ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಾಯಿಸಬೇಕೆಂಬ ಎನ್ ಸಿ ಇ ಆರ್ ಟಿ ಸಮಿತಿಯ ಶಿಫಾರಸ್ಸನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಖಂಡಿಸಿದೆ.
ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಾಯಿಸಬೇಕೆಂಬ ಎನ್.ಸಿ.ಆರ್.ಟಿ ರಚಿಸಿರುವ ಸಮಿತಿಯ ಶಿಫಾರಸ್ಸು ಕೇಂದ್ರ ಸರ್ಕಾರದ ಅಜೆಂಡಾಗೆ ಮಣೆ ಹಾಕುವಂತಿದೆ. ಒಂದೇ ಭಾಷೆಯ ಬಳಕೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣದ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿದೆ ಎಂದು ಎಐಡಿಎಸ್ಒ ಮಂಡ್ಯ ಜಿಲ್ಲಾ ಸಂಚಾಲಕಿ ಚಂದ್ರಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣದ ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ಆಶಯಗಳಿಗೆ ವಿರುದ್ಧವಾಗಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಶಿಫಾರಸ್ಸನ್ನು ಸಹ ಈ ಸಮಿತಿ ಮಾಡಿದೆ. ಈಗಾಗಲೇ ದೇಶದ ಸಂವಿಧಾನದಲ್ಲಿ ‘ಭಾರತ’ ಮತ್ತು ‘ಇಂಡಿಯಾ’ ಎಂಬ ಎರಡೂ ಹೆಸರುಗಳನ್ನು ಸ್ವೀಕರಿಸಲಾಗಿದೆ. ಜನ ಮಾನಸದಲ್ಲಿ ಎರಡು ಹೆಸರುಗಳು ಬೆರೆತುಹೋಗಿವೆ. ಪರಿಸ್ಥಿತಿ ಹೀಗಿರುವಾಗ ಇಂತಹ ಶಿಫಾರಸುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಂಧ – ರಾಷ್ಟ್ರೀಯ ಭಾವನೆಯನ್ನು ಕೆರಳಿಸಿ, ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿರುವ ವಾಸ್ತವ ಸಮಸ್ಯೆಗಳಿಂದ ಗಮನವನ್ನು ವಿಚಲಿತಗೊಳಿಸಲಾಗುತ್ತಿದೆ ಎಂದಿದ್ದಾರೆ.
ದೇಶದ ನವೋದಯ ಚಿಂತಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರು ಪ್ರತಿಪಾದಿಸಿದ ನಿಜವಾದ ಶಿಕ್ಷಣದ ಅಂತಃಸತ್ವವನ್ನು ನಾಶಗೊಳಿಸುವ ಈ ಶಿಫಾರಸ್ಸುಗಳನ್ನು ಜಾರಿಗೊಳಿಸದಂತೆ ಎನ್ ಸಿ ಇ ಆರ್ ಟಿ ಯನ್ನು ಎ ಐ ಡಿ ಎಸ್ ಓ ಆಗ್ರಹಿಸುತ್ತದೆ ಮತ್ತು ಈ ರೀತಿಯ ಶಿಫಾರಸ್ಸುಗಳೊಂದಿಗೆ ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ತನ್ನ ಅಜೆಂಡಾಗಳನ್ನು ಹೇರುತ್ತಿರುವುದರ ವಿರುದ್ಧ ದೇಶದ ಪ್ರಜಾತಂತ್ರ ಪ್ರಿಯ ಜನಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕೆಂದು ಅವರು ಮನವಿ ಮಾಡಿದ್ದಾರೆ.




