ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕ್ಷಿಪ್ರ ಸಂಚಾರಿ ದಳ ಮತ್ತು ಸ್ಥಾಯಿ ಕಣ್ಗಾವಲು ತಂಡದವರು ತಪಾಸಣೆ ನಡೆಸಿ ವಶಪಡಿಸಿಕೊಂಡಿರುವ ಹಣವನ್ನು ಮಂಡ್ಯ ಜಿಲ್ಲೆಯ ಆಯಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ, ತಾಲ್ಲೂಕು ಉಪ-ಖಜಾನೆಯಲ್ಲಿ ಇಡಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಹಣ ಬಿಡುಗಡೆ ಸಮಿತಿಯನ್ನು ರಚಿಸಿದ್ದಾರೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅವರನ್ನು ಹಣ ಬಿಡುಗಡೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಮೇ 11 ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಹಣ ಬಿಡುಗಡೆ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ಹಣ ಬಿಡುಗಡೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಣವು ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗದೇ ಇರುವ ಬಗ್ಗೆ ಸಂಬಂಧಿಸಿದವರಿಂದ ದಾಖಾಲಾತಿಗಳನ್ನು ಪಡೆದು ಪರಿಶೀಲಿಸಿ, ಖಾತ್ರಿ ಪಡಿಸಿಕೊಂಡ ನಂತರ ಸಂಬಂಧಿಸಿದ ವ್ಯಕ್ತಿಗಳಿಗೆ ಹಣವನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.




