ಕೆ.ಆರ್.ಪೇಟೆ ತಾಲ್ಲೂಕಿನ ಆಡಳಿತ ಜಡ್ಡುಗಟ್ಟಿಹೋಗಿದೆ, ರೈತಬಾಂಧವರಿಗೆ ಅತೀ ಮುಖ್ಯವಾಗಿ ಬೇಕಾಗಿರುವ ಕಂದಾಯ ಇಲಾಖೆಯನ್ನು ಒಳಗೊಂಡಿರುವ ತಾಲ್ಲೂಕು ಆಡಳಿತ ಕಾರ್ಯ ಸೌಧವಾಗಿರುವ ಮಿನಿ ವಿಧಾನಸೌಧವು ಭ್ರಷ್ಟಾಚಾರದ ಆಗರವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಕಿಡಿಕಾರಿದರು.
ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಕಟ್ಟಡದಲ್ಲಿ ಶಾಸಕರ ನೂತನ ಕಚೇಇ ರಿಯನ್ನು ರೈತರೊಬ್ಬರಿಂದ ಉದ್ಘಾಟನೆ ಮಾಡಿಸಿ ಮಾತನಾಡಿದ ಅವರು, ತಿಂಗಳಲ್ಲಿ ಕನಿಷ್ಠ ಎರಡು ದಿವಸ ಮಿನಿ ವಿಧಾನಸೌಧದಲ್ಲಿ ಬೆಳಗಿನಿಂದ ಸಂಜೆಯವರೆಗೆ ಕುಳಿತು ಶ್ರೀಸಾಮಾನ್ಯರ ನೋವಿಗೆ ಧನಿಯಾಗಿ ಕೆಲಸ ಮಾಡುತ್ತೇನೆ. ಜನಸಾಮಾನ್ಯರ ಕೆಲಸ ಮಾಡದೇ ಕಛೇರಿಗೆ ಅಲೆದಾಡಿಸುವ ಅಧಿಕಾರಿಗಳಿಂದ ಹೇಗೆ ಜನರ ಕೆಲಸ ಮಾಡಿಸಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂದರು.
ಕೆ.ಆರ್.ಪೇಟೆ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಯು ನನ್ನ ಮೂಲಮಂತ್ರವಾಗಿದೆ. ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸ ಹಾಗೂ ಭರವಸೆಯಿಟ್ಟು ನನ್ನನ್ನು ತಾಲೂಕಿನ ಶಾಸಕನನ್ನಾಗಿ ಆಯ್ಕೆ ಮಾಡಿ ನನ್ನ ಜೀವನದಲ್ಲಿಯೇ ಮರೆಯಲಾಗದ ಕಾಣಿಕೆ ನೀಡಿದ್ದಾರೆ. ಜನತೆಯ ಕೆಲಸವನ್ನು ಬದ್ಧತೆಯಿಂದ ಮಾಡಿಕೊಡುವ ಮೂಲಕ ಒಬ್ಬ ಶಾಸಕನಾದವನು ಹೇಗೆ ಕೆಲಸ ಮಾಡಬೇಕು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದು ಹೇಳಿದರು.
ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಂಡು ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗುಣಾತ್ಮಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡಿ, ಸರ್ಕಾರಿ ಶಾಲೆಗಳ ಶಿಕ್ಷಕರು ಶಾಲೆಗಳ ಬಲವರ್ಧನೆಗೆ ಕೆಲಸ ಮಾಡಬೇಕು. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಸೇರಿದಂತೆ ವಿದ್ಯಾರ್ಥಿಗಳಿಗೆ ತಲುಪಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ತಲುಪಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಫಲವು ಬಡಜನರು ಸೇರಿದಂತೆ ಅರ್ಹರಿಗೆ ತಲುಪಬೇಕೇ ಹೊರತು ರಾಜಕೀಯ ಪುಡಾರಿಗಳು ಹಾಗೂ ದಳ್ಳಾಳಿಗಳು ಸೇರಿದಂತೆ ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರ ವಹಿಸಬೇಕು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್, ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಕೀಲ ವಡ್ಡರಹಳ್ಳಿ ಧನಂಜಯ ಕುಮಾರ್, ಸಿಡಿಪಿಓ ಅರುಣಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್ ಮತ್ತಿತರರಿದ್ದರು.




