Monday, November 23, 2026

ಪ್ರಾಯೋಗಿಕ ಆವೃತ್ತಿ

ನೋಮಿ ಒಸಾಕಾ ಎಂಬ ಬೆಂಕಿಯ ಚೆಂಡು

✍️ ಹರೀಶ್ ಗಂಗಾಧರ್

ನೋಮಿ ಒಸಾಕಾ ಎಂಬ ಬೆಂಕಿಯ ಚೆಂಡು
(The privilege is not having to put up with everyday racism/castism.)

ಆಗಸ್ಟ್ 9, 2014. ಸೇಂಟ್ ಲೂಯಿಸ್ ಪಟ್ಟಣದ ದಾರಿಯೊಂದರಲ್ಲಿ ಕಪ್ಪು ವರ್ಣದ ಬ್ರೌನ್ ಮತ್ತವನ ಗೆಳೆಯ ನಡೆದು ಹೋಗುತ್ತಿದ್ದರು. ಅಲ್ಲಿಗೊಂದು ಪೊಲೀಸ್ ಗಸ್ತು ವಾಹನ ಬಂತು. ನಿಮಿಷಗಳಲ್ಲಿ ಏಳು ಗುಂಡುಗಳು ಬ್ರೌನ್ ದೇಹ ಹೊಕ್ಕಿದ್ದವು. ಪೊಲೀಸ್ ಅಧಿಕಾರಿ ಡ್ಯಾರೆನ್ ವಿಲ್ಸನ್ ಕಾರಣವಿಲ್ಲದೆ ಗುಂಡು ಹಾರಿಸಿದ್ದ. ರಸ್ತೆಯ ನಡುವೆಯೇ ಮುಗ್ಧ ಬ್ರೌನ್ ದೇಹ ರಕ್ತದ ಮಡುವಿನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಬಿದ್ದಿತ್ತು. ವಿಲ್ಸನ್ ಮೇಲೆ ಯಾವ ಅಪರಾಧದ ಆರೋಪವು ದಾಖಲಾಗಲಿಲ್ಲ.

ಫೆಬ್ರುವರಿ 2012 ಸ್ಟಾನ್ ಫೋರ್ಡ್, ಫ್ಲೋರಿಡಾ. ಹದಿನೇಳು ವರ್ಷದ ಟ್ರೇವನ್ ಮಾರ್ಟಿನ್ ಅಂಗಡಿಯಿಂದ ತಿಂಡಿ ಕೊಂಡು ಮನೆಗೆ ಹೋಗುತ್ತಿದ್ದ. ಕಪ್ಪು ವರ್ಣದ ಮಾರ್ಟಿನ್ನನ್ನ ನೋಡಿದ ಜಾರ್ಜ್ ಜಿಮ್ಮರ್ಮನ್ ಎಂಬ ಬಿಳಿಯ ” ಇಲ್ಲೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ” ಎಂದು ಪೊಲೀಸರಿಗೆ ಕರೆ ಮಾಡಿದ. ಮನೆಗೆ ಊಟ ಕೊಂಡೊಯ್ಯುತ್ತಿದ್ದ ಹದಿನೇಳು ವರ್ಷದ ಹುಡುಗನ ಯಾವ ಅನುಮಾನ?? ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಜಿಮ್ಮರ್ಮನ್ ಯಾವುದೇ ಕಾರಣವಿಲ್ಲದೆ ಮಾರ್ಟಿನ್ ಜೊತೆ ವಾದಕ್ಕಿಳಿದ. ಯಾವುದೇ ಪ್ರಚೋದನೆಯಿಲ್ಲದೆ ಗುಂಡು ಹಾರಿಸಿಬಿಟ್ಟ. ಮಾರ್ಟಿನ್ ಬದುಕುಳಿಯಲಿಲ್ಲ. ಜಿಮ್ಮರ್ಮನ್ನನ್ನು ಬಂಧಿಸಲು ಪೊಲೀಸರಿಗೆ ಆರು ವಾರಗಳಾಯಿತು! ಪೊಲೀಸರನ್ನ ಅವರ ಆಲಸ್ಯ ಹೊರತರಲು, ಮಂಪರಿನಿಂದ ಏಳಿಸಲು ಮಾರ್ಟಿನ್ ಪೋಷಕರು ಬೀದಿಗಿಳಿಯಬೇಕಾಯಿತು, ಕಪ್ಪು ವರ್ಣದವರು ಪ್ರತಿಭಟನೆ ನಡೆಸಬೇಕಾಯಿತು. ಸುದೀರ್ಘ ಹೋರಾಟದ ನಂತರವೂ ಮಾರ್ಟಿನ್ ಪೋಷಕರಿಗೆ ನ್ಯಾಯ ಸಿಗದಾಯಿತು. ಜಿಮ್ಮರ್ಮನ್ ಆರೋಪ ಮುಕ್ತನಾದ!

