ವರದಿ : ಪ್ರಭು ವಿ ಎಸ್
ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾ.ಪಂ.ಗಳನ್ನು ನಗರಸಭೆಯಿಂದ ಕೈಬಿಡುವಂತೆ ಒತ್ತಾಯಿಸಿ ಸ್ಥಳೀಯ ಸಾರ್ವಜನಿಕರು ಮದ್ದೂರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಾ.ಪಂ. ಇ.ಓ ರಾಮಲಿಂಗಯ್ಯ ಹಾಗೂ ಗ್ರೇಡ್-2 ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಆಗಮಿಸಿದ ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮ ಪಂಚಾಯಿತಿ ಉಳಿವು ಹೋರಾಟ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಪೇಟೆ ಬೀದಿ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಮೈಸೂರು-ಬೆಂಗಳೂರು ಹೆದ್ದಾರಿ ತಡೆ ನಡೆಸಿ ಬಳಿಕ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ನಾಲ್ಕು ಗ್ರಾ.ಪಂ.ಗಳ ವ್ಯಾಪ್ತಿಯ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸದೆ ಏಕ ಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದು ಅಧಿಸೂಚನೆ ಹೊರಡಿಸಿರುವುದನ್ನು ಒಕ್ಕೊರಲಿನಿಂದ ಖಂಡಿಸುವುದಾಗಿ ಈ ಭಾಗದ ರೈತರು ಕೃಷಿ ಕೂಲಿಕಾರ್ಮಿಕರಾಗಿದ್ದು ಇತರ ವರ್ಗದ ಬಡವರ್ಗದ ಜನರು ವಾಸಿಸುತ್ತಿದ್ದು ನಗರಸಭೆಯಾಗಿ ಪರಿವರ್ತನೆಯಾದರೆ ಅತಿಹೆಚ್ಚು ತೆರಿಗೆ ಕಟ್ಟಲು ಸಾಧ್ಯವಾಗದೆ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣವಾಗಲಿದ್ದು ಕೂಡಲೇ ಇದನ್ನು ನಗರಸಭೆಯಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಗ್ರಾ.ಪಂ. ಗಳು ನಗರಸಭೆಯಿಂದ ಹೊರಗುಳಿದರೆ ಗ್ರಾಮೀಣ ಕೃಪಾಂಕದಿಂದ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಸರಕಾರಿ ಉದ್ಯೋಗಕ್ಕೆ ಅನುಕೂಲವಾಗಲಿದ್ದು, ನೀರಿನ ತೆರಿಗೆ ಕನಿಷ್ಠ ಮಾಸಿಕ 25 ರೂ., ಮನೆಕಂದಾಯ ಕಡಿಮೆಯಾಗಲಿದ್ದು, ವಸತಿ ಯೋಜನೆಗಳು ನಿವೇಶನ ರಹಿತರಿಗೆ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಿಗಲಿದ್ದು ಜತೆಗೆ ನರೇಗಾ ಯೋಜನೆಯಡಿ 200 ಯೋಜನೆಗಳು ರೈತರಿಗೆ ಅನುಕೂಲ ಕಲ್ಪಿಸಿಕೊಡಲಿದ್ದು ಆದ್ದರಿಂದ ನಗರಸಭೆಯಿಂದ ಕೈಬಿಡುವಂತೆ ಆಗ್ರಹಿಸಿದರು.
ನಗರಸಭೆಯಾಗಿ ಪರಿವರ್ತನೆಯಾದರೆ ಅನಾನುಕೂಲಗಳು ಕಂಡು ಬರಲಿದ್ದು ಗ್ರಾಮೀಣ ಕೃಪಾಂಕ ರದ್ದು, ಮಾಸಿಕ ನೀರಿನ ತೆರಿಗೆ 300 ರೂ. ಮನೆಕಂದಾಯ ಕನಿಷ್ಠ ಶೇ. 15ರಷ್ಟು ಹೆಚ್ಚಾಗಲಿದ್ದು ಇನ್ನಿತರ ಹತ್ತು ಹಲವು ಸಮಸ್ಯೆಗಳು ಎದುರಾಗಲಿದ್ದು ಮತ್ತು ಸ್ಥಳೀಯ ಸಾರ್ವಜನಿಕರಿಗೆ ಅನುಕೂಲಕಿಂತ ಅನಾನುಕೂಲಗಳೇ ಕಂಡುಬರಲಿದ್ದು ಇದನ್ನರಿತು ಸರಕಾರ ಕೂಡಲೇ ನಗರಸಭೆಗೆ ಸೇರ್ಪಡೆಗೊಳಿಸದಂತೆ ಆಗ್ರಹಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸರಕಾರಕ್ಕೆ ಮನವಿ ಸಲ್ಲಿಸುವಂತೆ ವಿರೋಧದ ನಡುವೆಯೂ ನಗರಸಭೆಯನ್ನಾಗಿಸಲು ಮುಂದಾದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜತೆಗೆ ಪೌರಾಡಳಿತ ನಿರ್ದೇಶನಾಲಯ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆ ವೇಳೆ ವಿವಿಧ ಗ್ರಾಮಗಳ ಮುಖಂಡರಾದ ರೈತನಾಯಕಿ ಸುನಂದಮ್ಮ, ಅಂದಾನಿ ಸೋಮನಹಳ್ಳಿ, ಲಿಂಗಪ್ಪಾಜಿ, ಶಂಕರ್, ಪ್ರಸನ್ನ, ಕೃಷ್ಣಪ್ಪ, ಪುರುಷೋತ್ತಮ, ಬೋರಪ್ಪ, ರಾಮಲಿಂಗಯ್ಯ, ಮೋಹನ್, ಶಂಕರ್, ಸ್ವಾಮಿಗೌಡ, ಸಂತೋಷ್, ಜಿ.ಸಿ.ಮಹೇಂದ್ರ ನೇತೃತ್ವ ವಹಿಸಿದರು.




