Wednesday, May 15, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ 130 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಲಿದೆ – ಸಿದ್ದರಾಮಯ್ಯ

ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 130 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಸರ್ಕಾರ ರಚನೆ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯದ ಆವರಣದಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಪರ ಬಹಿರಂಗ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನಾನು ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ, ನಮ್ಮ ಪಕ್ಷದ ಸಭೆಗಳಿಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇವು ಕಾಂಗ್ರೆಸ್ ಬಲವರ್ಧನೆಯನ್ನು  ಸಾಬೀತು ಪಡಿಸುತ್ತದೆ ಎಂದರು.

ರಾಜ್ಯದ ಜನರಿಗೆ ಬಿಜೆಪಿ ಬಗ್ಗೆ ಬೇಸರ ವ್ಯಕ್ತವಾಗಿದೆ. ಸ್ವಂತ ಬಲದಲ್ಲಿ ಎಂದೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ನಾವೆಲ್ಲರೂ ಇದ್ದಾಗ 59 ಸ್ಥಾನಗಳಲ್ಲಿ ಜಯಗಳಿಸಿದ್ದೇವು, ಕಳೆದ ಬಾರಿ 37 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು. ಆದರೆ ಈ ಬಾರಿ 20ರಿಂದ 25 ಸ್ಥಾನಗಳಲ್ಲಿ ಮಾತ್ರ ಜೆಡಿಎಸ್ ಗೆಲವು ಕಾಣಲಿದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತವಿಲ್ಲ, ಕುಮಾರಸ್ವಾಮಿಯವರನ್ನು ಬಿಜೆಪಿ ಬೆಂಬಲದಿಂದ ಸಿಎಂ ಮಾಡಿಸಿದ್ದು ಚಲುವರಾಯಸ್ವಾಮಿ ಅವರಿಲ್ಲದಿದ್ದರೆ ಕುಮಾರಸ್ವಾಮಿ ಸಿಎಂ ಆಗುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಛೇಡಿಸಿದರು.

2018ರ ವಿಧಾನಸಭಾ ಫಲಿತಾಂಶ ಅತಂತ್ರವಾದಾಗ ಕೋಮುವಾದಿ ಪಕ್ಷವನ್ನು ದೂರವಿಡಲು ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನೀಡಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತು, ಆದರೆ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಆಡಳಿತ ಮಾಡಬೇಕಿದ್ದ ಕುಮಾರಸ್ವಾಮಿ ತೇಜ್ ವೆಸ್ಟೆಂಡ್ ಹೋಟೇಲ್ ವಾಸ್ತವ್ಯ ಹಾಗೂ ಅಮೇರಿಕಾ ಪ್ರವಾಸಕ್ಕೆ ತೆರಳಿ ಅಧಿಕಾರ ಕಳೆದುಕೊಂಡರು. ಇದೇ ಸಂದರ್ಭವನ್ನು ಬಳಸಿಕೊಂಡ ಯಡಿಯೂರಪ್ಪ ಶಾಸಕರಿಗೆ ಹಣ ನೀಡಿ ಅನೈತಿಕವಾಗಿ ಅಧಿಕಾರಕ್ಕೆ ಬಂದರು. ರಾಜ್ಯದಲ್ಲಿ ದುರಾಡಳಿತ ನಿಚ್ಚಳವಾಗಿಯಿತು ಎಂದರು.

ಜೆಡಿಎಸ್ ಪಕ್ಷ ಗೆದ್ದೆತ್ತಿನ ಬಾಲ ಹಿಡಿಯುತ್ತದೆ, ಆ ಪಕ್ಷದ ನಾಯಕರು ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಬಾರದೆನ್ನುವ ಆಶಯದಿಂದ ಹೋಮ, ಹವನ ಮಾಡಲು ಮುಂದಾಗಿದ್ದಾರೆ. ಇವೆಲ್ಲವನ್ನು ಮೆಟ್ಟಿ ರಾಜ್ಯ ಉಳಿಸಲು ಮತದಾರರು ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಎನ್.ಚಲುವರಾಯಸ್ವಾಮಿ ಒಕ್ಕಲಿಗರ ನಾಯಕ 

ರಾಜ್ಯದ ಬಲಿಷ್ಠ ಸಮುದಾಯವಾಗಿರುವ ಒಕ್ಕಲಿಗ ಜನಾಂಗದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಒಬ್ಬರಾಗಿದ್ದು ಅವರು, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಲೇಬೇಕೆಂದು ಸಿದ್ದರಾಮಯ್ಯ ಹೇಳಿದರು.

ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಚಲುವರಾಯಸ್ವಾಮಿ ಅವರು ನಾಯಕತ್ವವಿರುವ ವಿಶಾಲ ಗುಣ ಹೊಂದಿದ್ದಾರೆ. ತಮ್ಮೊಡನೆ ಇತರರನ್ನು ಬೆಳೆಸುವ ದೊಡ್ಡತನ ರೂಢಿಸಿಕೊಂಡಿದ್ದಾರೆ. ಇಂತಹವರು ರಾಜ್ಯ ರಾಜಕಾರಣದಲ್ಲಿರಬೇಕು ಎಂದರು.