ಟ್ರೆವನ್ ಮಾರ್ಟಿನ್ ಸತ್ತಾಗ ನೋಮಿ ಒಸಾಕಾಗೆ ಕೇವಲ ಹದಿನಾಲ್ಕು ವರುಷ. “ಮಾರ್ಟಿನ್ ಜಾಗದಲ್ಲಿ ನಾನು ಕೂಡ ಇರಬಹುದಿತ್ತೆಂದು” ಉದಯೋನ್ಮುಖ ಟೆನ್ನಿಸ್ ತಾರೆ ಒಸಾಕಾಳಿಗೆ ಅಂದು ಅನಿಸಿತ್ತು. ಹಯೀಟಿ ದೇಶ ಮೂಲದ ತಂದೆಗೆ ಮತ್ತು ಜಪಾನಿನ ತಾಯಿಗೆ ಹುಟ್ಟಿದ ಅದ್ಭುತ ಟೆನ್ನಿಸ್ ಪ್ರತಿಭೆ ಒಸಾಕಾ. ತನ್ನ ಮೂರನೇ ವಯಸ್ಸಿನಿಂದ ಅಮೆರಿಕದಲ್ಲೇ ನೆಲೆಸಿರುವ ಒಸಾಕಾ ಆಡುವುದು ಮಾತ್ರ ಜಪಾನ್ ಬಾವುಟದಡಿಯಲ್ಲಿ. ಪ್ರತಿಭಾನ್ವಿತ ಒಸಾಕಾ ಈಗಾಗಲೇ ನಾಲ್ಕು ಗ್ರಾಂಡ್ ಸ್ಲಾಮ್ ಗಳನ್ನ ಗೆದ್ದಿದ್ದಾಳೆ. ಪ್ರಪಂಚದಲ್ಲಿ ಅತಿ ಹೆಚ್ಚು ಹಣ ಪಡೆಯುವ ಆಟಗಾರ್ತಿರಲ್ಲಿ ಇವಳು ಅಗ್ರಸ್ಥಾನದಲ್ಲಿದ್ದವಳು.

