ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿಗೆ ಈ ಬಾರಿಯೂ ಸಚಿವ ಸ್ಥಾನ ನೀಡದಿರುವುದು ಜಿಲ್ಲೆ ಹಾಗೂ ಮಳವಳ್ಳಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಾರಿ ಅಸಮಾಧಾನ ತಂದಿದೆ.
ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಸಿರಾಡುವಂತೆ ಮಾಡಿದ್ದು ಮಳವಳ್ಳಿಯ ಪಿ.ಎಂ. ನರೇಂದ್ರಸ್ವಾಮಿ ಎಂದು ತಪ್ಪಾಗಲಾರದು. ಲೋಕಸಭೆ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತಿ ಚುನಾವಣೆ,ಯಾವುದೇ ಚುನಾವಣೆ ಇರಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಬಹಳ ಶ್ರಮ ಹಾಕುವ ವ್ಯಕ್ತಿ ನರೇಂದ್ರ ಸ್ವಾಮಿ.

2013ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಸಂದರ್ಭದಲ್ಲಿ ಮಂಡ್ಯದಲ್ಲಿ ಅಂಬರೀಶ್, ಮಳವಳ್ಳಿಯಲ್ಲಿ ಪಿ.ಎಂ. ನರೇಂದ್ರಸ್ವಾಮಿ ಇಬ್ಬರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದರು. ಉಳಿದ ಐದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಆಗ ಸಿಎಂ ಸಿದ್ದರಾಮಯ್ಯನವರು ಅಂಬರೀಶ್ ಅವರನ್ನು ಸಚಿವರನ್ನಾಗಿ ಮಾಡಿಕೊಂಡರು.ಆಗಲೂ ನರೇಂದ್ರ ಸ್ವಾಮಿಯವರು ಸಚಿವ ಸ್ಥಾನದಿಂದ ವಂಚಿತರಾಗಿದ್ದರು.
ಸಚಿವ ಸ್ಥಾನ ದೊರೆತ ಅಂಬರೀಶ್ ಅವರಿಗೆ ಜಿಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸುವ ಅವಕಾಶವಿತ್ತು. ಆದರೆ ಅವರು ಪಕ್ಷ ಸಂಘಟಿಸುವಲ್ಲಿ ವಿಫಲರಾದರು. ಈ ಹಿನ್ನಲೆಯಲ್ಲಿ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಹೀನಾಯವಾಗಿ ನೆಲಕಚ್ಚಿತ್ತು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲೂ ಕೂಡ ನರೇಂದ್ರಸ್ವಾಮಿ ಸೋತಿದ್ದರು. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದಿದ್ದ ಚಲುವರಾಯಸ್ವಾಮಿ ಹಾಗೂ ರಮೇಶ್ ಬಾಬು ಬಂಡಿಸಿದ್ದೇಗೌಡ ದೊಡ್ಡ ಅಂತರದಲ್ಲೇ ಸೋತಿದ್ದರು. ಅದಾಗಿ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಜೋಡೆತ್ತುಗಳಂತೆ ಕೆಲಸ ಮಾಡಿದ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದರು. ಇದಕ್ಕೆ ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಾ.ದಳ ಭದ್ರಕೋಟೆಯನ್ನು ಭೇದಿಸಿ ಅವರ ಅಭ್ಯರ್ಥಿಗಳನ್ನು ಮಣಿಸಿ ಆಯ್ಕೆಯಾಗಿದ್ದೇ ಸಾಕ್ಷಿಯಾಗಿದೆ.
