ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಿರಮಹಳ್ಳಿ ಗ್ರಾಮದಲ್ಲಿ “ಅಣಬೆ ಬೇಸಾಯ, ಸಂಸ್ಕರಣೆ ಮತ್ತು ಮಾರಾಟ” ಕುರಿತು ತರಬೇತಿ ಕಾರ್ಯಕ್ರಮವು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಇವರ ವತಿಯಿಂದ ಇತ್ತಿಚೇಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಗ್ರಾ.ಪಂ. ಸದಸ್ಯೆ ದೇವಜಮಣಿ ಮಾತನಾಡಿ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿರಿ ಎಂದು ತಿಳಿಸಿದರು.
ಕೃಷಿ ಸೂಕ್ಷ್ಮ ಜೀವಿಶಾಸ್ತ್ರ ತಜ್ಞ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಎನ್. ಉಮಾಶಂಕರ್ ಮಾತನಾಡಿ, ಅಣಬೆ ಎಲ್ಲರೂ ಸಹ ಉಪಯೋಗಿಸಬಹುದಾದ ಅತ್ಯುತ್ತಮವಾದ ಪೌಷ್ಠಿಕವಾದ ಆಹಾರ ಪದಾರ್ಥ. ಅಣಬೆಯಲ್ಲಿ ಶೇ. 30 ರಷ್ಟು ಸಸಾರಜನಕ, ಅವಶ್ಯಕ ಅಮೈನೊ ಆಮ್ಲಗಳು, ಜೀವಸತ್ವಗಳು ಹಾಗೂ ಇತರೇ ಪೊಷಕಾಂಶಗಳು ಸಹ ಇವೆ. ಬೇರೆ ಯಾವುದೇ ಸಸ್ಯಜನ್ಯ ವಸ್ತುಗಳಲ್ಲಿ ಸಾಮಾನ್ಯವಾಗಿ ಸಿಗದಿರುವಂತಹ ಫೋಲಿಕ್ ಆಮ್ಲ ಅಣಬೆಯಲ್ಲಿದ್ದು ಇದರ ಸೇವನೆಯಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಆದ್ದರಿಂದ ಅಣಬೆಯನ್ನು ತಿನ್ನಿ, ಅಪೌಷ್ಠಿಕತೆಯನ್ನು ಗ್ರಾಮದಿಂದ ದೂರ ಮಾಡಿರಿ. ಜೊತೆಗೆ ಕಡಿಮೆ ಖರ್ಚಿನಲ್ಲಿ, ಕಡಿಮೆ ಶ್ರಮವಹಿಸಿ ಹಾಗೂ ಕಡಿಮೆ ಜಾಗದಲ್ಲಿ ಅಣಬೆ ಬೆಳೆಯಬಹುದು ಎಂದು ತಿಳಿಸಿದರು ಮತ್ತು ಅಣಬೆ ಬೇಸಾಯದ ಸರಳ ತಾಂತ್ರಿಕತೆಯನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸ್ವತ: ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ತಾಂತ್ರಿಕತೆಯನ್ನು ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಡ್ಯ ಕೃಷಿ ಮಹಾವಿದ್ಯಾಲಯದ ವಿಸ್ತರಣಾ ತಜ್ಞ ಹಾಗೂ ಕಾರ್ಯಕ್ರಮದ ಸಹ ಸಂಯೋಜಕ ಡಾ. ಜಿ. ನಾಗೇಶ್ ಮಾತನಾಡಿ, ಅಣಬೆ ಬೇಸಾಯವು ಇತ್ತೀಚಿನ ದಿನಗಳಲ್ಲಿ ಲಾಭದಾಯಕ ಉದ್ಯಮವಾಗಿದೆ. ಪ್ರತಿನಿತ್ಯ ಅಣಬೆಗೆ ನಗರ ಪ್ರದೇಶಗಳಲ್ಲಿನ ತಜಾ ತರಕಾರಿ ಅಂಗಡಿಗಳು, ಸೂಪರ್ ಮಾರುಕಟ್ಟೆಗಳು, ಹೋಟಲ್ ಅಥವಾ ರೆಸ್ಟೋರೆಂಟ್ಗಳಲ್ಲಿ ಅಪಾರವಾದ ಬೇಡಿಕೆ ಇದೆ. ಸ್ಥಳೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ಉತ್ತಮವಾಗಿ ಪ್ಯಾಕ್ ಮಾಡಿ, ಶೀಘ್ರವಾಗಿ ರವಾನೆ ಮಾಡುವುದರಿಂದ ಅಣಬೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು ಜೊತೆಗೆ ಮನೆಯ ಸದಸ್ಯರೆಲ್ಲರೂ ಅಂದರೆ ಮಹಿಳೆಯರು ಮತ್ತು ಮಕ್ಕಳು ಸೇರಿ ಅಣಬೆ ಬೇಸಾಯ ಮಾಡಿ ಸಂಸಾರದ ಆದಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಮಂಡ್ಯದ ವಿ. ಸಿ. ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ತಜ್ಞ ಡಾ. ಮಹಾದೇವಯ್ಯ ಮಾತನಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಿಮ್ಮ ಗ್ರಾಮಕ್ಕೆ ಬಂದು ಇಷ್ಟೇಲ್ಲ ವ್ಯವಸ್ಥೆ ಮಾಡಿಕೊಂಡು ತರಬೇತಿ ನೀಡುತ್ತಿರುವುದು ನಿಮ್ಮಲ್ಲರ ಸೌಭಾಗ್ಯವೇ ಸರಿ. ಸ್ತ್ರೀ ಶಕ್ತಿ ಸಂಘದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಅಣಬೆ ಬೆಳೆಯಿರಿ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.




