Tuesday, November 24, 2026

ಪ್ರಾಯೋಗಿಕ ಆವೃತ್ತಿ

ಎಲ್ಲಿ ಪುಸ್ತಕಗಳನ್ನ ಸುಡುವರೋ, ಬಹುಬೇಗ ಅಲ್ಲಿ ಜನರನ್ನ ಕೂಡ ಸುಟ್ಟು ಹಾಕಲಾಗುತ್ತದೆ

✍️ಹರೀಶ್ ಗಂಗಾಧರ್

ಅಂದು ಧಾರಾಕಾರ ಮಳೆ ಸುರಿಯುತ್ತಿತ್ತು. ಆದರೂ ಅದು ಹೇಗೋ ಬರ್ಲಿನ್ ನಗರದ ಮುಖ್ಯ ಬೀದಿಯಲ್ಲಿ ಒಂದು ದೊಡ್ಡ ಚಿತೆ ಉರಿಯುತ್ತಿತ್ತು. ಅದರ ಸುತ್ತ ನೋಡುಗರು, ನಾಝಿ ಎಸ್ ಎ ಅಧಿಕಾರಿಗಳು ನೆರೆದಿದ್ದರು. ಅವರಲ್ಲಿ ಜರ್ಮನ್ ಬರಹಗಾರ ಎರಿಚ್ ಕಾಸ್ಟ್ ನರ್ ಕೂಡ ನುಸುಳಿ ನಿಂತಿದ್ದ. ಮೈಕಿನಲ್ಲಿ ಕಾಸ್ಟ್ ನರ್ ಹೆಸರನ್ನ ಕೂಗಲಾಯಿತು. ನೈತಿಕ ಅಧಃಪತನ, ಅವನತಿಯ ವಿರುದ್ಧ! ಕುಟುಂಬದ ಮತ್ತು ನಾಡಿನ ಶಿಸ್ತಿಗಾಗಿ, ಸಭ್ಯತೆಗಾಗಿ ಹೆನ್ರಿಚ್ ಮನ್, ಅರ್ನೆಸ್ಟ್ ಗ್ಲಾಸೆರ್, ಎರಿಚ್ ಕಾಸ್ಟ್ ನರ್ ಬರಹಗಳನ್ನ ಬೆಂಕಿಗಾಹುತಿ ನೀಡುತ್ತಿದ್ದೇವೆ ಎಂದು ಕಪ್ಪು ಸಮವಸ್ತ್ರ ತೊಟ್ಟ ನಾಝಿ ಅಧಿಕಾರಿಗಳು ಘೋಷಿಸಿದರು.

ಆ ದಿನ ಬರ್ಲಿನ್ ನಲ್ಲಿ ಮಾತ್ರವಲ್ಲದೆ ಜರ್ಮನಿಯ ಇಪ್ಪತ್ತೊಂದು ನಗರಗಳಲ್ಲಿ ಪುಸ್ತಕ ಸುಡಲಾಯಿತು. ವಿಷಯ ಬಹಳ ಸರಳ “ನಾಝಿಗಳಿಲ್ಲದಿದ್ದರೆ ಯಾರು ಪುಸ್ತಕಗಳನ್ನ ಸುಟ್ಟು ಹಾಕುತ್ತಿರಲಿಲ್ಲ. ಆಗ 1920ರ ದಶಕದಲ್ಲಿ ಜರ್ಮನಿಯಲ್ಲಿ ವೇಗವಾಗಿ ಬೆಳೆಯುತ್ತಿದ್ದ ಸಾಂಸ್ಕೃತಿಕ ವಿವಿಧತೆ, ಹೊಸ ಆವಿಷ್ಕಾರ ಮಾಡುವ ಹುರುಪು ಹಾಗೆ ಮುಂದುವರೆದಿರುತ್ತಿತ್ತು. ಆದರೆ ನಾಝಿಗಳ ಉದಯ ಜರ್ಮನಿಯ ಸಂಸ್ಕೃತಿ ಅರಳುವುದನ್ನ, ಪರರಿಗೆ ತೆರೆದುಕೊಳ್ಳುವುದನ್ನ ಸಂಪೂರ್ಣವಾಗಿ ನಿಲ್ಲಿಸಿತ್ತು. ಅದಕ್ಕೆ ಮೇ 10 ಪುಸ್ತಕ ಸುಡುವ ದುಷ್ಕೃತ್ಯ ಅಲ್ಲಗಳೆಯಲಾಗದ ಸೂಚಕದಂತಿತ್ತು.