ಪಕ್ಷ ನಿಷ್ಠಗೆ ಬೆಲೆ ಇಲ್ಲ ಜಿಲ್ಲೆಯಲ್ಲಿ ಈ ಬಾರಿ ಒಕ್ಕಲಿಗ ಹಾಗೂ ದಲಿತ ಸಮುದಾಯ ಕಾಂಗ್ರೆಸ್ ಪಕ್ಷದ ಕಡೆ ಬಂದಿದೆ. ಅದರಲ್ಲೂ ದಲಿತ ಸಮುದಾಯದ ಮತಗಳು ಈ ಬಾರಿ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರ ನಿಂತಿದೆ ಎಂಬುದೇ ಫಲಿತಾಂಶ ದಿಂದ ಸಾಬೀತಾಗಿದೆ ಮಳವಳ್ಳಿ ಕ್ಷೇತ್ರದಲ್ಲಿ ದಲಿತ ಸಮುದಾಯ ದೊಡ್ಡ ಮಟ್ಟದಲ್ಲಿ ನರೇಂದ್ರ ಸ್ವಾಮಿ ಅವರ ಪರ ನಿಂತಿರುವುದಕ್ಕೆ ಅವರು ಗಳಿಸಿದ 46,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವುದೇ ಸಾಕ್ಷಿಯಾಗಿದೆ.ಇಂತಹ ನರೇಂದ್ರ ಸ್ವಾಮಿಯವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈ ತಪ್ಪಿರುವುದು ಬೇಸರ ತಂದಿದೆ ಎಂದು ಪುರಸಭೆ ಮಳವಳ್ಳಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನರೇಂದ್ರಸ್ವಾಮಿ ಅವರು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಎತ್ತಿದ ಕೈ. ಇದಕ್ಕೆ ಕಳೆದ ಎರಡು ವಿಧಾನ ಪರಿಷತ್ ಚುನಾಣೆಗಳೇ ಸಾಕ್ಷಿ. ಮಳವಳ್ಳಿ ತಾಲೂಕಿನಿಂದ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕೊಡಿಸಿದ್ದಾರೆ. ಚುನಾವಣೆ ಯಾವುದೇ ಯಾವುದೇ ಇರಲಿ, ಕಾಂಗ್ರೆಸ್ ಪಕ್ಷದ ಪರ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ನರೇಂದ್ರ ಸ್ವಾಮಿಯವರಿಗೆ ಸಚಿವ ಸ್ಥಾನ ನೀಡಿದ್ದರೆ ಮಳವಳ್ಳಿ ಕ್ಷೇತ್ರದ ಜೊತೆಗೆ ಜಿಲ್ಲೆಯೂ ಅಭಿವೃದ್ಧಿ ಕಾಣುತ್ತಿತ್ತು. ಜಿಲ್ಲೆಯಲ್ಲಿ ಜೋಡೆತ್ತುಗಳಂತೆ ದುಡಿಯುತ್ತಾ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿರುವ ಚಲುವರಾಯಸ್ವಾಮಿಯವರಿಗೆ ಸಚಿವ ಸ್ಥಾನ ನೀಡಿರುವಂತೆ, ಜೋಡೆತ್ತುಗಳಲ್ಲಿ ಮತ್ತೊಬ್ಬರಾದ ನರೇಂದ್ರ ಸ್ವಾಮಿಯವರಿಗೆ ಅಧಿಕಾರ ನೀಡಿದ್ದರೆ, ಇಬ್ಬರೂ ಸೇರಿ ಮಂಡ್ಯ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬಹುದಿತ್ತು.

ನರೇಂದ್ರ ಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ಮಾಧ್ಯಮಗಳ ಮುಂದೆ ಚಲುವರಾಯಸ್ವಾಮಿ ಕೂಡ ಬೇಸರ ವ್ಯಕ್ತಪಡಿಸಿ, ಅವರಿಲ್ಲದೆ ನಾನು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಬೇಸರ ತರುತ್ತಿದೆ ಎಂದು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮನಸ್ಸು ಮಾಡಿ ಸಚಿವ ಸ್ಥಾನ ನೀಡಿದ್ದರೆ ಮಂಡ್ಯ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣುತ್ತಿತ್ತು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ವಾದ.
