ಕರ್ನಾಟಕದ ಜನರಿಗೆ ಬೇಕಿರುವುದು ಬಸವಣ್ಣ, ಕುವೆಂಪು ಅವರ ಆಶೀರ್ವಾದವೇ ಹೊರತು ಮೋದಿಯ ಆಶೀರ್ವಾದದಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದರು.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಹೆಳವರಹುಂಡಿ ಹೊರವಲಯದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಆಶೀರ್ವಾದ ಪಡೆಯಬೇಕಾದರೆ ಬಿಜೆಪಿಯನ್ನು ಬೆಂಬಲಿಸಬೇಕೆಂದು ಹೇಳಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ತನ್ನದೇಯಾದ ಸಂಸ್ಕೃತಿ ಹೊಂದಿದೆ. ಈ ರಾಜ್ಯವು ನಿಮ್ಮದೇ ಸಂಸ್ಕೃತಿ, ಹಿರಿಯರ ಚಿಂತನೆ, ಪರಿಶ್ರಮದಿಂದ ರಚನೆಯಾಗಿದೆ. ಇಂತಹ ನಾಡಿನಲ್ಲಿ ಭಷ್ಟರು ಆಡಳಿತ ನಡೆಸಿ, ಲೂಟಿ ಮಾಡುತ್ತಿದ್ದಾರೆ. ಕರ್ನಾಟಕದ 40% ಬಿಜೆಪಿ ಸರ್ಕಾರ ನಿರ್ಲಜ್ಜವಾಗಿ ಮತ್ತು ನಿರ್ದಯವಾಗಿ ನಿಮ್ಮನ್ನು ಲೂಟಿ ಮಾಡಿದೆ. ಭ್ರಷ್ಟಾಚಾರದಿಂದ ಗುತ್ತಿಗೆದಾರರ ಆತ್ಮಹತ್ಯೆ, ಪೊಲೀಸ್ ನೇಮಕಾತಿ ಹಗರಣಗಳು, ಹೀಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಕರ್ನಾಟಕದಿಂದ ಸುಮಾರು ₹1.5 ಲಕ್ಷ ಕೋಟಿ ಲೂಟಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.




