Sunday, October 20, 2024

ಪ್ರಾಯೋಗಿಕ ಆವೃತ್ತಿ

ಶೇ. 43 ನಿರಾಳ- ಶೇ. 36 ಆತಂಕ | ಈ ಗೆಲುವು ಕರ್ನಾಟಕವನ್ನು ಆರೆಸ್ಸೆಸ್-ಬಿಜೆಪಿ ಮುಕ್ತ ಮಾಡುವೆಡೆ ಮೊದಲ ಹೆಜ್ಜೆ ಎಂದು ಭಾವಿಸಬಹುದೇ?

 ಶಿವಸುಂದರ್

ಶೇ. 43 ನಿರಾಳ- ಶೇ. 36 ಆತಂಕ

ಪ್ರಾಯಶಃ ಈ ದಿನ.ಕಾಂ ಮತ್ತು ಇಂಡಿಯಾ ಟುಡೆ-ಆಕ್ಸಿಸ್ ಸಂಸ್ಥೆಗಳನ್ನು ಹೊರತು ಪಡಿಸಿದರೆ ಈ ಬಾರಿಯ ಚುನಾವಣೆ ಈಬಗೆಯ ಅಚ್ಚರಿಯ ಹಾಗೂ ತಾತ್ಕಾಲಿಕವಾದ ನಿರಾಳವನ್ನು ಕೊಡುವ ಫ಼ಲಿತಾಂಶವನ್ನು ಕೊಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಈ ಬಾರಿ ಕಾಂಗ್ರೆಸ್ 136 ಸೀಟುಗಳನ್ನು ಪಡೆದುಕೊಂಡು ಕೇವಲ ಸರಳ ಬಹುಮತವನ್ನಲ್ಲ, ಸಾಪೇಕ್ಷವಾಗಿ ಸುರಕ್ಷಿತ ಬಹುಮತವನ್ನು ಪಡೆದುಕೊಳ್ಳುವತ್ತ ದಾಪುಗಾಲಿಟ್ಟಿದೆ. 1989 ರ ನಂತರ ಇದು ಕಾಂಗ್ರೆಸ್‌ನ ಅತ್ಯಂತ ದೊಡ್ಡ ಚುನಾವಣಾ ಸಾಧನೆ. ಹಾಗೆಯೇ ಹೆಚ್ಚುಕಡಿಮೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ. 43 ರಷ್ಟು ಓಟುಶೇರು ಪಡೆದುಕೊಂಡಿದೆ. ಇದು ಸಮೀಪ ಪ್ರತಿಸ್ಪರ್ದಿ ಬಿಜೆಪಿಗಿಂತ ಶೇ. 7 ರಷ್ಟು ಜಾಸ್ತಿ. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಶೇ. 43 ರಷ್ಟು ಓಟುಗಳನ್ನು ಪಡೆದುಕೊಂಡಿದ್ದು ಕೂಡ 1989ರಲ್ಲೇ.

ಸಾಮಾನ್ಯವಾಗಿ ಸೀಟು ಪ್ರಮಾಣವು ಸದ್ಯದ ಸರ್ಕಾರ ರಚನೆಯ ಸಮೀಕರಣವನ್ನು ಮಾತ್ರ ಹೇಳಿದರೆ ಓಟ್ ಶೇರಿನ ಪ್ರಮಾಣ ಮತ್ತದರ ಮಾರ್ಪಾಡುಗಳು ಒಂದು ಪಕ್ಷಕ್ಕೆ ಸಮಾಜದಲ್ಲಿ ಯಾವ್ಯಾವ ವರ್ಗಗಳು/ಸಮುದಾಯಗಳು ಬೆಂಬಲಿಸಿವೆ ಅಥವಾ ವಿರೋಧಿಸಿವೆ ಎಂಬುದನ್ನು ಹಾಗೂ ಅದರಲಿ ಆಗುತ್ತಿರುವ ಬದಲಾವಣೆಗಳನ್ನು ತೋರಿಸುತ್ತವೆ. ಅಂದರೆ ಸೀಟು ಶೇರು ಇಂದಿನ ಸ್ಥಿತಿಯನ್ನು ವಿವರಿಸಿದರೆ ಓಟು ಶೇರಿನ ಅದರ ಚಲನೆಯ ಗತಿ ಅಡಕವಾಗಿರುತ್ತದೆ.