ನಾಯಕರ ನಿಷ್ಠೆಯ ಪಿಎಂಎನ್
ಹಳೇ ಮೈಸೂರು ಭಾಗದಲ್ಲಿ ಪಿ.ಎಂ. ನರೇಂದ್ರಸ್ವಾಮಿ ಅವರದ್ದು ದಲಿತ ನಾಯಕರಲ್ಲಿ ಮುಂಚೂಣಿಯ ಹೆಸರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನಿಷ್ಠರಾಗಿರುವ ನರೇಂದ್ರ ಸ್ವಾಮಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಅದಮ್ಯ ವಿಶ್ವಾಸವಿತ್ತು. ಏಕೆಂದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದರು.ಆದರೆ ಅವರಿಬ್ಬರೂ ಇವರ ಕೈ ಹಿಡಿಯಲೇ ಇಲ್ಲ.
2008ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೆ ಪಕ್ಷೇತರವಾಗಿ ಗೆದ್ದ ನರೇಂದ್ರಸ್ವಾಮಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಸಚಿವರಾದ ಎರಡು ವರ್ಷಗಳಲ್ಲಿಯೇ ಗುರು ಸಿದ್ದರಾಮಯ್ಯ ಅವರ ಮಾತು ಕೇಳಿ ಬಿಜೆಪಿ ಸರ್ಕಾರದಿಂದ ಹೊರಬರುವ ನಿರ್ಧಾರ ಮಾಡಿದರು. ಇದರಿಂದ ಸಿಟ್ಟಿಗೆದ್ದ ಸಿಎಂ ಯಡಿಯೂರಪ್ಪ ಸ್ಪೀಕರ್ ಮೂಲಕ ಅವರ ಸದಸ್ಯತ್ವ ರದ್ದು ಮಾಡಿಸಿ, ಶಾಸಕ ಸ್ಥಾನವೇ ವಜಾ ಆಗುವಂತೆ ನೋಡಿಕೊಂಡರು. ಯಡಿಯೂರಪ್ಪ ಅವರನ್ನು ಇಳಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡದ್ದಲ್ಲದೆ, ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು.
ಹತ್ತಾರು ತಿಂಗಳು ಸುಪ್ರೀಂ ಕೋರ್ಟ್ ಗೆ ಅಲೆದಾಡಿದ ನಂತರ ಮತ್ತೆ ಶಾಸಕ ಸ್ಥಾನ ಸಿಕ್ಕಿದರೂ ಕೂಡ ಸಿದ್ದರಾಮಯ್ಯನವರ ಮಾತಿಗೆ ಮನ್ನಣೆ ನೀಡಿ ಸಚಿವ ಸ್ಥಾನವನ್ನು ತ್ಯಾಗ ಮಾಡಿದ ನರೇಂದ್ರ ಸ್ವಾಮಿ ನಿಷ್ಟೆಯನ್ನು ಪರಿಗಣಿಸಿ ಸಿದ್ದರಾಮಯ್ಯನವರು ಈ ಬಾರಿಯ ಸಂಪುಟದಲ್ಲಿ ಅವರನ್ನು ಸೇರ್ಪಡೆ ಮಾಡಿಕೊಳ್ಳಬಹುದಿತ್ತು. ಆದರೆ ಅವರು ತಮ್ಮ ಒಡನಾಡಿ ದಲಿತ ನಾಯಕ ಅವರನ್ನು ಹೆಚ್.ಸಿ.ಮಹದೇವಪ್ಪ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ನರೇಂದ್ರ ಸ್ವಾಮಿಯವರಿಗೆ ಸಚಿವ ಸ್ಥಾನ ನಿರಾಕರಿಸಿರುವುದು ನೋವಿನ ಸಂಗತಿ ಎಂದು ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.