ಬರಲಿರುವ ಕೆಟ್ಟದಿನಗಳ ಸ್ಪಷ್ಟ ಸುಳಿವು ಬರಹಗಾರರಿಗೆ, ಬುದ್ದಿವಂತರಿಗೆ ಸಿಕ್ಕಿತ್ತು. ಪುಸ್ತಕ ಸುಡುವವೊತ್ತಿಗೆ ಬಹಳಷ್ಟು ಮಂದಿ ಬರಹಗಾರರು ದೇಶ ತೊರೆದಿದ್ದರು. ವೆಯ್ಮರ್ ರಿಪಬ್ಲಿಕ್ ಎಂದೇ ಖ್ಯಾತಿಯಾಗಿದ್ದ ಜರ್ಮನಿಯಿಂದ ಆಲ್ಫ್ರೆಡ್ ಕೆರ್, ಬೆರ್ಟೊಲ್ಟ್ ಬ್ರೆಕ್ಟ್, ಹೆನ್ರಿಚ್ ಮನ್, ಥಾಮಸ್ ಮನ್, ಎರಿಕಾ ಮನ್, ಕ್ಲಾಸ್ ಮನ್, ಆಲ್ಬರ್ಟ್ ಐನ್ ಸ್ಟೈನ್, ಅರ್ನೆಸ್ಟ್ ಟೊಳ್ಳರ್ ದಂತಹ ಸೂಕ್ಷ್ಮಮತಿಗಳು ದೇಶ ಬಿಟ್ಟಿದ್ದರು. ಜನವರಿ 30, 1933ರಂದು ಅಡಾಲ್ಫ್ ಹಿಟ್ಲರ್ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಜರ್ಮನಿಗೆ ಭವಿಷ್ಯವಿಲ್ಲವೆಂದು ಅವರಿಗೆ ತಿಳಿದುಹೋಗಿತ್ತು

ನಾಝಿಗಳು ಅಧಿಕಾರ ಕಸಿದುಕೊಳ್ಳುವ ಮೊದಲೇ ಅವರ ವಿರೋಧಿಗಳು ಯಾರೆಂಬುದನ್ನ ಸ್ಪಷ್ಟಪಡಿಸಿದ್ದರು. ಅವರನ್ನ ಸದೆಬಡಿಯುತ್ತೇವೆ ಎಂದು ಹೇಳಿಕೆ ನೀಡಿದ್ದರು. ನಾಝಿಗಳ ಪರಮ ವೈರಿಗಳು ಯಹೂದಿಯರು, ಎಡ ಪಂಥೀಯರು, ಮತ್ತು ನಾಝಿಗಳ ರಾಜಕೀಯ ಸಿದ್ದಾಂತ ಒಪ್ಪದ ಬರಹಗಾರರು. ಈ ಮೂವರನ್ನ ಜರ್ಮನ್ ವಿರೋಧಿಗಳೆಂದು ಬ್ರ್ಯಾಂಡ್ ಮಾಡಲಾಗಿತ್ತು. ಅವರ ಬರಹಗಳನ್ನ ಪಟ್ಟಿ ಮಾಡಲಾಗಿತ್ತು. ಮೇ 1933ರ ಹೊತ್ತಿಗೆ ಸುಮಾರು 200 ಬರಹಗಾರರನ್ನ ಬ್ಲಾಕ್ ಲಿಸ್ಟ್ ಮಾಡಲಾಗಿತ್ತು ಮತ್ತು ಸುಮಾರು 3500 ಪುಸ್ತಕಗಳನ್ನ ಬ್ಯಾನ್ ಮಾಡಲಾಗಿತ್ತು.