ಕಾಂಗ್ರೆಸ್ ಪಕ್ಷ 2018 ರ ಚುನಾವಣೆಯಲ್ಲಿ ಬಿಜೆಪಿಗಿಂತ ಶೇ. 1.5 ರಷ್ಟ್ ಹೆಚ್ಚಿನ ಹೆಚ್ಚಿನ ಓಟು ಶೇರು ಅಂದರೆ ಶೇ. 38 ರಷ್ಟು ಓಟುಗಳನ್ನು ಪಡೆದುಕೊಂಡರೂ 78 ಸೀಟುಗಳನ್ನು ಮಾತ್ರ ಪಡೆದುಕೊಂಡಿತ್ತು. ಬಿಜೆಪಿ ಪಕ್ಷ ಶೇ. 36.5 ರಷ್ಟು ಓಟು ಶೇರು ಪಡೆದುಕೊಂಡರೂ 104 ಸೀಟುಗಳನ್ನು ಪಡೆದುಕೊಂಡಿತ್ತು. ಜೆಡಿಎಸ್ ಪಕ್ಷ ಶೇ. 18.36 ರಷ್ಟು ಓಟುಗಳನ್ನು ಪಡೆದುಕೊಂಡು 37 ಸೀಟುಗಳನ್ನು ಪಡೆದುಕೊಂಡಿತ್ತು. ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷ 2013 ಕ್ಕಿಂತ ಹೆಚ್ಚಿನ ಓಟು ಶೇರು ಪಡೆದುಕೊಂಡರೂ 43 ಸೀಟುಗಳನ್ನು ಕಳೆದುಕೊಂಡಿತ್ತು.

ಆದರೆ ಈ ಬಾರಿ ಕಾಂಗ್ರೆಸ್ಸಿನ ಓಟು ಶೇರು 2018 ರ ಹೋಲಿಕೆಯಲ್ಲಿ ಶೇ.5 ರಷ್ಟು ಜಾಸ್ತಿಯಾಗಿದೆ. ಮತ್ತು ಈ ಬಾರಿಯ ಬಿಜೆಪಿಯ ಓಟು ಶೇರಿಗಿಂತ ಶೇ. 7ರಷ್ಟು ಜಾಸ್ತಿಯಾಗಿದೆ. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ನಡೆದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಟ್ಟಾರೆಯಾಗಿ ಸಮಾಧಾನಕರ ಬಹುಮತವನ್ನು ಪಡೆದು ಗೆದ್ದಿದೆ.

ಹಾಗೆಯೇ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಧಾನವಾಗಿ ದಕ್ಷಿಣ ಕರ್ನಾಟಕದ ಪ್ರಾಂತ್ಯಗಳಲ್ಲಿ ನೇರ ಹಣಾಹಣಿ ನಡೆದಿದೆ. ಆದರೆ ಜೆಡಿಎಸ್ ಈ ಬಾರಿ ಪಡೆದ ಓಟು ಶೇರು ಕೇವಲ ಶೇ. 13. ಹೀಗಾಗಿ ದಕ್ಷಿಣ ಕರ್ನಾಟಕ ಪ್ರಾಂತ್ಯಗಳಲ್ಲೂ ಕಾಂಗ್ರೆಸ್ ಹೆಚ್ಚಿನ ಬಹುಮತ ಹಾಗೂ ಹೆಚ್ಚಿನ ಸೀಟು ಪಡೆದುಕೊಳ್ಳಲು ಸಾಧ್ಯವಾಗಿದೆ.

ದಕ್ಷಿಣ ಕರ್ನಾಟಕದ ಮತ್ತು ಜೆಡಿಎಸ್ ನ ಈ ಫ಼ಲಿತಾಂಶವನ್ನು ಮಾತ್ರ ಈ ದಿನ .ಕಾಂ ಮತ್ತು ಇಂಡಿಯಾ ಟುಡೆ ಸಮೀಕ್ಷೆಗಳೂ ಸಹ ಊಹಿಸಲು ಸಾಧ್ಯವಾಗಿರಲಿಲ್ಲ.

