Tuesday, November 24, 2026

ಪ್ರಾಯೋಗಿಕ ಆವೃತ್ತಿ

ದೊರೆಸ್ವಾಮಿಯವರನ್ನು ನೆನೆಯುತ್ತ….

ಸಾರ್….
ಇಂದು…

ನೀವು ನಮ್ಮನ್ನು
ಅಗಲಿದ ದಿನವೋ…

ಅಥವಾ

ನಾವು ನಿಮ್ಮಿಂದ
ಆಗಲುತ್ತಿರುವ ದಿನವೋ…

ಅರ್ಥವಾಗದೆ ಕಳವಳ ಹೆಚ್ಚುತ್ತಿದೆ..
ಎದೆ ಭಾರವಾಗಿದೆ…

ಈ ಹೊತ್ತಿನಲ್ಲಿ….
ನೀವು ಇರಬೇಕಿತ್ತು…. ಸಾರ್..

ನೂರು ನಿರಸನಗಳ ನಡುವೆಯೂ
ನಿತ್ರಾಣಗೊಳ್ಳದೇ
ನಡೆಯುವುದು ಹೇಗೆಂದು ಕಲಿಸಲು

ನೀವು ಇರಬೇಕಿತ್ತು….ಸಾರ್

ಸುರಮನೆಯ ಸೋಲಿಸಲು
ಅರಮನೆಯ ಆಸರೆಯು
ಅನಿವಾರ್ಯ ಎನ್ನುವ ಹೊತ್ತಿನಲ್ಲಿ ..

ಗುಡಿಸಲುಗಳ ವಿವೇಕವಾಗಿ
ನೀವು ಇರಬೇಕಿತ್ತು ಸಾರ್…

ಇತ್ತ ಪ್ರಾಣ ತೆಗೆವ ಕೊಲೆಗಾರ
ಅತ್ತ ಕಣ್ಣು ಕಿವಿಗಳ ಅಡ ಕೇಳುವ
ಬೇಟೆಗಾರ..
ಇಲ್ಲದ ಆಯ್ಕೆಯನ್ನು ಹುಡುಕುತ್ತಿರುವ
ಹೊತ್ತಿನಲ್ಲಿ ..

ಮಾನಪ್ರಾಣಗಳೆರಡರ ಸ್ವಾಭಿಮಾನದ
ಸಂಕೇತವಾಗಿ
ನೀವು ಇರಬೇಕಿತ್ತು ..ಸಾರ್

ಹಿಡಿಯಿಲ್ಲದ ರಾಜದಂಡ ಹಿಡಿದು
ಮೇಲೇಳಲು ಯತ್ನಿಸುತ್ತಿರುವ
ಜನಹೀನ ನಿತ್ರಾಣ ಬಂಡಾಯಗಳು
ಅಸಾಹಾಯಕ ಆತ್ಮಹತ್ಯಾತ್ಮಕ
ತರ್ಕಗಳಲ್ಲಿ ಮುಳುಗಿರುವ ಹೊತ್ತಿನಲ್ಲಿ

ನಡುವನೆಂದೂ ಬಗ್ಗಿಸದೆ
ನೈತಿಕ ನಾಗರಿಕತ್ವದ
ದಾರಿ ತೋರಿದ ..

ನೀವು ಇರಬೇಕಿತ್ತು ಸಾರ್..

ಸುರಿದ ಮಳೆಗೆ ತುಂಬಿದ ಗುಂಡಿಯನ್ನು
ತಾವೇತೋಡಿದ ಭಾವಿಯೆಂದು
ಭ್ರಮಿಸುತ್ತಿರುವ
ಈ ಹೊತ್ತಿನಲ್ಲಿ…

ಮಳೆಗಾಲವಿರಲಿ,
ಬರಗಾಲವಿರಲಿ…
ಭಗೀರಥರಂತೆ ನಿರಂತರ
ಅಂತರ್ಜಲ ಖನನ ನಡೆಸಿದ

ನೀವು ಇರಬೇಕಿತ್ತು ….ಸಾರ್…

ದ್ವೇಷ ದ್ರೋಹಗಳ
ಸಾರೋಟಿಗಿಂತ
ಧಾರ್ಷ್ಟ್ಯ -ದರ್ಪಗಳ
ಜೋಡೆತ್ತು ಸವಾರಿ
ಮೇಲು ಎನ್ನುವ ಈ ಹೊತ್ತಿನಲ್ಲಿ

ಶಾಂತಿಯ ತೋಟಕ್ಕೆ
ಕಾಲು ನಡಿಗೆಯನ್ನೆ
ನಂಬಿ ನಡೆದ ನೀವು…

ಇರಬೇಕಿತ್ತು ಸಾರ್…

ನೀವು ಇಂದು ಇರಬೇಕಿತ್ತು
ನಮ್ಮ ಕಿವಿ ಹಿಂಡಬೇಕಿತ್ತು…

– ಶಿವಸುಂದರ್

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