ಆಗಸ್ಟ್ 2020, ನ್ಯೂಯಾರ್ಕ್ ನಗರದಲ್ಲಿ ಟೆನ್ನಿಸ್ ಪಂದ್ಯಾವಳಿ ನಡೆಯುತ್ತಿದೆ. ಒಸಾಕಾ ಸೆಮಿ ಫೈನಲ್ ಹಂತ ತಲುಪಿದ್ದಾಳೆ. ಅದೇ ಸಮಯಕ್ಕೆ ವಿಸ್ಕಾನ್ಸಿನ್ ನಗರದಲ್ಲಿ ಜಾಕೋಬ್ ಬ್ಲೇಕ್ ಎನ್ನುವ ಕಪ್ಪುವರ್ಣದವನ ಮೇಲೆ ದಾಳಿ ನಡೆಯುತ್ತದೆ. ಅವನ ಮೂವರು ಮಕ್ಕಳ ಮುಂದೆಯೇ ಆತನಿಗೆ ಏಳು ಗುಂಡು ಹೊಡೆಯಲಾಗುತ್ತದೆ. ಅದೃಷ್ಟವಶಾತ್ ಆತ ಬದುಕುಳಿದರು ದಾಳಿಯಿಂದ ಅವನ ದೇಹ ಶಾಶ್ವತವಾಗಿ ನಿತ್ರಾಣವಾಗುತ್ತದೆ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲು ಅವನನ್ನ ಸರಪಳಿ ಹಾಕಿ ಮಂಚಕ್ಕೆ ಬಿಗಿಯಲಾಗುತ್ತದೆ. ಹೀಗೆ ಗುಂಡು ಹೊಡೆದ ಪೊಲೀಸ್ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುಲಿಲ್ಲ! ದಾಳಿಯ ಸುದ್ದಿ ಕೇಳಿದ ಒಸಾಕಾ ಸೆಮಿ ಫೈನಲ್ ಪಂದ್ಯದಿಂದ ಹಿಂದೆ ಸರಿದಳು. ಒಸಾಕಾ ತೆಗೆದುಕೊಂಡ ನಿಲುವನ್ನು ಸಮರ್ಥಿಸಿ ಆಯೋಜಕರ ಕೂಡ ಪಂದ್ಯಾವಳಿಯನ್ನ ಮುಂದೂಡಿದರು.

2020, ಯು ಎಸ್ ಓಪನ್ ಪಂದ್ಯಾವಳಿ. ಕೋರೋನ ಹಾವಳಿಯಿಂದ ಪಂದ್ಯಾವಳಿ ಅಷ್ಟೇನು ಅಬ್ಬರದಿಂದ ನಡೆಯಲಿಲ್ಲ. ಒಸಾಕಾ ಕಪ್ಪು ವರ್ಣದವರ ಮೇಲೆ ಆಗುತ್ತಿದ್ದ ಸತತ ಹಲ್ಲೆ, ಪೊಲೀಸರ ಕ್ರೌರ್ಯದ ಕುರಿತು ಜಾಗೃತಿ ಮೂಡಿಸಲು ತೆಗೆದುಕೊಂಡ ನಿರ್ಧಾರ ಬಹುಶಃ ಕ್ರೀಡಾ ಜಗತ್ತಿನಲ್ಲಿಯೇ brilliant, powerful ಮತ್ತು emotional ಎಂದೇಳಬಹುದು. ಒಸಾಕಾ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಮಾಸ್ಕ್ ಧರಿಸಿದ್ದಳು. ಆ ಮಾಸ್ಕ್ ಮೇಲೆ ಪೊಲೀಸರ ಕ್ರೌರ್ಯಕ್ಕೆ ಬಲಿಯಾದ ಕಪ್ಪು ಬರ್ಣದವರ ಹೆಸರು ಅಚ್ಚು ಹಾಕಲಾಗಿತ್ತು.

ಬ್ರಿಯೋನ್ನ ಟೇಲರ್
ಎಲಿಜ ಮೆಕ್ಲೈನ್
ಅಹ್ಮದ್ ಅರ್ಬೇರಿ
ಟ್ರೆವನ್ ಮಾರ್ಟಿನ್
ಜಾರ್ಜ್ ಫ್ಲಾಯ್ಡ್
ಫೀಲಾನ್ಡೋ ಕಾಸ್ಟೈಲ್
ತಮಿರ್ ರೈಸ್

ಹೆಸರಿದ್ದ ಮಾಸ್ಕ್ ಧರಿಸಿ ಫೈನಲ್ ತಲುಪಿದಳು ಒಸಾಕಾ. ಇಡೀ ಪ್ರಪಂಚಕ್ಕೆ ಪೊಲೀಸರ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ಕಪ್ಪುವರ್ಣದವರ ಪರಿಚಯವಾಯಿತು. ಬ್ಲ್ಯಾಕ್ ಲೈಫ್ ಮ್ಯಾಟರ್ಸ್(BLM) ಎಂಬ ಚಳುವಳಿ ಮನೆಮಾತಾಯಿತು.