ಸದ್ಯಕ್ಕೆ ಲಭ್ಯವಾಗುತ್ತಿರುವ ಅಂಕಿಅಂಶಗಳ ಪ್ರಕಾರ ಕಾಂಗ್ರೆಸ್ಸಿನ ಹೆಚ್ಚುವರಿ ಓಟುಗಳಿಕೆಗೆ ಪ್ರಧಾನ ಕಾರಣ ಮಹಿಳಾ ಮತದಾರರು ಹೆಚ್ಚಿನ ಮಟ್ಟದಲ್ಲಿ ಓಟು ಹಾಕಿರುವುದು. ಹಾಗೆಯೇ ಕೆಲವು ತುರ್ತು ವಿಶ್ಲೇಷಣೆಗಳು ತಿಳಿಸುವಂತೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಾಂಪ್ರದಾಯಿಕವಾಗಿ ಬಿಜೆಪಿಗೆ ಬೀಳುತ್ತಿದ್ದ ಮತಗಳಲ್ಲಿ ಶೇ. 20 ರಷ್ಟು ಮತಗಳು ಕಾಂಗ್ರೆಸ್ ಕಡೆ ವಾಲಿರುವುದು ಹಾಗೆಯೇ ಬಿಜೆಪಿಗೆ ಬೀಳುತ್ತಿದ್ದ ದಲಿತರ ಮತಗಳಲ್ಲೂ ಶೇ. 10-15 ರಷ್ಟು ಕಾಂಗ್ರೆಸ್ಸಿನ ಕಡೆಗೆ ತಿರುಗಿರುವುದು. ಹಾಗೆಯೇ ದಕ್ಷಿಣ ಕರ್ನಾಟಕದಲ್ಲಿ ಜನತಾದಳಕ್ಕೆ ಬೀಳುತ್ತಿದ್ದ ಮುಸ್ಲಿಮರು ಮತ್ತು ದಲಿತರ ಓಟುಗಳಲ್ಲಿ ಶೇ. 20-30 ರಷ್ಟು ಓಟುಗಳು ಕಾಂಗ್ರೆಸ್‌ಗೆ ವರ್ಗಾವಣೆ ಆಗಿರುವುದೂ ಒಂದು ಕಾರಣ.

ಒಟ್ಟಾರೆ ಕರ್ನಾಟಕದಲ್ಲಿ ಗ್ರಾಮೀಣ ಬಡವರು-ದಲಿತರು-ಅಲ್ಪಸಂಖ್ಯಾತರು- ಮಹಿಳೆಯರು ಸಾಪೇಕ್ಷವಾಗಿ ಬಿಜೆಪಿ ಮತ್ತು ಜೆಡಿಎಸ್‌ಗಳಿಗಿಂತ ಕಾಂಗ್ರೆಸ್ಸಿಗೆ ಹೆಚ್ಚು ಓಟುಹಾಕಿದ್ದಾರೆ.

ಇದಕ್ಕೆ ಹಲವಾರು ಕಾರಣವಿರುವುದು ಸ್ಪಷ್ಟ. ಡಬಲ್ ಇಂಜಿನ್ ಸರ್ಕಾರದಲ್ಲಿ ಗ್ರಾಮೀಣ ಬಡವರು-ದಲಿತರು- ಮಹಿಳೆಯರ ಬವಣೆ ಹಲವು ಪಟ್ಟು ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ತೋರಿದ ಅಪಾರ ಉಪೇಕ್ಷೆ ಇತ್ಯಾದಿಗಳು ಜನರಲ್ಲಿ ಅಸಮಾಧಾನವನ್ನು ಮಡುಗಟ್ಟಿಸಿದನ್ನು ಓಟಿನ ರೀತಿ ಸ್ಪಷ್ಟಪಡಿಸುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಮಾಡುತ್ತೇನೆ ಎಂದು ಕೊಟ್ಟ ಗ್ಯಾರಂಟಿಗಳು ಈ ಮತದಾರರ ಮನಒಲಿಸಿರಬೇಕು. ಹಾಗೆಯೇ ಮುಸ್ಲಿಮರ ಮೇಲೆ ನಿರಂತರವಾಗಿ ಬಿಜೆಪಿ ಸರ್ಕಾರ ನಡೆಸಿದ ದಾಳಿಗಳಿಂದಾಗಿ ಮುಸ್ಲಿಮರು ಈ ಬಾರಿ ವಿಶೇಷವಾಗಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮಟ್ಟದಲ್ಲಿ ಕಾಂಗ್ರೆಸ್ಸಿಗೆ ಓಟು ಹಾಕಿರುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಭರವಸೆ ಮತ್ತು ಗ್ಯಾರಂಟಿಗಳನ್ನು ಕಾಂಗ್ರೆಸ್ ನಿಜವಾಗಿ ಈಡೇರಿಸುವುದೇ? ಈಡೇರಿಸದಿದ್ದರೆ ಅದು ಬಿಜೆಪಿ ಸಾಪೇಕ್ಷವಾಗಿ ಕಳೆದುಕೊಂಡಿರುವ ಶಕ್ತಿಯನ್ನು ವಾಪಸ್ ಗಳಿಸಿಕೊಡುವುದೇ?

