ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತ ಅವಶ್ಯವಿದೆ, ಅಗತ್ಯಕ್ಕೆ ಅನುಗುಣವಾಗಿ ರಕ್ತ ಸಂಗ್ರಹ ಲಭ್ಯವಾಗುತ್ತಿಲ್ಲ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಹೇಳಿದರು.
ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ, ಕೃಷಿಕ ಲಯನ್ಸ್ ಸಂಸ್ಥೆ,, ಸಕ್ಕರೆ ನಾಡು ಲಯನ್ ಸಂಸ್ಥೆ ಮತ್ತಿತರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನದ ಮಹತ್ವ ಸಾರುವ ಮೊಬೈಲ್ ಬಸ್ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದೇಶದಲ್ಲಿ ಕೇವಲ 2.5 ಕೋಟಿ ಯೂನಿಟ್ ಮಾತ್ರ ರಕ್ತ ಸಕಾಲಕ್ಕೆ ಲಭ್ಯವಾಗುತ್ತದೆ. ರಕ್ತದಾನವೆಂದರೆ ಅದು ಜೀವದಾನ. ಇದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ದೇಶದಲ್ಲಿ ಪ್ರತಿ 2 ಸೆಕೆಂಡ್ಗೆ ಯಾರಿಗಾದರೂ ರಕ್ತದ ಅಗತ್ಯ ಬಿದ್ದೇ ಬೀಳುತ್ತಿದೆ. ಪ್ರತಿ ವರ್ಷ ಅಂದಾಜು 3 ಕೋಟಿ ರಕ್ತದ ಘಟಕಗಳನ್ನು ಪೂರಣ ಮಾಡಲಾಗುತ್ತಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿಗಳು, ಗ್ರಾಮಸ್ಥರು ರಕ್ತದಾನ ಮಾಡಿ ಮಾನವೀಯತೆ ಮೆರೆದು ಪ್ರಮಾಣಪತ್ರ ಪಡೆದರು.
ಕಾರ್ಯಕ್ರಮದಲ್ಲಿ ಕೃಷಿಕ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ ವೀರಪ್ಪ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅರ್ಜುನ್ ಕುಮಾರ್, ದಂತ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ಅರವಳಿಕೆ ತಜ್ಞ ಡಾ. ಆನಂದ್, ಮಕ್ಕಳ ತಜ್ಞ ಡಾ.ಶಿವಪ್ರಸಾದ್, ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್, ನರ್ಸಿಂಗ್ ವಿಭಾಗದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.




