ | ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳನ್ನೇ ಕತ್ತರಿಸಿದ್ರು

ಕ್ರಿಕೆಟ್ ಆಡುತ್ತಿದ್ದಾಗ ದಲಿತ ಬಾಲಕ ಚೆಂಡನ್ನು ಮುಟ್ಟಿದ ವಿಚಾರವಾಗಿ ಜಗಳವಾಗಿ ದಲಿತ ವ್ಯಕ್ತಿಯೊಬ್ಬರ ಹೆಬ್ಬರಳನ್ನೇ ಕತ್ತರಿಸಿರುವ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಆ ವೇಳೆ ದಲಿತ ಬಾಲಕ ಕ್ರಿಕೆಟ್ ಬಾಲನ್ನು ಎತ್ತಿಕೊಟ್ಟಿದ್ದನು. ಈ ವಿಚಾರವಾಗಿ ಜಗಳವಾಗಿ ಬಾಲಕನ ಚಿಕ್ಕಪ್ಪನ ಮೇಲೆ ಸವರ್ಣೀಯ ಜಾತಿಯ ಗುಂಪು ಹಲ್ಲೆ ನಡೆಸಿದೆ. ನಂತರ ಅವರ ಹೆಬ್ಬರಳನ್ನು ಕತ್ತರಿಸಿ ವಿಕೃತಿ ಮೆರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

“ಗ್ರಾಮದ ಶಾಲೆಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾಗ ಚೆಂಡನ್ನು ಎತ್ತಿಕೊಂಡ ಬಾಲಕನಿಗೆ ಜಾತಿವಾದಿಗಳು ಬೆದರಿಕೆ ಹಾಕಿದ್ದರು. ಕೋಪಗೊಂಡು ಪ್ರತಿಕ್ರಿಯೆ ನೀಡಿದ್ದರು” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಹಾಗೂ ‘ಎಸ್‌ಸಿ ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ಯ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಮತ್ತೊಂದು ಘಟನೆ

ಉತ್ತಮ ಬಟ್ಟೆ ಮತ್ತು ಕೂಲಿಂಗ್ ಗ್ಲಾಸ್‌ ಧರಿಸಿದ ಕಾರಣಕ್ಕಾಗಿ ಸವರ್ಣೀಯ ಜಾತಿಯ ಗುಂಪೊಂದು ದಲಿತ ವ್ಯಕ್ತಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದ ಘಟನೆ ಗುಜರಾತ್‌ನ ಬನಸ್ಕಾಂತ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದಿತ್ತು.

ಸಂತ್ರಸ್ತ ವ್ಯಕ್ತಿ ಜಿಗರ್ ಶೆಖಾಲಿಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿತ್ತು. ಒಳ್ಳೆಯ ಬಟ್ಟೆ ಮತ್ತು ಕನ್ನಡಕ ಧರಿಸಿದ್ದಕ್ಕಾಗಿ ಅಸಮಾಧಾನಗೊಂಡ ಸವರ್ಣೀಯ ಗುಂಪು, ಜಿಗರ್‌ ಮತ್ತು ಆತನ ತಾಯಿಗೆ ಹೊಡೆದಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!