ಸದ್ಯದ ನಿರಾಳ ಮತ್ತು ನಿಟ್ಟುಸಿರುಗಳ ನಡುವೆಯೂ ಈ ಪ್ರಶ್ನೆಗಳನ್ನು ಬಿಜೆಪಿ ಪಡೆದುಕೊಂಡಿರುವ ಓಟು ಶೇರು ಹುಟ್ಟಿಹಾಕುತ್ತದೆ. ಬಿಜೆಪಿ 2018 ರ ಚುನಾವಣೆಗೆ ಹೋಲಿಸಿದಲ್ಲಿ 40 ಸೀಟುಗಳನ್ನು ಕಳೆದುಕೊಂಡಿದ್ದರೂ ಅದರ ಓಟು ಪ್ರಮಾಣ ಕಡಿಮೆಯಾಗಿರುವುದು ಕೇವಲ ಶೇ. 0.6 ರಷ್ಟು ಮಾತ್ರ.

ಅಂದರೆ 2018 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 1.39 ಕೋಟಿ ಜನ ಓಟು ಹಾಕಿದ್ದರೆ ಬಿಜೆಪಿಗೆ 1.32 ಕೋಟಿ ಜನರು ಓಟು ಹಾಕಿದ್ದರು. ಜೆಡಿಎಸ್‌ಗೆ 67.39 ಲಕ್ಷ ಜನ ಓಟು ಹಾಕಿದ್ದರು.

2023 ರಲ್ಲಿ ಕರ್ನಾಟಕದ 5.5 ಕೋಟಿ ಮತದಾರರಲ್ಲಿ ಕಾಂಗ್ರೆಸ್ಸಿಗೆ 1.6 ಕೋಟಿ ಜನರು ಓಟು ಹಾಕಿದ್ದರೆ ಬಿಜೆಪಿಗೆ 1.4 ಕೋಟಿ ಜನರು ಓಟು ಹಾಕಿದ್ದಾರೆ. 2018 ಕ್ಕೆ ಹೋಲಿಸಿದಲ್ಲಿ ಬಿಜೆಪಿಯ ಮತದಾರರ ಮೊತ್ತ ಶೇಕಡಾವಾರು ಹಾಗೆ ಉಳಿದಿರುವುದು ಮಾತ್ರವಲ್ಲದೆ ಸಂಖ್ಯಾತ್ಮಕವಾಗಿಯೂ ಅದು 8 ಲಕ್ಷ ದಷ್ಟು ಹೆಚ್ಚಾಗಿದೆ.

ಇದು ಸಂಭ್ರಮದ ನಡುವೆಯೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯವಾಗಿದೆ. 1989 ರಿಂದ ಕಾಂಗ್ರೆಸ್ಸಿನ ಮತಪ್ರಮಾಣ ಶೇ. 36 ರಿಂದ ಶೇ. 43 ರ ನಡುವೆ ಏರುಪೇರಾಗುತ್ತಾ ಬಂದಿದೆ. ಆದರೆ ಬಿಜೆಪಿಯ ಮತಪ್ರಮಾಣ 1989 ರಲ್ಲಿ ಶೇ. 4.14 ರಷ್ಟಿದ್ದದ್ದು 2013 ರ ವಿಷೇಶ ಸಂದರ್ಭವನ್ನು ಹೊರತುಪಡಿಸಿದರೆ ಏಕಪ್ರಕಾರವಾಗಿ ಏರುತ್ತಲೇ ಬಂದು 2018ರಲ್ಲಿ ಶೇ. 36 ನ್ನು ಮುಟ್ಟಿದೆ. ಅಂದರೆ ಒಮ್ಮೆ ಅದು ತನ್ನ ಹಿಡಿತಕ್ಕೆ ತೆಗೆದುಕೊಂಡ ವರ್ಗ ಹಾಗೂ ಸಮುದಾಯಗಳನ್ನು ಹಾಗೆಯೇ ತನ್ನ ಜೊತೆಗೆ ಕೂಡಿಟ್ಟುಕೊಂಡು ಬಂದಿದೆ.

