ಕಳೆದ ಎಲ್ಲಾ ಚುನಾವಣೆಗಳಿಗಿಂತ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಉತ್ಸಾಹ ಹೆಚ್ಚಾಗಿದೆ, ಎಲ್ಲರೂ ಸ್ವಯಂ ಪ್ರೇರಿತರಾಗಿ ಮತಗಟ್ಟೆಗಳಿಗೆ ತೆರಳಿ, ಮತ ಚಲಾಯಿಸುತ್ತಿದ್ದಾರೆ, ಆದ್ದರಿಂದ ಮಂಡ್ಯ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲುವುದು ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಮತಕೇಂದ್ರಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ, ಜನರಲ್ಲಿ ಹೊಸ ಹುರುಪನ್ನು ಉಂಟು ಮಾಡಿದೆ. ಯೋಗ್ಯರನ್ನು ಆರಿಸುವುದಕ್ಕಾಗಿ ಜನತೆ ಮುನ್ನುಗ್ಗುತ್ತಿದ್ದಾರೆ. ಜನರ ಸ್ಪಂದನೆ ನೋಡಿದರೆ ಕಾಂಗ್ರೆಸ್ ಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಹಾಗಾಗಿ ನಾಗಮಂಗಲ ಕ್ಷೇತ್ರದಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲ ಅಂತಿದ್ರು, ಆದರೆ ಈಗ ಜನರ ನಗುಮುಖ, ಸಂತೋಷ ನೋಡಿದ್ರೆ ಕಾಂಗ್ರೆಸ್ ಗೆ ಒಳ್ಳೆಯ ಭವಿಷ್ಯವಿದೆ ಎನಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಯು ಯಾವುದೇ ಸಣ್ಣ ಪುಟ್ಟ ದುರ್ಘಟನೆಯೂ ಇಲ್ಲದಂತೆ ಶಾಂತಿಯುತವಾಗಿ ನಡೆಸುತ್ತಿದೆ, ಇದಕ್ಕೆ ಕಾರಣರಾದ ಚುನಾವಣಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳ ವರ್ಗ ಹಾಗೂ ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆಂದರು.