2018ರ ಚುನಾವಣೆಯಲ್ಲಿ ಹೆಚ್.ಸಿ. ಮಹದೇವಪ್ಪನವರು ಸಿದ್ದರಾಮಯ್ಯನವರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡದ ಕಾರಣ ಬಹುತೇಕರು ಸೋತಿದ್ದರು. ಇದಕ್ಕೆ ಮಹದೇವಪ್ಪನವರು ದೇವೇಗೌಡರ ಮಾತು ಕೇಳಿ ಆರ್ಥಿಕವಾಗಿ ಸಹಾಯ ಮಾಡದಿರುವುದೇ ಕಾರಣ ಎಂದು ಈಗಲೂ ಸಿದ್ದರಾಮಯ್ಯ ಆಪ್ತರು ಆಕ್ರೋಶ ಪಡಿಸುತ್ತಾರೆ.ಈ ಕಾರಣದಿಂದ ಈ ಬಾರಿ ದಲಿತ ಕೋಟಾದಡಿ ನರೇಂದ್ರ ಸ್ವಾಮಿ ಮಂತ್ರಿ ಆಗುತ್ತಾರೆ ಎಂಬ ಮಾತುಗಳು ದಟ್ಟವಾಗಿಯೇ ಕೇಳಿ ಬರುತ್ತಿತ್ತು.ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿರುವುದರ ಹಿಂದೆ ಯಾರ ಕೈವಾಡ ಇದೆಯೋ ಗೊತ್ತಿಲ್ಲ.
ಎರಡನೇ ಬಾರಿ ಶಾಸಕರಾಗಿರುವ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ.ಆದರೆ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನರೇಂದ್ರಸ್ವಾಮಿಯವರಿಗೆ ಸಚಿವ ಸ್ಥಾನ ಏಕೆ ನೀಡಿಲ್ಲ? ದಲಿತ ಸಮುದಾಯ ಈ ಬಾರಿ ಕಾಂಗ್ರೆಸ್ ಪಕ್ಷದ ಜೊತೆ ನಿಂತಿರುವಾಗ ನರೇಂದ್ರಸ್ವಾಮಿಯವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸದಿರುವುದು ಎಷ್ಟು ಸರಿ? 46,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ದಲಿತ ಸಮುದಾಯದ ನಾಯಕನನ್ನು ಈ ರೀತಿ ಕಡೆಗಣಿಸಿದ್ದು ಸರಿಯಲ್ಲ ಎಂದು ದಲಿತ ಮುಖಂಡರು ಆಕ್ರೋಶದಿಂದ ನುಡಿಯುತ್ತಿದ್ದಾರೆ.
2013ರಲ್ಲಿ ಶಾಸಕರಾಗಿದ್ದ ಪಿ.ಎಂ. ನರೇಂದ್ರಸ್ವಾಮಿ ಅವರು ಎಸ್ಸಿ, ಎಸ್ಟಿ ಸಮಿತಿಯ ಅಧ್ಯಕ್ಷರಾಗಿ ಹಲವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನೆರವಾಗಿದ್ದರು. ಇಂಜಿನಿಯರಿಂಗ್ ಪದವೀಧರರಾಗಿರುವ ನರೇಂದ್ರ ಸ್ವಾಮಿಯವರು ದೂರದೃಷ್ಟಿ ಉಳ್ಳವರಾಗಿದ್ದು,ಜಿಲ್ಲೆಯ ಅಭಿವೃದ್ಧಿ ಬಗ್ಗೆ ಹತ್ತಾರು ಯೋಜನೆಗಳನ್ನು ಹಾಕಿ ಕೊಂಡಿದ್ದರು.ಅವರಿಗೆ ಸಚಿವ ಸ್ಥಾನ ನೀಡಿದ್ದರೆ ದಲಿತ ಸಮುದಾಯ,ಜಿಲ್ಲೆ ಮತ್ತು ಮಳವಳ್ಳಿ ತಾಲೂಕು ಕೂಡ ಅಭಿವೃದ್ಧಿಯಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ನಿಷ್ಠ ನರೇಂದ್ರ ಸ್ವಾಮಿ ಅವರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡದೆ ಕಡೆಗಣಿಸಿದ್ದು ಬೇಸರದ ಸಂಗತಿ ಎಂದು ಜಿಲ್ಲೆಯ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ.




