Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಾವೇರಿಗಾಗಿ ತಮಿಳುನಾಡು ನಿರಂತರ ಕುತಂತ್ರ ನಡೆಸಿತು: ಕೆ.ಎಸ್ ನಂಜುಂಡೇಗೌಡ

ಕಾವೇರಿ ವಿಚಾರದಲ್ಲಿ ತಮಿಳುನಾಡು ನಿರಂತರ ಕುತಂತ್ರ ಮತ್ತು ವಾಮ ಮಾರ್ಗ ಅನುಸರಿಸಿದೆ, ಎರಡು ರಾಜ್ಯಗಳ ನಡುವಿನ ಜಲ ವಿವಾದ ಕಾನೂನು ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದರು ಸಹ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಪಕ್ಷವನ್ನ ಬೆಂಬಲಿಸಿ ಕಾವೇರಿ ನ್ಯಾಯಾಧೀಕರಣ ರಚನೆಗಾಗಿ ದೊಡ್ಡ ಲಾಭಿ ಮಾಡಿತು ಎಂದು ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ಹೇಳಿದರು.

ಮಂಡ್ಯನಗರದ ಗಾಂಧಿ ಭವನದಲ್ಲಿ ಕಾವೇರಿ ಹಿತರಕ್ಷಣಾ ಸಮನ್ವಯ ಸಮಿತಿ ಸಹಯೋಗದಲ್ಲಿ ನಡೆದ ಕಾವೇರಿ ನದಿ ನೀರಿನ ಸಮಸ್ಯೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನ್ಯಾಯಾಧೀಕರಣ ರಚನೆಯಾದಗಿನಿಂದಲೇ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಶುರುವಾಯಿತು, ಆದರೆ ಕರ್ನಾಟಕ ರಾಜ್ಯದ ರಾಜಕಾರಣಿಗಳು ರಾಜ್ಯದ ಹಿತ ಕಾಪಾಡಲು ಮುಂದಾಗಲಿಲ್ಲ, ಕಾವೇರಿ ವಿಚಾರದಲ್ಲಿ ಯಾವುದೇ ಆದೇಶವನ್ನು ತಿರಸ್ಕರಿಸುವ ಗಟ್ಟಿ ದನಿ ಎತ್ತಲಿಲ್ಲ ಎಂದು ಹೇಳಿದರು.

ಕಾವೇರಿ ನದಿ ಬದುಕಿನ ವಿಚಾರ, ಇದರಲ್ಲಿ ನಂಬಿಕೆ ಇರಬೇಕು, ಸಂಕುಚಿತ ಮನೋಭಾವ ಸರಿಯಲ್ಲ, ಪರ್ಯಾಯ ಎಂಬ ಆಲೋಚನೆ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು, ಎಲ್ಲರೂ ಮಾಡುತ್ತಿರುವುದು ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಎಂಬ ಪ್ರಜ್ಞೆ ಇರಬೇಕು, ನಿರಂತರ ಹೋರಾಟ ಮುಖ್ಯ, ಎಲ್ಲಾ ಶಕ್ತಿ ಒಗ್ಗೂಡಿ ಮುನ್ನಡೆಯಬೇಕಾಗಿದೆ, ಕೆಲವರು ಮತ ಬ್ಯಾಂಕ್ ಮತ್ತೆ ಕೆಲವರು ಸ್ಥಾನಮಾನಕ್ಕಾಗಿ ಹೋರಾಟದಲ್ಲಿ ಭಾಗಿಯಾಗಬಹುದು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು, ಇದುವರೆಗಿನ ಕಾವೇರಿ ಹೋರಾಟವನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಆಯಾ ಕಾಲಘಟ್ಟದಲ್ಲಿ ಆಡಳಿತದಲ್ಲಿದ್ದ ಪಕ್ಷಗಳು ಮತ್ತು ಪ್ರತಿ ಪಕ್ಷದಲ್ಲಿದ್ದ ಪಕ್ಷಗಳು ಯಾವ ರೀತಿ ನಡೆದುಕೊಂಡಿವೆ,ಅವರ ಪಕ್ಷ ಅಧಿಕಾರದಲ್ಲಿದ್ದಾಗ ಆ ಪಕ್ಷದ ನಾಯಕರ ವರ್ತನೆ,ವಿರೋಧ ಪಕ್ಷದಲ್ಲಿದ್ದಾಗ ಅವರ ವರ್ತನೆ ಎಲ್ಲವನ್ನು ಜನತೆ ನೋಡಿದ್ದಾರೆ ಎಂದು ಹೇಳಿದರು.

ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಅಧ್ಯಕ್ಷತೆ ವಹಿಸಿದ್ದರು, ಮಾಜಿ ಸಚಿವ ಎಂ ಎಸ್ ಆತ್ಮಾನಂದ ವಿಚಾರ ಸಂಕಿರಣ ಉದ್ಘಾಟಿಸಿದರು, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಸಮಿತಿ ಅಧ್ಯಕ್ಷ ಅಂದಾನಿ ಸೋಮನಹಳ್ಳಿ, ಬೇಕರಿ ರಮೇಶ್, ಕರವೇ ರಾಜ್ಯ ಉಪಾಧ್ಯಕ್ಷ ಮಾ.ಸೋ ಚಿದಂಬರ್, ಜಿಲ್ಲಾಧ್ಯಕ್ಷ ಶಂಕರೇಗೌಡ, ಪುಟ್ಟಮ್ಮ ನಿರ್ಮಲ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!