ವರದಿ: ನ.ಲಿ.ಕೃಷ್ಣ
ಮದ್ದೂರು ಕ್ಷೇತ್ರ ದಲ್ಲಿ ನೂರಾರು ಸಮಸ್ಯೆಗಳು ಇವೆ, ಇವುಗಳನ್ನೆಲ್ಲ ಹಂತ ಹಂತವಾಗಿ ಪರಿಹರಿಸುವ ಮೂಲಕ ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಿಯೇ ತೀರುತ್ತೇನೆ ಎಂದು ಮದ್ದೂರು ಕ್ಷೇತ್ರದ ನೂತನ ಶಾಸಕ ಕೆ. ಎಮ್. ಉದಯ್ ತಿಳಿಸಿದರು.
ಮದ್ದೂರು ಪಟ್ಟಣದ ಬಳಿಯ ಸೋಮನಹಳ್ಳಿ ಬಳಿ ನಡೆದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಸರ್ಕಾರಿ ಕಚೇರಿಗಳ ಭ್ರಷ್ಟಾಚಾರ ತಾಂಡವವಾಡುತ್ತಿತ್ತು, ಅದರಿಂದ ಸಾರ್ವಜನಿಕರು ನಲುಗಿದ್ದಾರೆ. ಇನ್ನೂ ಮುಂದೆ ಲಂಚಮುಕ್ತವಾಗಿ ಸಾರ್ವಜನಿಕರ ಕೆಲಸಗಳು ಆಗುವಂತಹ ವಾತಾವರಣ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿದರು.
ಶಾಸಕರ ಕಚೇರಿಯನ್ನು ತಾಲ್ಲೂಖು ಆಪೀಸ್ ನಲ್ಲೇ ತೆರೆಯಲು ಉದ್ಧೇಶಿಸಲಾಗಿದೆ, ಇದರಿಂದ ಲಂಚಕ್ಕೆ ಕಡಿವಾಣ ಬೀಳಲಿದೆ, ಇನ್ನೂ 10 ದಿನಗಳಲ್ಲಿ ಶಾಸಕರ ಕಚೇರಿ ತೆರೆಯಲಾಗುವುದು, ಸಾಮಾನ್ಯ ಕೂಲಿ ಕಾರ್ಮಿಕನು ಕೂಡ ತಮ್ಮ ನೇರವಾಗಿ ಭೇಟಿ ಮಾಡಬಹುದು, ಇದಕ್ಕೆ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ, ನಾನೂ ಜನಸಾಮಾನ್ಯರೆಲ್ಲರಿಗೂ ಲಭ್ಯವಿದ್ದೇನೆ ಎಂದರು.

ನನ್ನ ಬಗ್ಗೆ ಕೆಲವರು ಅಪಪ್ರಚಾರ ನಡೆಸಿದರೂ ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇರಿಸಿ ಬಿ ಫಾರಂ ನೀಡಿತು, ತಾವೆಲ್ಲಾ ಅಷ್ಠೇ ನಂಬಿಕೆಯಿಂದ ನನಗೆ ಮತ ನೀಡಿ ಗೆಲ್ಲಿಸಿದ್ದೀರಿ, ಅದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ವಕ್ತಾರರಾದ ಟಿ. ಎಸ್. ಸತ್ಯಾನಂದ ಮಾತನಾಡಿ, ಗೋಮುಖ ವ್ಯಾಘ್ರದಂತಿದ್ದ ಡಿ ಸಿ ತಮ್ಮಣ್ಣ ಸೋಲು ಅನುಭವಿಸಿದ್ದು, ಎಸ್.ಎಂ.ಶಂಕರ್ ಹಾಗೂ ಎಂ ಎಸ್ ಸಿದ್ದರಾಜು ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್. ಎಮ್. ಕೃಷ್ಣ ಅವರು ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು ಡಿ ಸಿ ತಮ್ಮಣ್ಣ ಅವರಿಗೆ ಮದ್ದೂರು ಕ್ಷೇತ್ರದಲ್ಲಿ ಸ್ಪರ್ದಿಸಲು ಅವಕಾಶ ನೀಡಿದ್ದರು. ಆದರೆ ಡಿ ಸಿ ತಮ್ಮಣ್ಣನವರು ಎಸ್ ಎಮ್ ಕೃಷ್ಣ ಅವರ ಕುಟುಂಬದ ಹಿತ ಬಯಸಲಿಲ್ಲ. ಹಾಗೇಯೇ ಎಂ.ಎಸ್. ಸಿದ್ದರಾಜು ಅವರಿಗೆ ಎರಡು ಬಿ ಫಾರಂ ಕೊಡುವಂತೆ ನೋಡಿಕೊಂಡರು ಎಂದು ಹಿಂದಿನ ಘಟನಾವಳಿಗಳನ್ನು ಪ್ರಸ್ತಾಪಿಸಿ ತಮ್ಮಣ್ಣ ವಿರುದ್ದ ವಾಗ್ದಾಳಿ ನಡೆಸಿದರು.