ಚಲುವರಾಯಸ್ವಾಮಿ ಸ್ವಾರ್ಥಿಯಲ್ಲ, ಕೆಲವು ಸ್ವಾರ್ಥಿಗಳು ತಾನೊಬ್ಬನೇ ಜಯಗಳಿಸಬೇಕು, ಆಗ ಎಲ್ಲರೂ ನನ್ನ ಬಳಿ ಬರುತ್ತಾರೆನ್ನುವ ಸ್ವಾರ್ಥ ಹೊಂದಿರುತ್ತಾರೆ. ಆದರೆ ಚಲುವರಾಯಸ್ವಾಮಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಬೇಕು ಎಂಬ ಹಂಬಲದಿಂದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿದ್ದಾರೆಂದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದರು. ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಪ್ರತಿನಿಧಿಸಿದ್ದರೂ 2 ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಾದ ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡ ವಿಜಯಶಾಲಿಯಾದರು. ಇದು ಚಲುವರಾಯಸ್ವಾಮಿ ನಾಯಕತ್ವಕ್ಕೆ ಸಂದ ಜಯ ಎಂದು ಬಣ್ಣಿಸಿದರು.

ಜನತೆ ನನ್ನನ್ನು ಬಹಳ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ

ನಾಗಮಂಗಲ ಕ್ಷೇತ್ರ ನನ್ನ ಪ್ರೀತಿ ಪಾತ್ರ ವಿಧಾನಸಭಾ ಕ್ಷೇತ್ರ, ಇಲ್ಲಿನ ಜನತೆ ನನ್ನನ್ನು ಬಹಳ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ. ನನಗೂ ಸಹ ನಾಗಮಂಗಲದ ಜನತೆ ಬಗ್ಗೆ ಅಪಾರ ವಿಶ್ವಾಸವಿದೆ. ಪ್ರತಿ ಚುನಾವಣೆಯ ಪ್ರಚಾರದಲ್ಲೂ ಜನತೆ ನನ್ನ ಮಾತಿಗೆ ಗೌರವ ಕೊಡುತ್ತಾರೆ. ಇಲ್ಲಿ ನೆರದಿರುವ ಜನಸ್ತೋಮದ ಉತ್ಸಾಹ ಹಾಗೂ ಹುಮ್ಮಸ್ಸು ನೋಡಿದರೆ, ಮೇ.10ರಂದು ನಡೆಯಲಿರುವ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಬಹುಮತದಿಂದ ಶಾಸಕರಾಗುವುದು ಖಚಿತ ಎಂದು ತಿಳಿಸಿದರು.

ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಪೂರ್ವದಲ್ಲಿ ಸೂರ್ಯ ಉದಯಿಸುವಷ್ಟೆ ಸತ್ಯ. 130 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2018ರ ಚುನಾವಣೆಯಲ್ಲಿ ಈ ಕ್ಷೇತ್ರದ ಜನತೆ ಚಲುವರಾಯಸ್ವಾಮಿ ಅವರನ್ನು ಏಕೆ ಸೋಲಿಸಿದ್ದೀರಿ ಎಂದು ಇಂದಿಗೂ ನನಗೆ ಅರ್ಥವಾಗಿಲ್ಲ. ಚಲುವರಾಯಸ್ವಾಮಿ ಯಾರಿಗೂ ಅನ್ಯಾಯ ಹಾಗೂ ಮೋಸ ಮಾಡಿಲ್ಲ. ಅವರ ಸೋಲಿಗೆ ಕಣ್ಣೀರೆ ಕಾರಣವಿರಬಹುದು. ಕೆಲವರಿಗೆ ಕಣ್ಣೀರು ವರದಾನವಾಗುತ್ತದೆ ಎಂದು ಛೇಡಿಸಿದರು.

ರಾಜಕೀಯವಾಗಿ ಅಳುವುದು ಕೆಲವರಿಗೆ ಕರಗತವಾಗಿದೆ. ನನ್ನ ರಾಜಕೀಯ ಜೀವನದ ಎಂತಹ ಕಷ್ಟದ ಸಂದರ್ಭದಲ್ಲೂ ನನಗೆ ಅಳು ಬಂದಿಲ್ಲ, ರಾಜಕೀಯಕ್ಕೆ ಬರುವುದು ಜನರ ಸೇವೆ ಮಾಡಲು ಮಾತ್ರ ನಮ್ಮ ರಾಜಕೀಯ ನಮ್ಮ ಪಿತ್ರಾರ್ಜಿತ ಆಸ್ತಿ ಎಂದು ಯಾರು ಭಾವಿಸಬಾರದು. ಜನರ ಆಸ್ತಿಯೇ ರಾಜಕಾರಣ- ಜನರ ತೀರ್ಪೆ ಅಂತಿಮ, ಅದಕ್ಕೆ ಎಲ್ಲರೂ ತಲೆಬಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಎನ್.ಹನುಮಂತಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ಎನ್.ಜೆ.ರಾಜೇಶ್, ಪ್ರಸನ್ನ, ಹನುಮಂತು, ಹೆಚ್.ಟಿ.ಕೃಷ್ಣೇಗೌಡ, ಹುಚ್ಚೇಗೌಡ ಇತರರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!