ಕ್ರೀಡೆ ಮತ್ತು ರಾಜಕೀಯ ಬೆರೆಯಬಾರದೆಂದು ಒಸಾಕಾಗೆ ಹಲವರು ಸಲಹೆ ನೀಡಿದ್ದಾರೆ. ಜನ ನೀಡುವ ಇಂತಹ ಬಿಟ್ಟಿ ಸಲಹೆಗಳಿಗೆ ಪ್ರತಿಕ್ರಿಯಿಸಲು ಒಸಾಕಾ ಎಂದು ಅಳುಕಿಲ್ಲ.
“ನಾನು ಕ್ರೀಡಾಪಟು, ಆದರೆ ಅದಕ್ಕಿಂತ ಹೆಚ್ಚಾಗಿ ಕಪ್ಪು ವರ್ಣದವಳು. ಕಪ್ಪು ಜನರ ಶೋಷಣೆಯ ವಿರುದ್ಧ ದನಿ ಎತ್ತುವುದು ನಾನು ಟೆನ್ನಿಸ್ ಆಡುವುದಕ್ಕಿಂತ ಮುಖ್ಯ. ನನ್ನ ದನಿ ಅಷ್ಟೇನೂ ಬದಲಾವಣೆ ತರದಿರಬಹುದು ಆದರೆ ಬರಿ ಬಿಳಿಯರೆ ಆವರಿಸಿಕೊಂಡಿರುವ ಟೆನಿಸ್ ಕ್ರೀಡೆಯಲ್ಲಿ ಮತ್ತು ಪ್ರಪಂಚದಲ್ಲಿ ಒಂದು ಚರ್ಚೆಯಂತು ಶುರುವಾಗುತ್ತೆ.” ಎಂಬ ಅಭಿಪ್ರಾಯ ಒಸಾಕಾಳದು.

ಕ್ರೀಡೆಯೊಂದು ಬದುಕು. ಪರಿಶ್ರಮ, ತ್ಯಾಗ, ಯಶಸ್ಸು, ನೋವು, ನಲಿವುಗಳ ಮಿಲನ. ಜನ ಕ್ರೀಡೆಯನ್ನ ಇಷ್ಟ ಪಡುವುದೇ ಅದಕೊಸ್ಕರ. ಕ್ರೀಡೆಯಲ್ಲಿ ಸಮಾನತೆಯಿದೆ. ಕ್ರೀಡೆಯಲ್ಲಿ ತಾರತಮ್ಯ ಇರಕೂಡದು. ಆ ಅಪಾರ ಕ್ರೀಡಾಶಕ್ತಿಯನ್ನ ನಾವ್ಯಾಕೆ ರಾಜಕೀಯವನ್ನ ಪ್ರಭಾವಿಸಲು ಬಳಸಬಾರದು??? ನಾವು ಪೊಲೀಸರ ತರಬೇತಿಗೆ, ಹತ್ಯಾರುಗಳ ಖರೀದಿಗೆ ಖರ್ಚು ಮಾಡುವ ಹಣವನ್ನ ವಸತಿ, ಆರೋಗ್ಯ, ಉದ್ಯೋಗ, ಶಿಕ್ಷಣದಲ್ಲಿ ಏಕೆ ಹೂಡಿಕೆ ಮಾಡುವುದಿಲ್ಲ. ಸಾಮಾಜಿಕ ಅಸಮಾನತೆ, ಅಭಾವ ನೀಗಿಸಿ, ಅಪರಾಧ ಕುಗ್ಗಿಸಿ ಸ್ವಸ್ತ್ಯ ಸಮಾಜ ಕಟ್ಟುವ ಬಗೆ ಇದಲ್ಲವೇ ಎಂದು ಒಸಾಕಾ ಕೇಳುತ್ತಾಳೆ. If I wasn’t a tennis player, what would I do to change the world? ಎಂಬ ಪ್ರಶ್ನೆಯನ್ನ ಸದಾ ಕೇಳಿಕೊಳ್ಳುತ್ತಾಳೆ. ಆಕೆಯ ಉತ್ತರ ಸ್ಪಷ್ಟವಾಗಿದೆ.

