ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಭೂಮಿ ಮಂಜೂರು ಮಾಡಲಾಗಿದ್ದರೂ ಸದರಿ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯವನ್ನು ತ್ವರಿತವಾಗಿ ಇತ್ಯರ್ಥಪಡಿಸದೇ ಭೂಗಳ್ಳರ ಜೊತೆ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು, ಪಟ್ಟಭದ್ರರ ಜೊತೆ ಶಾಮೀಲಾಗಿ ನಿವೇಶನ ಹಂಚಿಕೆ ಮಾಡದೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬೂದನೂರು ಸ್ವಂತ ಮನೆ ನಮ್ಮ ಹಕ್ಕು ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಗುರುವಾರ ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
ಮಂಡ್ಯ ತಾಲೂಕು ಕಚೇರಿ ಎದುರು ಸಮಿತಿಯ ಮಹಿಳಾ ಕಾರ್ಯಕರ್ತರು ಮೈ ಮೇಲೆ ಸಗಣಿ ಸುರಿದುಕೊಂಡು ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪ ಹಾಕಿದರು.
ಬೂದನೂರು ನಿವೇಶನರಹಿತರಿಗೆ ಮಂಜೂರಾದ ಭೂಮಿಗೆ ಸಂಬಂಧಿಸಿದಂತೆ ಕೋಟ್೯ ವ್ಯಾಜ್ಯ ಬಗೆಹರಿಸುವ ಬದಲು ಭೂಗಳ್ಳರ ಜೊತೆ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಹಾಗೂ ಪ್ರಥಮ ದರ್ಜೆ ಸಹಾಯಕ ತಿಪ್ಪೇಸ್ವಾಮಿ ಅವರು ಸೇರಿಕೊಂಡು ಬಡ ಜನರನ್ನು ವಂಚನೆ ಮಾಡುತ್ತಿದ್ದಾರೆ, ನ್ಯಾಯಾಲಯದಲ್ಲಿರುವ ಭೂ ವ್ಯಾಜ್ಯವನ್ನು ಶೀಘ್ರ ಇತ್ಯರ್ಥಕ್ಕೆ ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಸೂಚನೆ ನೀಡಿದ್ದರು. ಸಹ ವಕೀಲರಿಗೆ ಸಬೂಬು ಹೇಳುತ್ತಾ ಅವರನ್ನು ಸಾಗಾ ಹಾಕಿ ಭೂಗಳ್ಳರ ನೆರವಿಗೆ ನಿಂತಿದ್ದಾರೆ ಎಂದು ಹೋರಾಟಗಾರ ಬೂದನೂರು ಸತೀಶ್ ಆರೋಪಿಸಿದರು.
ನ್ಯಾಯಾಲಯದ ವ್ಯಾಜ್ಯಗಳ ಕುರಿತು ತಪ್ಪು ಮಾಹಿತಿ ನೀಡಿರುವ ಭೂಗಳ್ಳರ ವಿರುದ್ದ ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಮನವಿ ಮಾಡಿದರೂ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿರುವ ಬಗ್ಗೆ ನ್ಯಾಯಾಲಯಕ್ಕೆ ಹಾಜರಾಗಲು ಮನವಿ ಮಾಡಿದರೂ ಭೂಗಳ್ಳರ ಪ್ರಭಾವ, ಅಮಿಷಕ್ಕೆ ಅಧಿಕಾರಿಗಳು ಬಲಿಯಾಗಿದ್ದಾರೆ ಎಂದು ಕಿಡಿ ಕಾರಿದರು.
ದಲಿತ ಕುಟುಂಬಗಳಿಗೆ ಭೂಮಿ ಸಿಗದಂತೆ ಸಂಚು ಮಾಡಿ ಹಕ್ಕುಪತ್ರ ಮಂಜೂರು ಮಾಡಿದರೂ ಭೂಮಿಗೆ ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಲು ತಹಶೀಲ್ದಾರ್ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಬೂದನೂರು ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಲಪಟಾಯಿಸಲು ಕೆಲವರು ವೇದಮೂರ್ತಿ ಎಂಬ ನಕಲಿ ತಹಶೀಲ್ದಾರ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳು ಲಂಚ ಪಡೆದು ಬಡ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಶಾಸಕ ರವಿಕುಮಾರ್ ಅವರು ಮಧ್ಯೆ ಪ್ರವೇಶಿಸಿ ವಸತಿ ರಹಿತರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಸ್ವಂತ ಮನೆ ನಮ್ಮ ಹಕ್ಕು ಸಮಿತಿಯ ಮುಖಂಡರಾದ ಕುಳ್ಳ, ಸರೋಜಮ್ಮ, ವಿಜಯ, ಕನಕ ಹಾಗೂ ಕರಿಯಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




