Friday, November 20, 2026

ಪ್ರಾಯೋಗಿಕ ಆವೃತ್ತಿ

ಬಸವಣ್ಣನ ಆದರ್ಶ ಪಾಲಿಸುವವರಿಗೆ ಲಿಂಗಾಯತರ ಬೆಂಬಲ – ಡಾ.ಚನ್ನಬಸವಾನಂದ ಸ್ವಾಮೀಜಿ

ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತರು ಯಾವುದೇ ಪಕ್ಷದ ಅಡಿಯಾಳುಗಳಲ್ಲ. ಸಮುದಾಯದ ಮತಗಳು ಮಾರಾಟಕ್ಕಿಲ್ಲ, ಆದರೆ ಬಸವಣ್ಣನ ಆದರ್ಶ ಪಾಲಿಸುವವರಿಗೆ ಲಿಂಗಾಯತರ ಬೆಂಬಲ ದೊರೆಯಲಿದೆ ಶ್ರೀಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಮಂಡ್ಯ ನಗರದ ಹಿಂದಿ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ, ಲಿಂಗಾಯತ ಮಹಾಸಭಾ ಟ್ರಸ್ಟ್ ಉದ್ಘಾಟನೆ ಹಾಗೂ ನೂರು ಮಂದಿ ಸಾಧಕರಿಗೆ `ಬಸವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂಬ ಹೋರಾಟ ಇನ್ನೂ ಜೀವಂತವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದ ಸ್ವಾಮೀಜಿ, ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಬೇಕು ಎಂದು ಸಲಹೆ ನೀಡಿದರು.

ಬಸವಾದಿ ಶರಣರ ಪರಂಪರೆಯಲ್ಲಿ ಲಿಂಗಾಯತ, ವೀರಶೈವ ಎಂಬುದು ಬೇರೆ ಬೇರೆಯಲ್ಲ. ಲಿಂಗವನ್ನು ಆಯತ ಮಾಡಿಕೊಂಡು ಪೂಜಿಸುವವರೆಲ್ಲರೂ ಲಿಂಗಾಯತರೇ. ಬಣಜಿಗ ಲಿಂಗಾಯಿತ, ಶೆಟ್ಟಿ ಲಿಂಗಾಯಿತ, ಪಂಚಮಶಾಲಿ ಮುಂತಾಗಿ ಏನೆಲ್ಲ ಹೆಸರಿನಿಂದ ಕರೆದರೂ ಒಟ್ಟಾರೆ ನಾವು ಲಿಂಗಾಯತರು ಎಂಬುದನ್ನು ಅರಿಯಬೇಕೆಂದು ಹೇಳಿದರು.

