ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗದ್ದೆ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವಿರುದ್ಧ ಕ್ರಮ ಜರುಗಿಸುವಂತೆ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಗ್ರಾಮಸ್ಥರು ಮನ್ ಮುಲ್ ಉಪ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಹಿಂದಿನ ಕಾರ್ಯದರ್ಶಿ ಮಂಜೇಗೌಡ 20.07.2019 ಕ್ಕೆ ತಮ್ಮ ನಿವೃತ್ತಿ ವಯಸ್ಸು ಮುಗಿದಿದ್ದರೂ ನಿವೃತ್ತಿ ಪಡೆಯದೆ ಮೂರು ವರ್ಷಗಳಿಂದ ನಿಯಮಬಾಹಿರವಾಗಿ ಕೆಲಸ ನಿರ್ವಹಿಸಿದ್ದಲ್ಲದೆ ಸಂಘದ ಆಡಳಿತ ಮಂಡಳಿಯ ನಿರ್ಣಯ ಪುಸ್ತಕದಲ್ಲಿ ನಿರ್ದೇಶಕರ ನಕಲಿ ಸಹಿ ಮಾಡಿಕೊಂಡು ತಮ್ಮ ಪುತ್ರನನ್ನು ಪ್ರಭಾರ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಅದಲ್ಲದೆ ಸಂಘದಲ್ಲಿ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆಸಿದ್ದರೂ ಮೇಲ್ವಿಚಾರಕ ಶಿವಶಂಕರ್ ಅಥವಾ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ದೂರು ನೀಡಿ 15 ದಿನಗಳು ಕಳೆದರೂ ಕ್ರಮ ಜರುಗಿಸದೆ ಬೇಜಾವಬ್ದಾರಿತನ ತೋರಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಕೆ.ಆರ್.ಪೇಟೆ ಉಪ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಯದರ್ಶಿ, ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಮೇಲ್ವಿಚಾರಕ ಶಿವಶಂಕರ್ ವಿರುದ್ಧ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡುವಂತೆ ಸಂಘದ ನಿರ್ದೇಶಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಗ್ರಾಮಸ್ಥರು ಮತ್ತು ಸಂಘದ ನಿರ್ದೇಶಕರು ನಮ್ಮ ಸಂಘದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಹಲವಾರು ಬಾರಿ ದೂರ ನೀಡಿದರೂ ಮೇಲ್ವಿಚಾರಕ ಶಿವಶಂಕರ್ ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೇಲ್ವಿಚಾರಕರು ಕಾರ್ಯದರ್ಶಿಯೊಂದಿಗೆ ಶಾಮೀಲಾಗಿ ಕಾರ್ಯದರ್ಶಿ ಮಂಜೇಗೌಡ ನಡೆಸುತ್ತಿರುವ ಅವ್ಯವಹಾರಗಳಿಗೆ ಸಹಕಾರ ನೀಡುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಆದ್ದರಿಂದ ತಾವೇ ಖುದ್ದಾಗಿ ಭೇಟಿ ನೀಡಿ ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉಪ ಕಚೇರಿಯ ಉಪ ವ್ಯವಸ್ಥಾಪಕ ಮರಿರಾಚಯ್ಯ, ಈ ವಿಚಾರವಾಗಿ ನನಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಹಾಗಾಗಿ ಸಂಘದಲ್ಲಿ ಏನಾಗಿದೆ ಎಂಬುದನ್ನು ನಾಳೆಯೇ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಗದ್ದೆಹೊಸೂರು ಜಾಲ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಜಿ.ಆರ್.ಜಗದೀಶ್, ಜಿ.ಬಿ.ಗೌತಮ್, ಜಿ.ಎಮ್.ಶಶಿಧರ, ನಾಗಮ್ಮ, ರಂಗಯ್ಯ, ಲಕ್ಷ್ಮಿ ದೇವಿ, ಭೈರೇಗೌಡ, ಗ್ರಾಮದ ಮುಖಂಡರಾದ ಜಿ.ಎನ್.ಪಾಂಡುರಂಗ, ಬಾಲಚಂದ್ರ, ಜಿ.ವಿ .ಚಂದ್ರಶೇಖರ್, ಮಹೇಶ್, ಜಿ.ಆರ್.ಚಂದ್ರಶೇಖರ್, ದರ್ಶನ್, ಜಿ.ಎನ್.ದೀಪು ಸೇರಿದಂತೆ ಹಲವಾರು ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




