Friday, November 20, 2026

ಪ್ರಾಯೋಗಿಕ ಆವೃತ್ತಿ

ಚುನಾವಣಾ ಅಕ್ರಮ ತಡೆಗೆ ತಗ್ಗಹಳ್ಳಿ ವೆಂಕಟೇಶ್ ಆಗ್ರಹ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಅಕ್ರಮ ಹಣ ಹಂಚಿ ಚುನಾವಣಾ ವ್ಯವಸ್ಥೆಯನ್ನು ತಮ್ಮತ್ತ ಸೆಳೆಯಲು ಹೊಂಚು ಹಾಕುತ್ತಿದ್ದು, ಇದನ್ನು ತಡೆಗಟ್ಟಲು ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಕ್ಷೇತರ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಬಲ ಪಕ್ಷಗಳ ಅಭ್ಯರ್ಥಿಗಳು ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಈ ಅಕ್ರಮ ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮೂರು ಪ್ರಬಲ ಅಭ್ಯರ್ಥಿಗಳು ಬೇನಾಮಿ ಹಣ ಹಂಚಿ ಚುನಾವಣೆಯಲ್ಲಿ ಜಯಗಳಿಸಲು ಪೈಪೋಟಿಗಿಳಿದಿದ್ದಾರೆ. ಇವರ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಿರುವ ನಾನು ಹಣ ಬಲವೋ ಜನ ಬಲವೋ ಎಂಬ ಘೋಷ ವಾಕ್ಯದಂತೆ ‘ವೋಟು ನೀಡಿ – ನೋಟು ಕೊಡಿ’ ಎಂದು ಮತದಾರನ ಮನೆಯಂಗಳಕ್ಕೆ ತೆರಳುತ್ತಿದ್ದು, ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿದ್ದರೂ ನಾನು ಕಣದಲ್ಲುಳಿಯುವ ಮೂಲಕ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಿದ್ದೇನೆ, ನನ್ನ ವಿರುದ್ಧ ಸುಳ್ಳು ಪ್ರಚಾರಕ್ಕೆ ಮುಂದಾಗುವವರು ರಣ ಹೇಡಿಗಳು. ಅವರಿಗೆ ಕ್ಷೇತ್ರದ ಜನ ಬುದ್ದಿ ಕಲಿಸಲಿದ್ದಾರೆಂದರು.

ಕ್ಷೇತ್ರದ ಮತದಾರ ಬಂಧುಗಳು ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆ ಮಾಡಿದ ವಿಶ್ವಾಸಕ್ಕೆ ದ್ರೋಹ ಬಗೆದು ಚುನಾಯಿತ ಪಕ್ಷಕ್ಕೆ ಅನ್ಯಾಯವೆಸಗಿ ಹಣಕ್ಕೆ ಪವಿತ್ರ ಮತವನ್ನು ಮಾರಿಕೊಂಡು, ಕ್ಷೇತ್ರಕ್ಕೆ ಕಳಂಕ ತಂದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪ್ರಜಾಪ್ರಭುತ್ವಕ್ಕೆ ಮಾರಕವಾದ ವ್ಯಕ್ತಿ ಎಂದು ತಗ್ಗಹಳ್ಳಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ಮೊಸಳೆ ಕಣ್ಣೀರು ಸುರಿಸಿ, ಮತಯಾಚಿಸುತ್ತಿರುವ ರಮೇಶ್ ಬಾಬು ವಿರುದ್ಧ ಸಿಬಿಐ ಪ್ರಕರಣದ ವಿಚಾರಣೆ ಮುಕ್ತಾಯದ ಹಂತದಲ್ಲಿದ್ದು, ಸದ್ಯದಲ್ಲೇ ಜೈಲು ಪಾಲಾಗಲಿದ್ದಾರೆ. ಇಂತಹವರಿಗೆ ಮತ ನೀಡಬೇಕೇ ? ಎಂಬ ಚರ್ಚೆಗಳು ಕ್ಷೇತ್ರದಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅವಕಾಶವಾದಿ ರಾಜಕಾರಣಿಯಾಗಿದ್ದು, ಅಂಬರೀಶ್ ಅವರು ಕ್ಷೇತ್ರದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಯಾರೊಂದಿಗೆ ರವೀಂದ್ರ ಸಖ್ಯ ಬೆಳೆಸಿದ್ದರು ಎಂಬುದು ಕ್ಷೇತ್ರದ ಜನರಿಗೆ ತಿಳಿದಿದೆ ಎಂದರು.

ಹಾಲಿ ಮತ್ತು ಮಾಜಿ ಶಾಸಕರು ಭ್ರಷ್ಟಾಚಾರಿಗಳಾಗಿದ್ದು, ಇವರನ್ನು ದೂರವಿಟ್ಟು ಅನ್ಯರನ್ನು ಬೆಂಬಲಿಸುವ ಇರಾದೆ ಕ್ಷೇತ್ರದ ಜನರಿಗಿದ್ದು, ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಗೋಷ್ಠಿಯಲ್ಲಿ ಅರಕೆರೆ  ಸಿದ್ದರಾಜು, ಪಾಲಹಳ್ಳಿ ಯೋಗೇಶ್, ಪುಟ್ಟೇಗೌಡ, ಚೀರನಹಳ್ಳಿ ಉಮೇಶ್, ಮಂಗಲ ಲಂಕೇಶ್, ನಗುವಿನಹಳ್ಳಿ ಹಿತೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