ಜೆಸ್ಸಿ ಓವನ್ಸ್ ಹಿಟ್ಲರ್ ನಿಗೆ ಕಲಿಸಿದ ಪಾಠ, ಟಾಮಿ ಸ್ಮಿತ್, ಯಹಾನ್ ಕಾರ್ಲೋಸ್ ಮೆಕ್ಸಿಕೋ ಒಲಂಪಿಕ್ಸ್ ನಲ್ಲಿ ತೋರಿದ ಧೈರ್ಯ, ವಿಯಟ್ನಾಂ ಯುದ್ಧದ ವಿರುದ್ಧ ಮೊಹಮ್ಮದ್ ಅಲಿ ನಡೆಸಿದ ಹೋರಾಟ, ಅಥವಾ ಕಪ್ಪು ವರ್ಣದವರ ಚಳುವಳಿಗೆ ತನ್ನ ವೃತ್ತಿ ಜೀವನವನ್ನೇ ಬಲಿಕೊಟ್ಟ ಅಮೆರಿಕನ್ ಫುಟ್ಬಾಲ್ ಆಟಗಾರ ಕಾಲಿನ್ ಕಾಪರ್ನಿಕ್ ಹೋರಾಟ ಸಾಲದೆಂಬ ಅರಿವು ಒಸಾಕಾಗೆ ಇದೆ.

ಜಾರ್ಜ್ ಬರ್ಬರ ಹತ್ಯೆಯ ನಂತರ ಒಸಾಕಾ ಚಳುವಳಿಗೆ ಜಿಗಿದಳು. “ಮೌನ, ತಾತ್ಸಾರ ಎಂದಿಗೂ ಉತ್ತರವಲ್ಲ” ಎಂದಳು. ಕೆಲ ಆಟಗಾರರು ಐಶ್ವರ್ಯ ಕೀರ್ತಿ ಬಂದ ಕ್ಷಣ ಸಾಮಾಜಿಕ ಕಾಳಜಿಯಿಂದ, ಜ್ವಲಂತ ಸಮಸ್ಯೆಗಳಿಂದ ವಿಮುಖಗೊಳ್ಳುತ್ತಾರೆ. ಇದು ದಮನಿತ ವರ್ಗ/ಜಾತಿಯಿಂದ ಬರುವ ಕ್ರೀಡಾಪಟುಗಳ ವಿಷಯದಲ್ಲೂ ಸತ್ಯ. ಪ್ರಿವಿಲೇಜ್ ಅನ್ನುವ ಪದ ಸಾಕಷ್ಟು ಮಂದಿಗೆ ಅರ್ಥವಾಗದ ವಿಷಯ. ಪ್ರಿವಿಲೇಜ್ ಎಂಬುದು ನಿಮ್ಮ ಸಂಪತ್ತು, ಆಸ್ತಿಗೆ ಸಂಬಂಧಪಟ್ಟಿದ್ದಲ್ಲ, ನಿಮ್ಮ ಜೀವನ ಶೈಲಿಗೆ ಅನ್ವಯಿಸುವುದಲ್ಲ, ನೀವು ಹೇಗಿದ್ದೀರಿ ಮತ್ತು ನಿಮ್ಮ ದುಡಿಮೆ ಹೇಗಿದೆ ಎಂಬುದರ ಬಗ್ಗೆಯಲ್ಲ, ನಿಮ್ಮ ಬಳಿ ಎಷ್ಟು ಕಾರ್ಗಳಿವೆ ಎನ್ನುವುದಲ್ಲ. The privilege is not having to put up with everyday racism/castism.

