ವರದಿ : ಪ್ರಭು ವಿ.ಎಸ್.
ಕಾರ್ಯಕರ್ತರ, ಬೆಂಬಲಿಗರ ಮತ್ತು ಅಭಿಮಾನಿಗಳ ತೀರ್ಮಾನಕ್ಕೆ ತಾವು ಬದ್ಧವಾಗಿದ್ದು ಮತ್ತೊಮ್ಮೆ ವಿಮರ್ಶೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಕೆಪಿಸಿಸಿ ಸದಸ್ಯ ಎಸ್. ಗುರುಚರಣ್ ತಿಳಿಸಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಎಸ್.ಸಿ. ಮಲ್ಲಯ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಬೆಂಬಲಿಗರ ಸಭೆ ವೇಳೆ ಮಾತನಾಡಿದ ಅವರು ಕೆಲವು ಕಾಣದ ಕೈಗಳು ತಮಗೆ ಟಿಕೆಟ್ ತಪ್ಪಿಸಿದ್ದು ನಮ್ಮ ಶಕ್ತಿ ಏನಿದೆ ಎಂಬುದನ್ನು ತೋರಿಸಬೇಕಾಗಿದ್ದು ಎರಡು ದಿನದಲ್ಲಿ ತಮ್ಮ ಕುಟುಂಬ ಹಾಗೂ ಮುಖಂಡರೊಟ್ಟಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿರುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವ ಕಾರಣಕ್ಕೆ ಟಿಕೆಟ್ ನೀಡಿಲ್ಲವೆಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದು ಅವರ ಬಳಿ ಯಾವುದೇ ಉತ್ತರ ಇಲ್ಲದಂತಾಗಿದ್ದು 224 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಿದ ಡಿ.ಕೆ. ಶಿವಕುಮಾರ್ ರವರಿಗೆ ಕಾಣದ ಕೈಗಳು ವಿರೋಧವಾಗಿ ಕೆಲಸ ನಿರ್ವಹಿಸಿದ್ದು ತಮಗೆ ಟಿಕೆಟ್ ತಪ್ಪಿಸಲು ರಾಜ್ಯ ನಾಯಕರೊಬ್ಬರು ಕಾರಣರಾಗಿದ್ದಾರೆಂದರು.
ಅಪಪ್ರಚಾರ :
ಎಸ್. ಗುರುಚರಣ್ ರವರ ಮನೆಗೆ ಸೂಟ್ಕೇಸ್ ಹೋಗಿದೆ ಎಂಬುದರ ಬಗ್ಗೆ ಕ್ಷೇತ್ರದಾದ್ಯಂತ ಕೆಲ ವ್ಯಕ್ತಿಗಳು ಅಪಪ್ರಚಾರ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ತಾವು ಹುಟ್ಟಿದಾಗಿನಿಂದಲೂ ಜಮೀನ್ದಾರ ಕುಟುಂಬವಾಗಿದ್ದು ನಾನು ಇವಾಗ ಹಣ ನೋಡ್ತಿಲ್ಲ, ಹುಟ್ಟಿದಾಗಿನಿಂದಲೂ ನೋಡ್ತಾಯಿದ್ದು ಹಣ ತೆಗೆದುಕೊಂಡು ರಾಜಕೀಯ ಮಾಡುವ ಮನೆತನ ನಮ್ಮದಲ್ಲವೆಂದು ವಿರೋಧಿಗಳ ವಿರುದ್ಧ ಹರಿಹಾಯ್ದರು.
ಕೆಲ ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಯಾರೊಬ್ಬರೂ ದೃತಿಗೆಡದಂತೆ ಮನವಿ ಮಾಡಿದ ಅವರು ನಿಷ್ಠಾವಂತ ಕಾರ್ಯಕರ್ತರೊಬ್ಬರಿಗೆ ಪಕ್ಷ ಟಿಕೆಟ್ ನೀಡಿದರೆ ತಾವು ಸಂತೋಷದಿಂದ ಮತ್ತು ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದುದ್ದಾಗಿ ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದಲೂ ಪಕ್ಷ ಸಂಘಟಿಸಿ ಕಾರ್ಯಕರ್ತರ ಕಷ್ಟ, ಸುಖಗಳಿಗೆ ಸ್ಪಂಧಿಸಿ ಕ್ಷೇತ್ರದಾದ್ಯಂತ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ನನ್ನಂತವರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಪಕ್ಷದ ವಿರುದ್ಧ ಹರಿಹಾಯ್ದರಲ್ಲದೇ ಕೇವಲ ಆರು ತಿಂಗಳಲ್ಲಿ ಕ್ಷೇತ್ರಕ್ಕೆ ಬಂದ ಬೇರೊಬ್ಬರಿಗೆ ಟಿಕೆಟ್ ನೀಡಿರುವ ಬಗ್ಗೆ ಕಿಡಿಕಾರಿದರು.