ನಾಝಿಗಳಿಗೆ ತೀರಾ ಸಿಟ್ಟು ತರಿಸಿದ್ದು ಎರಿಕ್ ಮರಿಯಾ ರೆಮರ್ಕ್ ಅವರ 1928 ರ ಕಾದಂಬರಿ “All Quiet on the Western Front“ ಈ ಕಾದಂಬರಿ ನಿರ್ದಾಕ್ಷಿಣ್ಯವಾಗಿ ಮೊದಲ ಮಹಾಯುದ್ದದಭಯಾನಕ ಚಹರೆಗಳನ್ನ ಓದುಗರ ಮುಂದೆ ತೆರೆದಿಟ್ಟಿತ್ತು. ಈ ಕಾದಂಬರಿಯಲ್ಲಿದ್ದ ಕಟು ಸತ್ಯ, ಶಾಂತಿ ಸಂದೇಶಗಳನ್ನ ಅರಗಿಸಿಕೊಳ್ಳಲು ನಾಝಿಗಳಿಗೆ ಸಾಧ್ಯವಾಗಲಿಲ್ಲ. ಜರ್ಮನ್ ಯೋಧರನ್ನ ಕಾದಂಬರಿ ಅವಮಾನಿಸಿದೆ ಎಂದು ನಾಝಿಗಳು ದೂರಿದರು. ಕಾದಂಬರಿ ಆಧಾರಿತ ಚಲನಚಿತ್ರ ಪ್ರದರ್ಶನವನ್ನ ನಾಝಿ ರೌಡಿಗಳು ತಡೆದರು. ಚಿತ್ರದ ತಾತ್ಕಾಲಿಕ ಬ್ಯಾನ್ ಹೇರುವಂತೆ ಮಾಡಿದರು. ಎರಿಕ್ ಮರಿಯಾ ರೆಮರ್ಕ್ ನಾಝಿಗಳು ಅಧಿಕಾರಕ್ಕೆ ಬರುವ ಮುನ್ನವೇ ಜರ್ಮನಿ ತೊರೆದು ಸ್ವಿಟ್ಜರ್ಲ್ಯಾಂದಿನಲ್ಲಿ ಆಶ್ರಯ ಪಡೆದ.

ಬಹುಶಃ ಪುಸ್ತಕ ಸುಟ್ಟು ಹಾಕುವ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಎರಿಕ್ ಕಾಸ್ಟ್ನರ್ ಮಾತ್ರ. ಎರಿಕ್ ಕಾಸ್ಟ್ನರ್ ಯುಹೂದಿಯಲ್ಲದ ಕಾರಣಕ್ಕೆ ಜರ್ಮನಿ ಹೇಗೋ ಬದುಕಿಬಿಟ್ಟ. ಆದರೆ ಎಲ್ಲರೂ ಎರಿಕ್ನಷ್ಟೇ ಅದೃಷ್ಟವಂತರಾಗಿರಲಿಲ್ಲ. ಅಗಣಿತ ಪತ್ರಕರ್ತರನ್ನ, ಬರಹಗಾರರನ್ನ ಕೊಲ್ಲಲ್ಲಾಯಿತು. ತಂದೆಯನ್ನ ನೋಡಿಕೊಳ್ಳಲು ಜರ್ಮನಿಯಲ್ಲೇ ಉಳಿದಕೊಂಡ ಕವಿಯತ್ರಿ ಗರ್ತೃದ್ ಕೋಲ್ಮರ್ ಯನ್ನ ಆಶ್ವಿಟ್ಜ್ ಕಾನ್ಸಂಟ್ರೇಶನ್ ಶಿಬಿರಕ್ಕೆ ಅಟ್ಟಲಾಯಿತು. ಅವಳು ಅಲ್ಲೇ ಪ್ರಾಣ ಬಿಟ್ಟಳು. ದೇಶ ಬಿಟ್ಟು ಹೊರನಡೆದವರ ಜೀವನವೇನು ಸುಖಮಯವಾಗಿರಲಿಲ್ಲ. ಹೊಸ ದೇಶದಲ್ಲಿ, ಹೊಸ ಭಾಷೆ ನುಡಿಯುವವರ ನಡುವೆ ಈ ಬರಹಗಾರರಿಗೆ ತಮ್ಮ ಭಾಷೆಯೇ ಬರದಾಯಿತು. ಆರ್ಥಿಕ ಸಂದಿಗ್ದತೆ, ಮಾನಸಿಕ ಯಾತನೆಗಳಿಂದ ವಾಲ್ಟರ್ ಬೆಂಜಮಿನ್, ಸ್ಟೆಫನ್ ಜ್ವಿಗ್ ಮತ್ತು ಅರ್ನೆಸ್ಟ್ ಟೊಳ್ಳರ್ ಆತ್ಮಹತ್ಯೆ ಮಾಡಿಕೊಂಡರು.