ಡಿ. ಸಿ. ತಮ್ಮಣ್ಣನವರು ಮಾಡುತ್ತಿದ್ದ ಕುಯುಕ್ತಿ ರಾಜಕಾರಣಕ್ಕೆ ವಿದಾಯ ಹೇಳಲು ಉದಯ್ ಅವರನ್ನ ಮದ್ದೂರು ಕ್ಷೇತ್ರ ದ ಜನರು ಆಯ್ಕೆ ಮಾಡಿದ್ದಾರೆ. ಇಬ್ಬರು ವಿಧಾನಪರಿಷತ್ ಸದಸ್ಯರ ಒಟ್ಟಿಗೆ ಶಾಸಕರಾಗಿ ಉದಯ್ ಅವರು ಗೆಲುವು ಸಾಧಿಸಿರುವುದು ಇದಕ್ಕೆ ಪೂರಕವಾಗಿ ನಮ್ಮೆಲ್ಲರ ನಾಯಕ ಡಿ. ಕೆ. ಶಿವಕುಮಾರ್ ಅವರು ಅಯ್ಕೆ ಆಗಿರುವುದು ಮದ್ದೂರಿನ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು
ಪರಿಶಿಷ್ಠ ವಿಭಾಗದ ಉಪಾಧ್ಯಕ್ಷ ಹೊಂಬಯ್ಯ ಮಾತನಾಡಿ, ಜನರ ಆಶೀವಾರ್ದದಿಂದ ಇಂತಹ ದೊಡ್ಡಗೆಲುವು ಸಾಧಿಸಲು ಸಾಧ್ಯವಾಗಲಿದೆ ಎಂದರು.
ಮಾಜಿ ಪುರಸಭಾ ಸದಸ್ಯ ಮನ್ಸೂರ್ ಆಲಿ ಖಾನ್ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ಇಡೀ ಮುಸ್ಲಿಂ ಸಮುದಾಯ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಕೆ ಎಮ್ ಉದಯ್ ಅವರಿಗೆ ಮತ ನೀಡಿದ್ದು ಇತಿಹಾಸ.
ನೂತನ ಶಾಸಕರು ನಮ್ಮೆಲ್ಲರ ನೋವು ನಲಿವಿಗೆ ಸಕಾಲಿಕವಾಗಿ ಸ್ಪಂದಿಸಲಿ ಎಂದು ಆಶಿಸಿದರು
ವೇದಿಕೆಯಲ್ಲಿ ಮದ್ದೂರು ಬ್ಲಾಕ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಜಿ. ಪಂ. ಮಾಜಿ ಸದಸ್ಯ ಅಣ್ಣೂರು ರಾಜೀವ್, ಕಿಸಾನ್ ಕಾಂಗ್ರೆಸ್ ನ ದೇಶಹಳ್ಳಿ ಮೋಹನ್ ಕುಮಾರ್, ಮುಖಂಡರಾದ ಕೊತ್ತನಹಳ್ಳಿ ಬಸವರಾಜ್, ಹೊನ್ನಲಗೆರೆ ಪುಟ್ಟಸ್ವಾಮಿ, ಚಲುವರಾಜ್ ತೈಲೂರು ರಘು, ಟಿ. ಲಿಂಗ, ಸಿ. ಟಿ. ಶಂಕರ್ ಹಿಟ್ಟನಹಳ್ಳಿಕೊಪ್ಪಲು, ನಟರಾಜ್ ಮತ್ತಿತರರಿದ್ದರು.




