ಮಳವಳ್ಳಿ ವಿಧಾನಸಭಾ ಕ್ಷೇತ್ರ ಚುನಾವಣೆಯ ಮತದಾನ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆ ನಡೆಯದೇ ತಾಲ್ಲೂಕಿನಾದ್ಯಂತ ಶಾಂತಿಯುತವಾಗಿ ನಡೆಯಿತು.
ಇಂದು ಬೆಳಿಗ್ಗೆ 7 ಗಂಟೆಯಲ್ಲಿ ಆರಂಭವಾದ ಮತದಾನ ಬೆಳಿಗ್ಗೆ ಸಮಯದಲ್ಲಿ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ ಸ್ವಲ್ಪ ಬಿರುಸುಗೊಂಡು ಸಂಜೆ 6 ಗಂಟೆಯೊಳಗೆ ಶೇ.73ರಷ್ಟು ಮತದಾನವಾಗಿದೆ.
ಮಳವಳ್ಳಿ ತಾಲ್ಲೂಕಿನ ಪೂರಿಗಾಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಅವರು ಕುಟುಂಬ ಸಮೇತರಾಗಿ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ ನರೇಂದ್ರಸ್ವಾಮಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವದ ನಿಜವಾದ ಮೂಲವೇ ಮತದಾನವಾಗಿದೆ, ಪ್ರಜಾಪ್ರಭುತ್ವ ಉಳಿವಿಗಾಗಿ ಮತದಾನ ಮಾಡಬೇಕೆಂದರು. ಕ್ಷೇತ್ರದಲ್ಲಿ ಬದಲಾವಣೆಗಾಗಿ ಮತ ಚಲಾವಣೆಯಾಗಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ, ನನ್ನನ್ನು ನಂಬಿರುವ ಮತದಾರರ ಋಣವನ್ನು ಪ್ರಾಮಾಣಿಕವಾಗಿ ತೀರಿಸುತ್ತೇನೆಂದು ಹೇಳಿದರು.
ಶಾಸಕ ಡಾ. ಕೆ.ಅನ್ನದಾನಿ ತಮ್ಮ ಸ್ವಗ್ರಾಮ ಹುಸ್ಕೂರು, ಮಾಜಿ ಸಚಿವ ಬಿ. ಸೋಮಶೇಖರ್ ಹೊಸಹಳ್ಳಿ, ಮುನಿರಾಜು ಅಟುವನಹಳ್ಳಿಯಲ್ಲಿ ಮತದಾನ ಮಾಡಿದರು.
ಮತಯಂತ್ರ ತೊಂದರೆ
ಮಳವಳ್ಳಿ ತಾಲ್ಲೂಕಿನ ದಬ್ಬಹಳ್ಳಿ ಮತ ಕೇಂದ್ರದಲ್ಲಿ ಇವಿಎಂ ಯಂತ್ರ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ಸಂಬಂಧಿಸಿದ ಇಂಜೀನಿಯರ್ ಕರೆಸಿ ಸರಿಪಡಿಸಲಾಯಿತು, ಇದರಿಂದ ಮತದಾನ ಪ್ರಕ್ರಿಯೆ ತಡವಾಗಿ ಆರಂಭವಾಯಿತು.
ಬಸ್ಗಾಗಿ ಪರದಾಟ
ಮತಹಾಕಲು ಬರುವ ಪ್ರಯಾಣಿಕರು ಬಸ್ಗಾಗಿ ಪರದಾಡಿದ ಘಟನೆ ನಡೆದಿದೆ. ಬಹುತೇಕ ಸಾರಿಗೆ ಬಸ್ಗಳನ್ನು ಮತಯಂತ್ರಗಳು ಹಾಗೂ ಚುನಾವಣಾ ಸಿಬ್ಬಂದಿಗಳನ್ನು ಸಾಗಿಸಲು ಬಳಸಿಕೊಂಡಿದ್ದರಿಂದ ಒಂದುಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಯಿತು.
ಪಿಂಕ್ ಮತಗಟ್ಟೆ
ಮತದಾರರನ್ನು ಸೆಳೆಯಲು ಪಟ್ಟಣದ ಅನಿತಾ ಕಾನ್ವೆಂಟ್ ಹಾಗೂ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಗಳಲ್ಲಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತ ಹಾಕಲು ಬರುವ ಮಹಿಳಾ ಮತದಾರರನ್ನು ವಿಶೇಷವಾಗಿ ಅಧಿಕಾರಿಗಳು ಸ್ವಾಗತಿಸಿದರು.
ಪೊಲೀಸ್ ಬಂದೋಬಸ್ತ್
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿವೈಎಸ್ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ತಾಲ್ಲೂಕಿನ 268 ಮತಗಟ್ಟೆಗಳಲ್ಲಿಯೂ ಪೊಲೀಸ್ ಸಿಬ್ಬಂದಿಗಳು ಹಾಗೂ ಅರೆ ಸೈನ್ಯ ಪಡೆಯನ್ನು ನಿಯೋಜಿಸಲಾಗಿತ್ತು.
ಮೊದಲ ಭಾರಿಗೆ ಮತದಾನ ಮಾಡಿದ ಯುವರಾಜ್ ಪಿ.ಎಂ ನರೇಂದ್ರಸ್ವಾಮಿ ಮಾತನಾಡಿ, ಮೊದಲ ಬಾರಿಗೆ ಮತವನ್ನು ನಮ್ಮ ತಂದೆಯವರಿಗೆ ಹಾಕಿರುವುದು ತುಂಬ ಖುಷಿ ತಂದಿದೆ. ಪ್ರಜಾಪ್ರಭುತ್ವ ಉಳಿವಿಗಾಗಿ ಅಭಿವೃದ್ದಿಗೆ ಮತ ನೀಡಬೇಕೆಂದು ಮನವಿ ಮಾಡಿದರು.