ಪ್ರಿವಿಲೇಜ್ ಎಂಬುದು ನಿರಂತರ ಸವಾಲು, ಆಕ್ರಮಣ ಅಥವಾ ಅಡೆತಡೆ ಇಲ್ಲದೆ ನಿರಾಳವಾಗಿ ಬದುಕುವುದು. ಜಾರ್ಜ್ ಫ್ಲಾಯ್ಡ್ ಕೊಲೆಯ ನಂತರ ಕಾಲಿನ್ ಕಾಪೆರ್ನಿಕ್ ಎಂಬ ಪ್ರಖ್ಯಾತ ಅಮೆರಿಕನ್ ಫುಟ್ಬಾಲ್ ಆಟಗಾರ ಪಂದ್ಯಕ್ಕೆ ಮುನ್ನ ಹಾಡುವ ಅಮೆರಿಕನ್ ರಾಷ್ಟ್ರಗೀತೆಯ ಸಮಯದಲ್ಲಿ ಕ್ರೀಡಾಂಗಣದ ನಡುವೆ ಮಂಡಿಯೂರಿ ತಲೆ ತಗ್ಗಿಸಿ ಕುಳಿತ. ಕಾಲಿನ್ ಈ ನಡೆ ಅಂದಿನ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ನನ್ನು ಕೆರಳಿಸಿತು. ಕಾಲಿನನ್ನ ದೇಶ ದ್ರೋಹಿಯೆಂದು ಬ್ರ್ಯಾಂಡ್ ಮಾಡಲಾಯಿತು. ಆತ ಮತ್ತೆಂದೂ ಫುಟ್ಬಾಲ್ ಆಡದ ಹಾಗೆ ಪ್ರಭುತ್ವ ನೋಡಿಕೊಂಡಿತು! ಇದೆ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋತಾಗ ಸಾವಿರಾರು ಬೆಂಬಲಿಗರು ಅಮೆರಿಕನ್ ಕ್ಯಾಪಿಟೋಲ್ ಒಳಕ್ಕೆ ಲಗ್ಗೆಯಿಟ್ಟು ದಾಂಧಲೆ ನೆಡೆಸಿದರು. ಐವರು ಪ್ರಾಣ ಬಿಟ್ಟರು ಕೂಡ. ಅಮೆರಿಕನ್ ಇತಿಹಾಸದಲ್ಲೇ ಕಂಡು ಕೇಳರಿಯದ ಈ ರೀತಿಯ ದಾಂಧಲೆ ನೆಡೆಸಿದವರಿಗೆ ಯಾವ ಶಿಕ್ಷೆಯು ಆಗಲಿಲ್ಲ. ಬದಲಾಗಿ ಕೆಲ ಪೊಲೀಸರು ರೌಡಿ ಗಳ ಜೊತೆಗೆ ನಿಂತು ಸೆಲ್ಫಿತೆಗೆಸಿಕೊಂಡರು. ಇದು ಬಿಳಿಯರಿಗಿರುವ ನಿಜವಾದ ಪ್ರಿವಿಲೇಜ್. ಕಪ್ಪು ವರ್ಣದವ ತನ್ನ ಸ್ವಂತ ಕಾರಿನಲ್ಲಿ ಓಡಾಡುವಾಗಲು ಅವನನ್ನ ತಡೆದು ಅನುಮಾನದಿಂದಲೇ ನೋಡುವ ಪೊಲೀಸರು, ಕಾರ್ ಮಾಲೀಕನನ್ನು ಕೆಳಗಿಳಿಸಿ ತಪಾಸಣೆ ನೆಡೆಸುವರು ಆದರೆ ಬಿಳಿಯನೊಬ್ಬ ಕಾರ್ ಕದ್ದುಕೊಂಡು ಹೋಗುತ್ತಿರುವಾಗಲು ಪೊಲೀಸರು ಅವನನ್ನ ಅನುಮಾನದಿಂದ ನೋಡಲಾರರು. ಇದು ಬಿಳಿಯರಿಗಿರುವ ಪ್ರಿವಿಲೇಜ್. ಇಂತಹ ನಿಜವಾದ ಪ್ರಿವಿಲೇಜ್ಗಾಗಿ ಪ್ರತಿರೋಧ, ಹೋರಾಟ ಮಾಡಬೇಕಿದೆ ಎಂಬ ಸ್ಪಷ್ಟತೆ ಒಸಾಕಾಗಿದೆ.

