ಜೆಡಿಎಸ್ ಅಭ್ಯರ್ಥಿ ಬಿ. ಆರ್. ರಾಮಚಂದ್ರು ಅವರು ಕಳೆದ ಹಲವು ವರ್ಷಗಳಿಂದ ಪಕ್ಷಕ್ಕೆ ಸಲ್ಲಿಸಿದ ಸೇವೆ,ಕ್ಷೇತ್ರದ ಜನರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗಿನ ಒಡನಾಟ ಗುರುತಿಸಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಾಯಿತೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದರು.
ಮಂಡ್ಯ ನಗರದ ವಿವಿಧ ವಾರ್ಡ್ ಗಳಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ಬಿ. ಆರ್. ರಾಮಚಂದ್ರು ಪರ ಪ್ರಚಾರ ನಡೆಸಲಾಯಿತು. ಹೊಸಹಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಕ್ಷೇತ್ರದಲ್ಲಿ ಮಾಡಿದ ಎಲ್ಲಾ ಸಮೀಕ್ಷೆಗಳ ಆಧಾರದ ಮೇಲೆ, ಜನರ ಬಳಿ ನಿರಂತರ ಒಡನಾಟ ಇಟ್ಟುಕೊಂಡಿರುವ ಬಿ.ಆರ್. ರಾಮಚಂದ್ರ ಅವರೇ ಸೂಕ್ತ ಎಂದು ತಿಳಿಸಿದ್ದರಿಂದ ಅವರನ್ನು ಅಭ್ಯರ್ಥಿ ಮಾಡಲಾಗಿದೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಲು ಮಂಡ್ಯದಲ್ಲಿ ಬಿ.ಆರ್. ರಾಮಚಂದ್ರು ಆಯ್ಕೆ ಆಗಲೇಬೇಕು. ಮಂಡ್ಯದ ಅಭಿವೃದ್ಧಿಗೆ ಎಚ್.ಡಿ.ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪಂಚರತ್ನ ಯೋಜನೆಗಳ ಜಾರಿಗೆ ಜೆಡಿಎಸ್ ಅವಶ್ಯಕತೆ ಇದೆ ಎಂದರು.
ತಮಿಳುನಾಡಿಗೆ ನೀಡಬೇಕಿದ್ದ ಕಾವೇರಿ ನದಿ ನೀರಿನಲ್ಲಿ 15 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಉಳಿಸಿ ಕೊಟ್ಟ ಕೀರ್ತಿ ಎಚ್. ಡಿ. ದೇವೇಗೌಡರಿಗೆ ಸಲ್ಲುತ್ತದೆ. ನದಿ ನೀರಿನ ವಿಚಾರವಾಗಿ ಜೆಡಿಎಸ್ ಪಕ್ಷ ಹಲವು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದೆ. ರಾಜ್ಯದ ಜನರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತನಿಗೆ ಶಕ್ತಿ, ಯುವ ಜನರ ಹಾಗೂ ಮಹಿಳೆಯರ ಸಬಲೀಕರಣ ಹಾಗೂ ವಸತಿ ಯೋಜನೆಯ ಪಂಚರತ್ನ ಯೋಜನೆಗಳ ಜಾರಿಗೆ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂದು ಜನರಲ್ಲಿ ಮನವಿ ಮಾಡಿದರು.

ಉಸಿರಿರುವರೆಗೂ ಸೇವೆ
ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರು ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿ ಎಚ್.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ಅಭ್ಯರ್ಥಿ ಮಾಡಿದ್ದಾರೆ. ಬಡ ರೈತನ ಕುಟುಂಬದ ಮಗನಿಗೆ ಟಿಕೆಟ್ ಕೊಟ್ಟಿರುವ ಅವರಿಗೆ ನಾನು ಆಭಾರಿಯಾಗಿದ್ದೇನೆ. ಚುನಾವಣೆಯಲ್ಲಿ ಪ್ರಚಾರ ಮಾಡಲು ಅವಧಿ ಸಾಕಷ್ಟು ಕಡಿಮೆಯಿದ್ದು, ಎಲ್ಲರೂ ನನಗೆ ಮತ ನೀಡಿದರೆ ನನ್ನ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ನಾನು ಶಾಲಾ ಮಕ್ಕಳಿಗೆ ಬ್ಯಾಗ್ ನೀಡಿದಾಗ ಕ್ಷೇತ್ರದ ಮತದಾರರು ಸಂತೋಷದಿಂದ ಶುಭಕೋರಿದ್ದಾರೆ. ಧರ್ಮಸ್ಥಳ ಯಾತ್ರೆ ಮಾಡಿದ ಸಂದರ್ಭದಲ್ಲಿ ಮನೆ ಮಗನ ರೀತಿ ಕಂಡು ಆಶೀರ್ವಾದ ಮಾಡಿದ್ದಾರೆ. ದಯಮಾಡಿ ನಿಮ್ಮ ಮನೆ ಮಗ ಎಂದು ತಿಳಿದು,ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳ ಜಾರಿಗಾಗಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಸದಸ್ಯ ನಾಗೇಶ್, ಮುಖಂಡರಾದ ಗೌರೀಶ್, ಹೊಸಳ್ಳಿ ಶಿವು, ರವಿ ಮತ್ತಿತರರಿದ್ದರು.




