ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಕಿರಣ್‌ರಾಜ್ ನಿರ್ದೇಶನದ ‘ಲಾಟರಿ ಟಿಕೆಟ್’ ಕಿರುಚಿತ್ರಕ್ಕೆಗೋವಾದ ಪಣಜಿಯಲ್ಲಿ ನಡೆದ ಇಂಟರ್ ನ್ಯಾಷನಲ್ ಫೀಲಂ ಫೆಸ್ಟಿವಲ್ ನಲ್ಲಿ ”ಬೆಸ್ಟ್ ಟೆಲಿ ಫಿಲಂ ಅವಾರ್ಡ್ ಹಾಗೂ ಬೆಸ್ಟ್ ಸ್ಕ್ರಿಪ್ ರೈಟರ್ ಅವಾರ್ಡ್” ದೊರೆತಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿರಣ್ ರಾಜ್ ಕನ್ನಡ ಸೇನೆಯ ಸಾಂಸ್ಕೃತಿಕ ಘಟಕದ ಉಪಾಧ್ಯಕ್ಷರಾಗಿದ್ದು, ಇವರು ಕಿರುಚಿತ್ರ ನಿರ್ದೇಶಕರಾಗಿ ಇಲ್ಲಿಯವರೆಗೆ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮೂರನೇ ಕಿರುಚಿತ್ರವಾದ ‘ಲಾಟರಿ ಟಿಕೆಟ್’ ಚಿತ್ರವು ಇಳಾ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತ ಇಬ್ಬರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ ಎಂದರು.
ನಿರ್ದೇಶಕ ಕಿರಣ್ ರಾಜ್ ಮಾತನಾಡಿ, ನನ್ನ ಕಿರುಚಿತ್ರಗಳಿಗೆ ಪ್ರಶಸ್ತಿ ದೊರೆದಿರುವುದು ಖುಷಿ ತಂದಿದೆ, ಈಗಾಗಲೇ ಚಿತ್ರ ನಿರ್ದೇಶನಕ್ಕೆ ಅವಕಾಶಗಳು ಬರುತ್ತಿವೆ ಎಂದು ಹೇಳಿಕೊಂಡರು.
ಲಾಟರಿ ಟಿಕೆಟ್ ಕಿರುಚಿತ್ರವು ಬಿಡುಗಡೆ ಮುನ್ನವೆ ಧಾರವಾಡದಲ್ಲಿ ರಾಷ್ಟ್ರಮಟ್ಟದ ಚಲನಚಿತ್ರ ಸ್ಪರ್ಧೆಯಲ್ಲಿ ಉತ್ತಮ ನಿರ್ದೇಶಕ ಹಾಗೂ ಉತ್ತಮ ನಟ ಎಂಬ ಎರಡು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಚಿತ್ರವು ಪ್ರಸಿದ್ಧ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಈ ಚಿತ್ರವು ಗಂಡ ಹೆಂಡತಿ ಸಂಬಂಧದ ಬಗ್ಗೆ ಉತ್ತಮ ಸಂದೇಶವನ್ನು ನೀಡುವ ಸಾಮಾಜಿಕ ಕಳಕಳಿಯ ಚಿತ್ರವಾಗಿದೆ ಎಂದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಮಹಾಂತಪ್ಪ, ಸಂಚಾಲಕ ಸಾತನೂರು ಶಿವರಾಜ್ ಉಪಸ್ಥಿತರಿದ್ದರು.