ಅಮೆರಿಕನ್ ಕಾದಂಬರಿಕಾರ, ನಾಟಕಕಾರ ಮತ್ತು ಸಾಮಾಜಿಕ ಕಾರ್ಯಕರ್ತ ಜೇಮ್ಸ್ ಬಾಲ್ಡ್ವಿನ್ ಹೇಳುವ ಮಾತುಗಳು ಸೂಕ್ತವೆನಿಸುತ್ತೆ

ಜಾಹೀರಾತು

“When a white man in the world says, give me liberty or give me death, the white world applauds. When a black man says the same thing, he’s judged a criminal. And everything possible is done to make an example of this bad nigger so there won’t be any more like him.”

ಬಿಳಿಯನೊಬ್ಬ “ನನಗೆ ಸ್ವಾತಂತ್ರ್ಯ ನೀಡಿ ಅಥವಾ ಸಾವು ಕರುಣಿಸಿ” ಎಂಬ ಬೇಡಿಕೆಯಿಟ್ಟರೆ, ಬಿಳಿಯರ ಪ್ರಪಂಚ ಪ್ರಶಂಸೆ ಮಾಡುತ್ತದೆ, ಚಪ್ಪಾಳೆ ತಟ್ಟುತ್ತದೆ. ಅದರೆ ಕಪ್ಪು ವರ್ಣದವನೊಬ್ಬ ಸ್ವಾತಂತ್ರ್ಯ, ವಿಮುಕ್ತಿಯ ಕುರಿತು ಮಾತನಾಡಿದರೆ ಅವನಿಗೆ ಅಪರಾಧಿಯೆಂದು ಹಣೆಪಟ್ಟಿ ಕಟ್ಟುತ್ತದೆ. ಆತನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ “ಕೆಟ್ಟ ಕರಿಯ” ನನ್ನ ಬೇರೆಯವರಿಗೆ ಉದಾಹರಣೆಯನ್ನಾಗಿ ಮಾಡುತ್ತದೆ. ಅವನಂತೆ ಪ್ರತಿರೋಧವೊಡ್ಡುವ ಬೇರೊಬ್ಬ ಧೈರ್ಯ ಮಾಡದಂತೆ ನೋಡಿಕೊಳ್ಳುತ್ತದೆ.

ವಿಷಮ ಪರಿಸ್ಥಿತಿಯಲ್ಲಿ, ದುರುಳರೇ ತುಂಬಿರುವ ನಾಡಿನಲ್ಲಿ, ವರ್ಣಬೇಧ ನೀತಿಯ ಕ್ರಮಾನುಗತ ಸಮಾಜದಲ್ಲಿ ಒಸಾಕಾಗಳ ಸಾಧನೆ ಅದ್ವಿತೀಯವಾದರೆ, ಆಕೆ ತನ್ನ ಐಷಾರಾಮಿ ಜೀವನದ ಕಂಫರ್ಟ್ ಝೋನಿನಲ್ಲಿರದೆ ಪ್ರತಿರೋಧದ ಹಾದಿಯಲ್ಲಿ ನಡೆದದ್ದು ಶ್ಲಾಘನೀಯ. ನೋಮೀ ಒಸಾಕಾ ನಮ್ಮ ದೇಶದ ಕ್ರೀಡಾಪಟುಗಳಿಗೆ ಮಾದರಿಯಾಗಲಿ. ಸ್ವಾರ್ಥ ಮನೋಭಾವದಿಂದ ಹೊರಬಂದು ನೊಂದ ಶೋಷಿತ ಕ್ರೀಡಾಳುಗಳ ಜೊತೆ ನಿಲ್ಲಲಿ…

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