ಪಾಂಡವಪುರದಲ್ಲಿ ಇತ್ತೀಚೆಗೆ ನಡೆದ ಶ್ರದ್ದಾಂಜಲಿ ಸಭೆಯೊಂದರಲ್ಲಿ ನಾನು ಮಾತನಾಡಿರುವ ಮಾತುಗಳಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ಪಾಂಡವಪುರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ನನ್ನ ತಾಯಿ, ದೇವೇಗೌಡರೇ ನನ್ನ ತಂದೆ ಸಮಾನ ಎಂಬ ಅರ್ಥದಲ್ಲಿ ವಾಡಿಕೆಯಂತೆ ಮಾತನಾಡಿದ್ದೇನೆ, ಆದರೆ ನನ್ನ ಮಾತಿನಲ್ಲಿ ಬೇರೆಯವರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ನನ್ನ ಜೊತೆಯಲ್ಲಿದ್ದವರೇ ಡಬಲ್ ಗೇಮ್ ಆಡಿದ್ದಾರೆ. ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡೇ ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ನಾನು ಮಾತನಾಡಿದ್ದೇನೆ, ಇದು ನಮ್ಮ ಪಕ್ಷಕ್ಕೆ ಸಂಬಂಧಿಸಿದ ವಿಚಾರ ಎಂದು ಸ್ಪಷ್ಟಪಡಿಸಿದರು.
ನನಗೆ ಹೆಣ್ಣು ಮಕ್ಕಳ ಬಗ್ಗೆ ವಿಶೇಷವಾದ ಗೌರವವಿದೆ, 29 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೆ, ಜಿ.ಪಂ.ಸದಸ್ಯನಾಗಿ, ಶಾಸಕನಾಗಿ, ಸಂಸದನಾಗಿ, ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ, ನಾನು ಏನಾದರೂ ಮಾತನಾಡಿದ್ದರೆ ನನ್ನ ಜೊತೆಯಲ್ಲಿದ್ದುಕೊಂಡೆ ಬೆನ್ನಿಗೆ ಚೂರಿ ಹಾರಿದವರ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ಬೇರೆ ಯಾವುದೇ ವ್ಯಕ್ತಿಯ ಬಗೆಗಲ್ಲ ಎಂದರು.
ಕ್ಷೇತ್ರಕ್ಕೆ ಹಲವು ಕಾಮಗಾರಿಗಳನ್ನು ಕಾನೂನು ಬದ್ದವಾಗಿಯೇ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ, ಆದ್ದರಿಂದ ಅಂತಹ ಕಾಮಗಾರಿಗಳಿಗೆ ಅಧಿಕಾರಿಗಳು ತಡೆಯೊಡ್ಡುವುದು ಬೇಡ, ಒಂದು ವೇಳೆ ತಡೆಯೊಡ್ಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.




