ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಕೆ ಸ್ವಾಮೀಜಿಗಳು ಹಾಗೂ ಗಣ್ಯರು ಒಗ್ಗೂಡಿ ರೈತರ ಸಮ್ಮುಖದಲ್ಲಿ ಇಂದು ಚಾಲನೆ ನೀಡಿದರು.
ರೈತರ ಬದುಕಿಗೆ ಆಧಾರವಾಗಿರುವ ಪಿಎಸ್ ಎಸ್ ಕೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯದ ಯಂತ್ರಕ್ಕೆ ಹರಿಹರ, ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ, ಬೇಬಿ ಮಠದ ಶ್ರೀ ತ್ರಿನೇತ್ರ ಸ್ವಾಮೀಜಿ, ಎಂ.ಆರ್.ಎನ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಂಗಮೇಶ್ ನಿರಾಣಿ ಅವರು ಒಗ್ಗೂಡಿ ಕಬ್ಬು ಹಾಕುವ ಮೂಲಕ ಚಾಲನೆ ನೀಡಿದರು.
ಕಾರ್ಖಾನೆ ಯಾವುದೇ ಅಡೆತಡೆಯಿಲ್ಲದೆ ಕಬ್ಬು ನುರಿಸುವ ಕಾರ್ಯ ಮಾಡಲಿ ಎಂದು ಸ್ವಾಮೀಜಿಗಳು ಶುಭ ಕೋರಿದರು. ನಂತರ ನಡೆದ ಸಮಾರಂಭವನ್ನು ವಚನಾನಂದ ಮಹಾಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಎಂ.ಆರ್.ಎನ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಂಗಮೇಶ್ ನಿರಾಣಿ, ಪಾಂಡವಪುರ ಬಿಜೆಪಿ ಮುಖಂಡ ಡಾ. ಎನ್.ಎಸ್.ಇಂದ್ರೇಶ್, ಡಾ.ಮಾಯೀಗೌಡ ಸೇರಿದಂತೆ ಅನೇಕ ಗಣ್ಯರಿದ್ದರು.