ಇದೀಗ ಅಪಾರ ಆಡಳಿತ ವಿರೋಧಿ ಅಲೆ, ಹಗರಣ, ಇತ್ಯಾದಿಗಳಿದ್ದರೂ ಕಾಂಗ್ರೆಸ್ ಬಿಜೆಪಿ ಕೂಡಿಟ್ಟುಕೊಂಡಿರುವ ಶೇ. 36 ರಷ್ಟು ಮತಗಂಟನ್ನು ಅಲುಗಾಡಿಸಲಾಗಿಲ್ಲ. ನಾವು ಅನುಸರಿಸುತ್ತಿರುವ ಚುನಾವಣಾ ಪದ್ಧತಿಯಿಂದಾಗಿ ಕಾಂಗ್ರೆಸ್ ಪಡೆದುಕೊಂಡಿರುವ ಬಿಜೆಪಿಗಿಂತ ಶೇ. 7 ರಷ್ಟು ಹೆಚ್ಚುವರಿ ಓಟು ಅದಕ್ಕೆ ಬಿಜೆಪಿಗಿಂತ 70 ಸೀಟುಗಳನ್ನು ಅಥವಾ ಬಿಜೆಪಿಗಿಂತ ಎರಡು ಪಟ್ಟುಆಂದರೆ ಶೇ. 100 ರಷ್ಟು ಹೆಚ್ಚು ಸೀಟುಗಳನ್ನು ಗಳಿಸಿಕೊಟ್ಟಿದೆ.

ಆದರೆ ಓಟಿನ ಪ್ರಮಾಣದಲ್ಲಿ ಕಾಂಗ್ರೆಸ್ಸು ಬಿಜೆಪಿಗಿಂತ ಶೇ. 7 ರಷ್ಟು ಹೆಚ್ಚುವರಿ ಮತಗಳನ್ನು ಪಡೆದುಕೊಂಡಿದೆ. ಮತ್ತು ಆ ಮತದಾರರು ಕಾಂಗ್ರೆಸ್ಸಿಗಿಂತ ಭಿನ್ನವಾಗಿ ಬಿಜೆಪಿಯ ರಾಜಕೀಯ ಸಿದ್ಧಾಂತಕ್ಕೂ ಮತಹಾಕುವವರು. ಮತ್ತು ಈ ಸಧೃಡೀಕೃತ ಶೇ.36 ರಷ್ಟು ಮತಪ್ರಮಾಣಕ್ಕೆ ಇತರ ಸಾಂದರ್ಭಿಕ ಕಾರಣಗಳಿಗಾಗಿ ಶೇ. 4 ಅಥವಾ ಶೇ. 5 ರಷ್ಟು ಮತಗಳು ಸೇರಿಕೊಂಡರೂ ಇತರ ಪಕ್ಷಗಳಿಗಿಂತ ಸುಲಭವಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಲ್ಲದು.

ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದರೂ ಎಲ್ಲಿಯತನಕ ಅದಕ್ಕೆ ಕಾಂಗ್ರೆಸ್ಸನ್ನು ಒಳಗೊಂಡಂತೆ ಇತರ ಪಕ್ಷಗಳಿಗೆ ಇಲ್ಲದಿರುವಷ್ಟು ಗಟ್ಟಿಯಾದ ಅದೂ ಶೇ. 36 ರಷ್ಟು ಜನರ ಬೆಂಬಲವಿರುತ್ತದೋ ಅಲ್ಲಿಯವರೆಗೆ ಕರ್ನಾಟಕ ಬಿಜೆಪಿ ಮುಕ್ತ ಅಥವಾ ಆರೆಸ್ಸೆಸ್ ಮುಕ್ತ ಎಂದು ಅಭಿನಂದಿಸಿಕೊಳ್ಳುವುದು ಆತುರದ ಮತ್ತು ಎಚ್ಚರಗೇಡಿ ಕ್ರಮವಾಗುತ್ತದೆ.

ಈ ಗೆಲುವು ಕರ್ನಾಟಕವನ್ನು ಆರೆಸ್ಸೆಸ್-ಬಿಜೆಪಿ ಮುಕ್ತ ಮಾಡುವೆಡೆ ಮೊದಲ ಹೆಜ್ಜೆ ಎಂದು ಭಾವಿಸಬಹುದೇ?