ಪಕ್ಷ ಸಂಘಟನೆ :
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ ಮಾತನಾಡಿ ಜಿಲ್ಲೆಯಲ್ಲಿ ಭಾರತ್ ಜೋಡೋ, ಐಕ್ಯತಾ ಯಾತ್ರೆ, ಮನೆ ಮನೆಗೆ ಗ್ಯಾರೆಂಟಿ ಕಾರ್ಡ್ ಇನ್ನಿತರೆ ಕಾರ್ಯಚಟುವಟಿಕೆಗಳನ್ನು ಕೈಗೊಂಡು ಪಕ್ಷ ಸಂಘಟನೆ ಮಾಡಿರುವ ಎಸ್. ಗುರುಚರಣ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಬಗ್ಗೆ ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಕೆಲ ಕಾರ್ಯಕರ್ತರು ತಮ್ಮ ಶಕ್ತಿ ಏನೆಂಬುದನ್ನು ತೋರಿಸಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೇ ಕೆಲ ಕಾರ್ಯಕರ್ತರು ತಾವು ಕೈಗೊಳ್ಳುವ ತಿರ್ಮಾನಕ್ಕೆ ಬದ್ಧವಾಗಿರುವುದಾಗಿ ಸಭೆ ವೇಳೆ ತಿಳಿಸಿದರು.
ರಾಜೀನಾಮೆ :
ಪುರಸಭೆ ಸದಸ್ಯೆ ಕೋಕಿಲಾಅರುಣ್ ತಮ್ಮ ಪುರಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಲಿಖಿತವಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದರಲ್ಲದೇ ಮೇ.17ರಂದು ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಸಭೆ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಅಜ್ಜಹಳ್ಳಿ ರಾಮಕೃಷ್ಣ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಪ್ರತಿಯೊಬ್ಬರು ಬದ್ಧರಾಗುವ ಜತೆಗೆ ಮುಂಬರುವ ದಿನಗಳಲ್ಲಿ ಯುವ ಮುಖಂಡ ಎಸ್. ಗುರುಚರಣ್ ಅವರಿಗೆ ಪಕ್ಷ ನಿರೀಕ್ಷಿತ ಜವಾಬ್ದಾರಿ ನೀಡುವ ಆಶಯವಿದ್ದು ದುಡುಕಿನ ಕ್ರಮ ಬದಿಗಿಟ್ಟು ಪಕ್ಷ ಬೆಂಬಲಿಸುವಂತೆ ತಪ್ಪಿದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವೆಂಬ ಉದ್ದೇಶದೊಡನೆ ತಾವುಗಳು ವರಿಷ್ಠರ ತೀರ್ಮಾನಕ್ಕೆ ಬದ್ಧರಿರುವುದಾಗಿ ಸ್ಪಷ್ಟಪಡಿಸಿದರು.
ಸಭೆ ವೇಳೆ ಪುರಸಭೆ ಸದಸ್ಯೆ ಪ್ರಿಯಾಂಕ ಅಪ್ಪುಗೌಡ, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅದ್ಯಕ್ಷ ದೇಶಹಳ್ಳಿ ಆರ್. ಮೋಹನ್ಕುಮಾರ್, ಯುವ ಕಾಂಗ್ರೆಸ್ ಮುಖಂಡ ಮಣಿಗೆರೆ ರಾಮಚಂದ್ರು, ಮಾಲಗಾರನಹಳ್ಳಿ ಆನಂದ್, ಪ್ರೊ. ಡಾ. ಆನಂದ್, ಪುರುಷೋತ್ತಮ್, ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆ ವೇಳೆ ಸ್ಥಳೀಯ ಮುಖಂಡರಾದ ಸಿದ್ದರಾಮು, ಎಂ. ಹೊಂಬಯ್ಯ, ಕೆ.ಟಿ. ರಾಜಣ್ಣ, ಜಯಶಂಕರ್, ಬಲರಾಮು, ಅಪ್ಪುಗೌಡ, ಯೂತ್ ಘಟಕದ ಅಧ್ಯಕ್ಷ ಕಿರಣ್ಕುಮಾರ್ ಇತರರಿದ್ದರು.