ಮುನ್ನೂರು ವರ್ಷ ನಮ್ಮನ್ನಾಳಿದ ಬ್ರಿಟೀಷರು ತಮ್ಮ ಪಾರ್ಲಿಮೆಂಟ್ ಮುಂಭಾಗ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪಿಸಿದ್ದಾರೆ. ಎಂದರೆ ವಿಶ್ವದಲ್ಲೇ ಪ್ರಥಮ ಕಲ್ಯಾಣ ಸಂಸತ್ ಸ್ಥಾಪಿಸಿದ್ದ ವಿಶ್ವಗುರು ಬಸವಣ್ಣ ನವರನ್ನು ಬ್ರಿಟೀಷರು ಅರ್ಥ ಮಾಡಿಕೊಂಡಷ್ಟು ನಮ್ಮ ದೇಶದ ಜನರೇ ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ. ಲಿಂಗಾಯತ ಸಮಾಜ ಆಗ್ರಹಿಸದಿದ್ದರೂ, ಭಾರತ ಸರ್ಕಾರ ಕೇಳದಿದ್ದರೂ ಬ್ರಿಟೀಷರು ಬಸವಣ್ಣನ ಪ್ರತಿಮೆ ಸ್ಥಾಪಿಸಿ ಅಗ್ರಮಾನ್ಯ ಸ್ಥಾನ ಕಲ್ಪಿಸಿದ್ದಾರೆ. ಆದರೆ ನಮ್ಮ ನೆಲದಲ್ಲೇ ಬಸವೇಶ್ವರರ ಗುಡಿಗಳನ್ನು ಬಸವನಗುಡಿ ಎಂದೋ ಮತ್ತಿನ್ನೇನೋ ಹೆಸರಿನಲ್ಲಿ ಕರೆಯುತ್ತಿದ್ದಾರೆಂದು ವಿಷಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಶ್ರೀ ಕುಮಾರಸ್ವಾಮಿ, ಲಿಂಗಾಯತರದು ದೇವಾಲಯ ಸಂಸ್ಕೃತಿಯಲ್ಲ, ದೇಹಾಲಯದ ಸಂಸ್ಕೃತಿ ಉಳ್ಳವರು. ಉಳ್ಳವರು ದೇವಾಲಯವ ಮಾಡಿದರೆ ನಾನೇನು ಮಾಡಲಿ ಎನ್ನ ಕಾಲೇ ಕಂಬ ಎನ್ನ ಶಿರವೇ ಹೊನ್ನ ಕಳಶವಯ್ಯ ಎನ್ನುವ ಮೂಲಕ ಬಸವಣ್ಣನವರು ಭಕ್ತಿಪ್ರಿಯ ಕೂಡಲಸಂಗಮದೇವ ಎಂದಿದ್ದಾರೆ. ಹಾಗಾಗಿ ಬಸವಣ್ಣ ಓರ್ವ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದಾರೆ. ಹಾಗಾಗಿ ಲಿಂಗಾಯತ ಮಹಾಸಭಾ ಟ್ರಸ್ಟ್ನ ಮುಂದೆ ದೊಡ್ಡ ಜವಾಬ್ದಾರಿಯಿದೆ ಎಂದರು.

ಬಸವಮಾರ್ಗದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎಂಬ ಕಂದಾಚಾರಗಳು, ಮೂಢನಂಬಿಕೆಗಳಿಂದ ನಾವು ಹೊರಬರಬೇಕು. ನಮ್ಮ ತಂದೆ ತಾಯಿಯರನ್ನು ಗೌರವಿಸಬೇಕೆಂದು ಅಖಿಲ ಭಾರತ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಟ್ರಸ್ಟ್ ಕಾರ್ಯಾಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಲಿಂಗಾಯತರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ರಾಜಕಾರಣದಲ್ಲಿ ಸಮುದಾಯದ ಪ್ರಭಾವವಿದೆ. ಆದರೆ ಮಂಡ್ಯದಲ್ಲಿ ನಮ್ಮ ಸಮಾಜ ಇನ್ನೂ ಮುಂಚೂಣಿಗೆ ಬರಲಾಗಿಲ್ಲ. ಹಾಗಾಗಿ ಸಮುದಾಯವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಲಿಂಗಾಯತ ಮಹಾಸಭಾ ಟ್ರಸ್ಟನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದರಿನ ಉದ್ಯಾನದಲ್ಲಿ ಅಶ್ವಾರೂಢ ಬಸವೇಶ್ವರರ ವಿಗ್ರಹ ಸ್ಥಾಪಿಸಬೇಕು, ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಬಸವೇಶ್ವರರ ಭಾವಚಿತ್ರ ಅಳವಡಿಸಬೇಕು, ಎಲ್ಲ ತಾಲ್ಲೂಕಿನಲ್ಲೂ ಬಸವ ಭವನ ನಿರ್ಮಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ ಎಂದರು.

ಈ ವೇಳೆ `ಬಸವಮಾರ್ಗ’ ಕರಪತ್ರವನ್ನು ಕನ್ನಡ ಹೋರಾಟಗಾರ ಅಶೋಕ್ ಜಿ.ಲೋನಿ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಲಿಂಗಾಯತ ಮಹಾಸಭಾ ಟ್ರಸ್ಟ್ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಎಂ.ಬೆಟ್ಟಹಳ್ಳಿ, ಮಲ್ಲಿಕಾರ್ಜುನ್, ನಿಜಗುಣ, ವಿ.ಎಂ.ಮಹೇಂದ್ರ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