ಅದಕ್ಕೆ ಖಚಿತವಾದ ಉತ್ತರ ಕಷ್ಟ. ಏಕೆಂದರೆ ಈ ಹಿಂದಿನ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರವಿರಬಹುದು, ಈಗ ಹಾಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಚತ್ತೀಸ್‌ಘಡ್ ಮತ್ತು ರಾಜಸ್ತಾನ ಸರ್ಕಾರವಿರಬಹುದು, ಕೋಮುವಾದಿಗಳ ವಿರುದ್ಧ ಹಾಗೂ ಕೊಮುವಾದದ ವಿರುದ್ಧ ನಿರ್ಣಯಾತ್ಮಕ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅಷ್ಟು ಮಾತ್ರವಲ್ಲ ಚತ್ತೀಸ್ ಘಡ್ ಮತ್ತು ರಾಜಸ್ತಾನ ಸರ್ಕಾರಗಳಂತೂ ಗಂಜಲ ಇಲಾಖೆ, ರಾಮವನವಾಸ ಪ್ರವಾಸ ಪ್ರಸ್ಥಾನ, ಶಿವ ಪ್ರತಿಮೆ ಇತ್ಯಾದಿ ಹಿಂದುತ್ವದ ನಕಲು ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಾ ಸಮಾಜದಲ್ಲಿ ಹಿಂದುತ್ವಕ್ಕೆ ಕಾಂಗ್ರೆಸ್ ಆಡಳಿತದಲ್ಲೂ ಹೊಸ ಶಕ್ತಿ ಕೊಡುತ್ತಿವೆ. ಸಿದ್ಧಾರಾಮಯ್ಯನವರಿಗೆ ಪರಮ ಕೋಮುವಾದಿ ಸಂಪಾದಕರು ಪರಮಾಪ್ತ ಸ್ನೇಹಿತರು ಮಾತ್ರವಲ್ಲ, ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಆಳುತ್ತಿದ್ದ ಕಲ್ಲಡ್ಕ ರಿಪಬ್ಲಿಕ್ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಬಾರದೆಂಬ ಒತ್ತಡ ಕಾಂಗ್ರೆಸ್ ಪಕ್ಷದ ಒಳಗಿಂದಲೇ ಇತ್ತೆಂಬುದು ಗೊತ್ತಿರುವ ಸಂಗತಿ.

ಎರಡನೆಯದಾಗಿ ಅಧಿಕಾರದಲ್ಲಿ ಇಲ್ಲದಿರುವಾಗಲೇ ಬಿಜೆಪಿ ಮತ್ತು ಸಂಘಪರಿವಾರ ಸಮಾಜದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಿ ಹೆಚ್ಚೆಚ್ಚು ಧ್ರುವೀಕರಣಕ್ಕೆ ಪ್ರಯತ್ನಿಸುತ್ತದೆ. ಅಧಿಕಾರಕ್ಕೆ ಬಂದಾಗ ಅದನ್ನೇ ಶಾಸನಬದ್ಧಗೊಳಿಸುತ್ತದೆ. ವಿರೋಧಪಕ್ಷವಾಗಿದ್ದಾಗ ಸೆಕ್ಯುಲಾರ್ ಕ್ರಮಗಳ ವಿರುದ್ಧ ಸಂಘಪರಿವಾರ ನಿರಂತರವಾಗಿ ಬೀದಿಯಲ್ಲಿ ಜನರನ್ನು ಸಂಘಟಿಸುತ್ತದೆ. ಹೀಗಾಗಿ ಸಂಘಪರಿವಾರದ ದುಷ್ಟಪ್ರಯತ್ನಗಳನ್ನು ಬೀದಿಗಳಲಿ ಸೋಲಿಸುವ ಯೋಜನೆ ಮತ್ತು ಸಂಘಟನೆ ಕಾಂಗ್ರೆಸ್ಸಿಗೂ ಇಲ್ಲ. ಜನಸಂಘಟೆನೆಗಳಿಗೂ ಇಲ್ಲ.
ವಾಸ್ತವದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜನಪರ ಸಂಘಟನೆ ಮತು ಶಕ್ತಿಗಳು ಸ್ವತಂತ್ರ ಜನಸಂಘತನೆ ಮಾಡುವದಕ್ಕಿಂತ ಕಾಂಗ್ರೆಸ್ಸನ್ನು ಬಳಸಿಕೊಂಡು ಆ ಮೂಲಕ ಜನಹಿತ ಸಾಧಿಸುವ ಪ್ರಯತ್ನಗಳಲ್ಲಿ ತೊಡಗುವು ಸಾಧ್ಯತೆ ಇನ್ನು ಹೆಚ್ಚು.

ಇವೆಲ್ಲವೂ ಈ ಸಂಭ್ರಮದ ಹೊತ್ತಿನಲ್ಲೂ ಎಚ್ಚರವಾಗಿ ನಮ್ಮನ್ನು ಕಾಡಬೇಕು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!