ಯುಗದ ಕವಿ, ಜಗದ ಕವಿ ಎಂದೇ ಜನಮಾನಸರಾಗಿರುವ ರಾಷ್ಟ್ರಕವಿ ಕುವೆಂಪು ಹಾಗೂ ಅವರು ರಚಿಸಿರುವ ನಾಡಗೀತೆಯನ್ನು ಅವಮಾನಿಸಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಕುವೆಂಪು ಅವರ ಸಾಹಿತ್ಯವನ್ನು ಅಪಮಾನಿಸಿದ್ದಾರೆ. ಜೊತೆಗೆ ಶಾಲಾ ಪಠ್ಯದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಾರೆ. ಕೂಡಲೇ ಸಮಿತಿಯನ್ನು ರದ್ದುಗೊಳಿಸುವುದರ ಜತೆಗೆ ಚಕ್ರತೀರ್ಥ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕುವೆಂಪು ಎಂಬ ನಾಮಾಂಕಿತದಿಂದ ಪ್ರಸಿದ್ಧರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಶ್ರೀ ರಾಮಾಯಣ ದರ್ಶನಂ ಎನ್ನುವ ಮಹಾಕಾವ್ಯ ರಚಿಸಿ, ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡಿತಿ ಎಂಬ ಸಾಹಿತ್ಯದ ಪ್ರಕಾರದ ಜತೆ ಶೂದ್ರ ತಪಸ್ವಿ, ಜಲಗಾರ ಎನ್ನುವ ನಾಟಕ ಪ್ರಕಾರವನ್ನು ರಚಿಸಿದ್ದಾರೆ. ಇದರೊಂದಿಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಮ್ಮೆಯ ಕವಿಯನ್ನು ಅವಮಾನಿಸಿರುವುದು ಖಂಡನೀಯ.
ನಾಡಿನ ಶ್ರೇಷ್ಟ ನಾಡಗೀತೆಯಲ್ಲಿ ರಾಜ್ಯದ ಹಿರಿಮೆ ಗರಿಮೆಯನ್ನು ಶ್ಲಾಘಿಸಿ ಸರ್ವ ಜನಾಂಗದ ಶಾಂತಿಯ ತೋಟ ಕರುನಾಡು ಎಂಬುದನ್ನು ಚಿತ್ರಿಸಿರುವ ಕುವೆಂಪು ಅವರ ಸಾಹಿತ್ಯ ಪ್ರಕಾರದ ಆಳ-ಅಗಲವನ್ನು ಅರ್ಥೈಸಿಕೊಳ್ಳಲಾಗದ ಚಕ್ರತೀರ್ಥ ಅವರಂತಹ ಸಂಕುಚಿತ ಮನೋಭಾವದ ವ್ಯಕ್ತಿಗಳ ತೀರ್ಮಾನಗಳು ದೇಶದ ಭವಿಷ್ಯದ ಪ್ರಜೆಗಳಾಗಲಿರುವ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಇದರ ಗಂಭೀರತೆಯನ್ನು ಸರ್ಕಾರ ಅರಿತು ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಭಿನ್ನ ಧರ್ಮ, ವಿವಿಧ ಜಾತಿಗಳಿಂದ ಕೂಡಿರುವ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಸಮಗ್ರತೆ ಹಾಗೂ ಏಕತೆಯಿಂದ ಬಾಳ್ವೆ ನಡೆಸಬೇಕಾದ ಕಾಲಘಟ್ಟದಲ್ಲಿ ಸಮಾಜದಲ್ಲಿ ಸಂಘರ್ಷ ಹುಟ್ಟು ಹಾಕುವುದು ಸರಿಯಲ್ಲ. ದೇಶದಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ನಾಡಗೀತೆಗೆ ಪವಿತ್ರ ಸ್ಥಾನವಿದೆ. ಅಂತಹ ಶ್ರೇಷ್ಟ ಸಾಹಿತಿಗೆ ಅವಮಾನವೆಸಗಿದರೆ ಸಹಿಸಲು ಸಾಧ್ಯವಿಲ್ಲ. ಜನಾಕ್ರೋಶ ವ್ಯಕ್ತವಾಗುವ ಮುನ್ನ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.