ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ.ಅದಕ್ಕೆ ತಕ್ಕಂತೆ ದಿನ ಕಳೆದಂತೆ ಚುನಾವಣಾ ಕಾವು ಏರತೊಡಗಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಅವರ ಕುಟುಂಬದ ಸದಸ್ಯರು ಬಿರುಬಿಸಿಲನ್ನೂ ಲೆಕ್ಕಿಸದೆ ಬಿರುಸಿನ ಪ್ರಚಾರ ನಡೆಸುತ್ತಾ ಗಮನ ಸೆಳೆಯುತ್ತಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಂಡ್ಯ ಶಿಲ್ಪಿ ಕೆ.ವಿ.ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯ್ ಆನಂದ್ ಪರ ಅವರ ತಾಯಿ ಕುಸುಮಾ ಸಚ್ಚಿದಾನಂದ ಹಾಗೂ ಕುಟುಂಬ ಸದಸ್ಯರು ಪ್ರಚಾರ ನಡೆಸುತ್ತಿದ್ದಾರೆ.
ನನ್ನ ಮಗ ನಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿದೆ.ಪಕ್ಷೇತರ ಅಭ್ಯರ್ಥಿಯಾಗಿರುವ ನನ್ನ ಮಗನಿಗೆ ಒಂದು ಅವಕಾಶ ನೀಡುವ ಮೂಲಕ ನಮ್ಮ ಕುಟುಂಬದ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಕುಸುಮ ಅವರು ಕೇಳುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರವಾಗಿ ಅವರ ತಾಯಿ ಪ್ರಭಾವತಿ ಜಯರಾಮ್, ಪತ್ನಿ ಅಕ್ಷತಾ ಅಶೋಕ್ ಜಯರಾಮ್ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಣಿಗ ಅವರ ಪತ್ನಿ ಸೌಂದರ್ಯ ಅವರು ಕೂಡ ಕುಟುಂಬ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮತಯಾಚನೆ ಮಾಡುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರು ಪರವಾಗಿ ಕಲ್ಪನಾ ರಾಮಚಂದ್ರು ಹಾಗೂ ಅವರ ಸಹೋದರ ಬಿ.ಆರ್.ಸುರೇಶ್ ಮತಯಾಚನೆ ಮಾಡುತ್ತಿದ್ದಾರೆ.ನನ್ನ ಅಣ್ಣ ರಾಮಚಂದ್ರು ಅವರಿಗೆ ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ಎಂದು ಸುರೇಶ್ ಮತದಾರರಲ್ಲಿ ಕೋರುತ್ತಿದ್ದಾರೆ.

ಮಂಡ್ಯದಲ್ಲಿ ತಾಪಮಾನ ಸಾಕಷ್ಟು ಹೆಚ್ಚಾಗಿದ್ದು,ಬಿಸಿಲು ಕಣ್ಣಿಗೆ ರಾಚುತ್ತಿದೆ.ಇಂತಹ ಸಂದರ್ಭದಲ್ಲಿಯೂ ಅಭ್ಯರ್ಥಿಗಳ ಪರವಾಗಿ ಅವರ ತಾಯಿ, ಪತ್ನಿ, ಸಹೋದರ,ಸಹೋದರಿ ಸೇರಿದಂತೆ ಕುಟುಂಬ ಸದಸ್ಯರು ಪ್ರಚಾರದಲ್ಲಿ ತೊಡಗಿರುವುದು ಗಮನ ಸೆಳೆಯುತ್ತಿದೆ.




