ಮಂಡ್ಯ ಜಿಲ್ಲೆಯ 7 ವಿಧಾನಸಭಾ ಚುನಾವಣೆಯ ಮತದಾನವು ಮೇ 10 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನ ನಡೆಯಲಿರುವ ಮತಗಟ್ಟೆಗಳಿಗೆ ಅಧಿಕಾರಿ,ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮೇ.9ರ ಮಸ್ಟರಿಂಗ್ ದಿನಾಂಕದಂದು ಬೆಳಿಗ್ಗೆ 6.30 ಗಂಟೆ ಹಾಗೂ 6.45 ಗಂಟೆಯವರೆಗೆ ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದ ವಿಧಾನಸಭಾ ಕ್ಷೇತ್ರವಾರು ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ನಿಯೋಜನೆಗೊಂಡಿರುವ ಕ್ಷೇತ್ರಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಎಲ್ಲಾ ನಿಯೋಜಿತ ಮತಗಟ್ಟೆ ಅಧಿಕಾರಿ,ಸಿಬ್ಬಂದಿಗಳು ಬೆಳಿಗ್ಗೆ 6.15 ಕ್ಕೆ ತಾಲೂಕಿನ ನಿಗಧಿತ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿದ್ದು, ನಿಯೋಜನೆಗೊಂಡಿರುವ ಕ್ಷೇತ್ರಕ್ಕೆ ತೆರಳುವುದು ಹಾಗೂ ಡಿ-ಮಸ್ಟರಿಂಗ್ ದಿನಾಂಕದಂದು ಅದೇ ಬಸ್ಸಿನಿಂದ ಕೇಂದ್ರ ಸ್ಥಾನಕ್ಕೆ ಹಿಂತಿರುಗಬಹುದು.
ನಿಗಧಿತ ಸಮಯದಲ್ಲಿ ಹಾಜರಿರದ ಅಧಿಕಾರಿ,ಸಿಬ್ಬಂದಿಗಳು ತಮ್ಮ ಸ್ವಂತ ಖರ್ಚಿನಲ್ಲಿ ನಿಯೋಜನೆಗೊಂಡಿರುವ ಮಸ್ಟರಿಂಗ್ ಕೇಂದ್ರಗಳಿಗೆ 8.30 ರ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗತಕ್ಕದ್ದು, ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಪ್ರಜಾಪ್ರತಿನಿಧ್ಯ ಕಾಯ್ದೆ-1951 ರಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
ಬಸ್ಸುಗಳು ಹೊರಡುವ ಸ್ಥಳ
ಮಳವಳ್ಳಿ-ಶಾಂತಿ ಪದವಿಪೂರ್ವ ಕಾಲೇಜು ಮಳವಳ್ಳಿ
ಮದ್ದೂರು- ಹೆಚ್.ಕೆ ವೀರಣ್ಣ ಪದವಿ ಪೂರ್ವ ಕಾಲೇಜು ಮದ್ದೂರು
ಮೇಲುಕೋಟೆ- ತಾಲೂಕು ಕಛೇರಿ ಪಾಂಡವಪುರ
ಮಂಡ್ಯ- ಮಂಡ್ಯ ವಿಶ್ವವಿದ್ಯಾನಿಲಯ
ಶ್ರೀರಂಗಪಟ್ಟಣ- ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರೀರಂಗಪಟ್ಟಣ
ನಾಗಮಂಗಲ- ಸರ್ಕಾರಿ ಜೂನಿಯರ್ ಕಾಲೇಜು ನಾಗಮಂಗಲ
ಕೆ.ಆರ್ ಪೇಟೆ-ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೆ.ಆರ್.ಪೇಟೆ
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತದಾನದ ದಿನದಂದು ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಮಾಡಬೇಕೆಂಬ ಸದುದ್ದೇಶದಿಂದ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಾದ ಕೆ.ಆರ್.ಎಸ್. ಬೃಂದಾವನ ಗಾರ್ಡನ್, ಮುತ್ತತ್ತಿ, ಶಿವನಸಮುದ್ರ, ರಂಗನತಿಟ್ಟು ಬಲಮುರಿ, ದರಿಯಾದೌಲತ್ ಪ್ರವಾಸಿ ತಾಣಗಳನ್ನು ಮೇ.10ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಮಾಡದೇ ಬರುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ಮತದಾನ ದಿನದಂದು ಮತದಾನ ಮಾಡದೇ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಮಾತ್ರ ಅನ್ವಯಿಸುತ್ತದೆ. ಮತದಾನ ದಿನದಂದು ಮತದಾನ ಮಾಡಿರುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪ್ರವೇಶಕ್ಕೆ, ಯಾವುದೇ ನಿರ್ಬಂಧರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.




