ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಪಕ್ಷಾತೀತವಾಗಿ ನನ್ನ ಬೆಂಬಲಕ್ಕೆ ನಿಂತ ಎಲ್ಲಾ ಮತದಾರರು ಹಾಗೂ ಕ್ಷೇತ್ರದ ಜನತೆಗೆ ಆಭಾರಿಯಾಗಿದ್ದೇನೆಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಹೇಳಿದರು.
ಮಂಡ್ಯನಗರದ ಕಲಾ ಮಂದಿರದ ಹಿಂಭಾಗದಲ್ಲಿರುವ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ನಡೆದ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಪ್ರಚಾರವನ್ನು ಕೈಗೊಂಡ ನನ್ನೊಂದಿಗೆ ಬಹಳ ಜನ ಕೈಜೋಡಿಸಿದರು, ಅದರಲ್ಲಿ ಗಂಟಗೌಡನಹಳ್ಳಿ, ಹುಲಿವಾನ, ಮಾರಗೌಡನಹಳ್ಳಿ, ಉಮ್ಮಡಹಳ್ಳಿ, ಕೀಲಾರ ಗ್ರಾಮದ ಜನರ ಬೆಂಬಲವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಬಸರಾಳು ಹೋಬಳಿಯ ಹುನುಗನಹಳ್ಳಿ ಭಾಗದಲ್ಲಿ ಭಾಗದಲ್ಲಿ ಪ್ರಚಾರ ನಡೆಸಿದ ಸಂದರ್ಭದಲ್ಲಿ ಹಲವು ಗ್ರಾಮದ ಗ್ರಾಮಸ್ಥರು, ತಾಯಂದಿರು ಬೆಂಬಲ ನೀಡಿದರು. ಅವರೆಲ್ಲರ ಬೆಂಬಲವಿಲ್ಲದಿದ್ದರೆ ನಾನು 15 ಸಾವಿರ ಮತಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮರಿಸಿದರು.
ರಾಜಕೀಯ ಗುರು ಎಂ.ಶ್ರೀನಿವಾಸ್, ಅವರ ಅಳಿಯ ಹೆಚ್.ಎನ್.ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ, ಲೋಕೇಶ್ ಅವರು ನನ್ನೊಂದಿಗೆ ಕೈ ಜೋಡಿಸಿ ಹಗಲಿರುಳು ಶ್ರಮಿಸಿದ್ದಾರೆ. ಅಲ್ಲದೇ ಪಿಇಎಸ್ ಕಾಲೇಜಿನ ಸಿಬ್ಬಂದಿ ವರ್ಗ ಸಂಪೂರ್ಣವಾಗಿ ನನ್ನನ್ನು ಬೆಂಬಲಿಸಿದೆ ಅವರೆಲ್ಲರಿಗೆ ಕೃತಜ್ಞತ ಸಲ್ಲಿಸುತ್ತೇನೆಂದರು.
ಸಭೆಯಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್, ಮುಖಂಡ ಹೆಚ್.ಎನ್.ಯೋಗೇಶ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.




