Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಶಾಸಕ ಅನ್ನದಾನಿ ಬೆಂಬಲಿನಿಂದ ರಾಮಮಂದಿರ ಜಾಗದಲ್ಲಿ ಅಂಗಡಿ ಮಳಿಗೆ ನಿರ್ಮಾಣ – ಆರೋಪ

ಚುನಾವಣೆ ಸಂದರ್ಭದಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಕೆ. ಅನ್ನದಾನಿ ಅವರ ಬೆಂಬಲಿಗರೊಬ್ಬರ ಮೇಲೆ ರಾಮಮಂದಿರದ ಅಕ್ರಮ ಖಾತೆ ಮಾಡಿಸಿಕೊಂಡು ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಮಳವಳ್ಳಿ ಕೋಟೆ ಬೀದಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ಹಾಗೂ ರಾಮಮಂದಿರಕ್ಕೆ ಸೇರಿದ ಜಾಗವನ್ನು ಶ್ರೀ ರಾಮಾಂಜನೇಯ ಸೇವಾ ಸಮಿತಿ ಎಂಬ ಟ್ರಸ್ಟ್ ಅನ್ನು ಹುಟ್ಟು ಹಾಕಿ, ಶಾಸಕ ಡಾ. ಕೆ ಅನ್ನದಾನಿ ಅವರ ಬೆಂಬಲಿಗ, ಟ್ರಸ್ಟ್ ಕಾರ್ಯಾಧ್ಯಕ್ಷ ಹಾಗೂ ಪುರಸಭೆ ಹಾಲಿ ಉಪಾಧ್ಯಕ್ಷ ಪ್ರಶಾಂತ್ ಸುಳ್ಳು ದಾಖಲೆಗಳನ್ನು ನೀಡಿ ರಾಜಕೀಯ ಬಲ ಬಳಸಿಕೊಂಡು ಟ್ರಸ್ಟ್ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡು, ಮಳಿಗೆಗಳನ್ನು ಕಟ್ಟುತ್ತಿದ್ದಾರೆಂದು ಹಿರಿಯ ಬಿಜೆಪಿ ಮುಖಂಡ ಅಪ್ಪಾಜಿಗೌಡ ಆರೋಪಿಸಿದರು.

ಮಳವಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ನವಗ್ರಹ ಪೂಜೆ, ನಾಗಕಟ್ಟೆಗಳಿಗೆ ಸಾರ್ವಜನಿಕರು ಪೂಜೆ ಪುರಸ್ಕಾರವನ್ನು ನೆರೆವೇರಿಸಿಕೊಂಡು ಬರಲಾಗುತ್ತಿದ್ದು. ಖಾಲಿ ಇರುವ ಜಾಗವು ಆಂಜನೇಯ ಸ್ವಾಮಿ ಹಾಗೂ ರಾಮನಾಯಕರ ಚಾವಡಿಯ ಹೆಸರಿನಲ್ಲಿಯೇ ಇದೆ. ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳ ಹೆಸರಿನಲ್ಲಿ ಇರುವುದಿಲ್ಲ, ದೇವಸ್ಥಾನದ ಸ್ವತ್ತನ್ನು ದುರುದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಪುರಾತನ ದೇವಸ್ಥಾನದ ಸ್ವರೂಪವನ್ನು ಹಾಳು ಮಾಡಿ, ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಮಮಂದಿರದ ಆಸ್ತಿಯಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುವುದರ ಮೂಲಕ ದೇವಸ್ಥಾನದ ಆಚರಣೆ ಮತ್ತು ಧಾರ್ಮಿಕತ್ವವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ಕಿಡಿಕಾರಿದರು.

ದೇವಸ್ಥಾನವನ್ನು ಅಭಿವೃದ್ದಿ ಪಡಿಸುವ ಸಂಘ ಸಂಸ್ಥೆಯಾಗಿದ್ದರೇ ದಾಸೋಹ ಅಥವಾ ಬಡವರಿಗೆ ಉಚಿತ ಶುಭ ಸಮಾರಂಭಗಳಿಗೆ ಅನುಕೂಲವಾಗುವ ಭವನವನ್ನು ನಿರ್ಮಿಸಬಹುದಾಗಿತ್ತು. ವಾಣಿಜ್ಯ ದೃಷ್ಠಿಯಿಂದ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಶ್ರೀರಾಮಾಂಜನೇಯ ಸೇವಾ ಸಮಿತಿ ಎಂದು ಸೃಷ್ಠಿಸಿಕೊಂಡು ಧಾರ್ಮಿಕ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವ ಉದ್ದೇಶವಿಲ್ಲದೇ ತಮ್ಮ ವೈಯಕ್ತಿಕ ಲಾಭಕ್ಕಾಗಿ ಕಟ್ಟಡ ನಿರ್ಮಿಸುತ್ತಿರುವುದು ಖಂಡನೀಯ ಎಂದರು.

ಕಟ್ಟಡವನ್ನು ನಿರ್ಮಿಸಬಾರದೆಂದು ನ್ಯಾಯಾಲಯಕ್ಕೆ ಮೊರೆಹೋಗಿದ್ದು, ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ, ಆದರೂ ಕಟ್ಟಡವನ್ನು ಮುಂದುವರಿಸಲಾಗುತ್ತಿದೆ, ಕಟ್ಟಡದ ಕಾಮಗಾರಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಠಾಣೆಗೆ ಮನವಿ ಮಾಡಿಕೊಳ್ಳಲು ಹೋದಾಗ ನಮ್ಮ ಮೇಲೆ ಕೇಸು ದಾಖಲಿಸಲಾಗಿದೆ, ಕೂಡಲೇ ಸಂಬಂಧಪಟ್ಟವರು ಕಟ್ಟಡದ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಮನವಿ ಮಾಡಿಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಲಿಂಗಪ್ಪ, ಎಂ ಶಿವರಾಜು, ಮಲ್ಲಯ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