Friday, November 20, 2026

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಆಯ್ಕೆ ಮಾಡಿ : ಯೋಗಿ ಆದಿತ್ಯನಾಥ್

ಕೇಂದ್ರ ಮತ್ತು ರಾಜ್ಯದಲ್ಲಿ ಇರುವ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮತ್ತೊಂದು ಬಾರಿ ಬಹುಮತದಿಂದ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.

ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಬಿಜೆಪಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಇಲ್ಲಿಂದ ಹಣವನ್ನು ಕಳುಹಿಸಿ ಕೊಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ರಾಜ್ಯದ ಜನರ ಸುರಕ್ಷೆ, ಸಮೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದ್ದು,ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಸರ್ಕಾರದ ಗುರಿಯಾಗಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ಪರ್ವ ನಡೆಯುತ್ತಿದೆ. ದೇಶ ಸಾಕಷ್ಟು ಬದಲಾವಣೆ ಹೊಂದಿದೆ‌. ಮೋದಿಯವರ ಸಮರ್ಥ ನಾಯಕತ್ವದಿಂದ ಜಿ-20 ದೇಶಗಳ ನಾಯಕತ್ವ ಈಗ ಭಾರತದ ಕೈಗೆ ಬಂದಿದೆ. ಮೋದಿ ಅವರಿಂದ ಏಕ ಭಾರತ್ ಶ್ರೇಷ್ಠ ಭಾರತ್ ಆಗಿದ್ದು 2014ರ ನಂತರ ಭಾರತ ಸಮಸ್ತ ನಾಯಕತ್ವವನ್ನು ಮೋದಿಯವರಲ್ಲಿ ಕಂಡಿದೆ ಎಂದರು.

ಮೋದಿಯವರು ಬಂದ ನಂತರವೇ ಭಾರತ ವಿಕಾಸವಾಗಿದ್ದು ರೈಲ್ವೆ, ವಿಮಾನ ನಿಲ್ದಾಣ, ಐಟಿ ಬಿಟಿ,ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಹಳಷ್ಟು ಅಭಿವೃದ್ಧಿ ಕಂಡಿದೆ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಬಿಜೆಪಿ ಸರ್ಕಾರ ಬಂದ ಮೇಲೆ ರೈತರ ಕೈ ಹಿಡಿಯುವ ಮೂಲಕ ಅವರ ನೆರವಿಗೆ ಧಾವಿಸಿದೆ. ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ರೈತರಿಗೆ ನೀಡಿದ್ದು, ಕೃಷಿ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಐದು ಪಟ್ಟು ಹೆಚ್ಚಳ ಮಾಡಿದೆ ಎಂದರು.

ಡಬಲ್ ಇಂಜಿನ್ ಸರ್ಕಾರ ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಿ ನಿರ್ಮೂಲನೆ ಮಾಡಿದರ.ಆದರೆ ಕಾಂಗ್ರೆಸ್ ನವರು ಪಿಎಫ್ ಐ ಸಂಘಟನೆ ಬಗ್ಗೆ ಮಾತನಾಡುತ್ತಿರಲಿಲ್ಲ. ಅದನ್ನು ನಿಷೇಧ ಮಾಡಲು ಕೂಡಾ ಹೋಗಿರಲಿಲ್ಲ‌. ಆದರೆ ನಮ್ಮ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಜನರ ಕನಸಾಗಿತ್ತು‌‌. ಇದನ್ನು ಬಿಜೆಪಿ ಮಾಡಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಬಳಿ ಕರ್ನಾಟಕ ಸರ್ಕಾರದ ಯಾತ್ರಾರ್ಥಿಗಳ ಭವನ ನಿರ್ಮಿಸಲು ಮುಂದಾಗಿದ್ದು, ಅದಕ್ಕೆ ಅಗತ್ಯ ಜಮೀನು ನೀಡುತ್ತೇನೆ. ರಾಜ್ಯದ ಜನರು ಅಯೋಧ್ಯೆಗೆ ಬಂದು ರಾಮ ಮತ್ತು ಹನುಮಾನನ ದರ್ಶನ ಪಡೆಯಲು ಸ್ವಾಗತಿಸುತ್ತೇನೆ ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಯೋಗಿ ಆದಿತ್ಯನಾಥರು ಸಕ್ಕರೆ ನಾಡಿನ ಜನತೆಗೆ ನನ್ನ ನಮಸ್ಕಾರಗಳು, ಆದಿಚುಂಚನಗಿರಿ ಕ್ಷೇತ್ರಕ್ಕೆ ನನ್ನ ಭಕ್ತಿ ಪೂರ್ವ ಪ್ರಣಾಮಗಳು ಎಂದು ಕನ್ನಡದಲ್ಲಿ ಹೇಳಿದಾಗ ಜನರು ಜೋರಾಗಿ ಕೂಗಿ ಸಂಭ್ರಮ ಪಟ್ಟರು. ಸಮಾವೇಶಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳೊಂದಿಗೆ ನಗರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಅಧ್ಯಕ್ಷ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಬಿಜೆಪಿ ಅಭ್ಯರ್ಥಿಗಳಾದ ಕೆ. ಸಿ.ನಾರಾಯಣಗೌಡ, ಅಶೋಕ್ ಜಯರಾಮ್, ಸಚ್ಚಿದಾನಂದ, ಸುಧಾ ಶಿವರಾಮೇಗೌಡ, ಮುನಿರಾಜು, ಎಸ್.ಪಿ.ಸ್ವಾಮಿ, ಇಂದ್ರೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