ಇನ್ನು ಬ್ರೆಕ್ಟ್, ಥಾಮಸ್ ಮನ್, ಬಿಲ್ಲಿ ವಿಲ್ದೆರ್, ಫ್ರಿಟ್ಜ್ ಲ್ಯಾಂಗ್ ನಂತಹ ವಲಸೆ ಬಂದ ಕೆಲ ಬರಹಗಾರರು ತಮ್ಮ ಬದುಕುಕಟ್ಟಿಕೊಂಡರು. ಹೀಗೆ ಜರ್ಮನಿಯಿಂದ ವಲಸೆ ಬಂದವರಿಂದ ಅಮೆರಿಕಾದ ವಿಶ್ವವಿದ್ಯಾಲಯಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಭಾರಿ ಉಪಯೋಗವಾದರೆ, ಜರ್ಮನಿ ಇಂದಿಗೂ ಈ ನಷ್ಟದಿಂದ ಚೇತರಿಸಿಕೊಂಡಿಲ್ಲ.

ಇನ್ನೊಂದೆಡೆ ಜರ್ಮನ್ ವಿದ್ಯಾರ್ಥಿ ಸಂಘ ಪುಸ್ತಕ ಸುಟ್ಟು ಹಾಕುವ ಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು ಎಂಬುದು ವಿಸ್ಮಯದ ಸಂಗತಿ. ವಿದ್ಯಾರ್ಥಿ ಸಂಘದಲ್ಲಿ ಸಾಕಷ್ಟು ನಾಝಿ ಸದಸ್ಯರಿದ್ದರು. ಈ ಜರ್ಮನ್ ವಿದ್ಯಾರ್ಥಿ ಸಂಘಕ್ಕೆ ಅಮೆರಿಕಾದ ನ್ಯೂ ಯಾರ್ಕ್ ಟೈಮ್ಸ್ ಒಂದು ಪತ್ರ ಬರೆದಿತ್ತು. ಅದರ ಉಲ್ಲೇಖ ಇಲ್ಲಿ ಪ್ರಸ್ತುತ. “ಆಲೋಚನೆಗಳನ್ನ, ವಿಚಾರಗಳನ್ನ ನೀವು ಕೊಲ್ಲಬಹುದೆಂದು ಭಾವಿಸಿದ್ದಾರೆ ನಿಮಗೆ ಇತಿಹಾಸ ಯಾವುದೇ ಪಾಠವನ್ನೂ ಕಲಿಸಿಲ್ಲ. ಈ ಹಿಂದೆ ಅನೇಕ ಸರ್ವಾಧಿಕಾರಿಗಳು ಆಲೋಚನೆಗಳ, ಅನಿಸಿಕೆಗಳನ್ನ ಕೊಲ್ಲಲು ಪ್ರಯತ್ನಿಸಿದ್ದಾರೆ ಆದರೆ ಆಲೋಚನೆಗಳು ಪುಟಿದೆದ್ದು ಬೃಹದಾಕಾರವಾಗಿ ಬೆಳೆದು ಸರ್ವಾಧಿಕಾರಿಗಳನ್ನ ನಾಶ ಮಾಡಿದೆ.” ಎಂಬ ಹೆಲೆನ್ ಕೆಲ್ಲರ್ ಅವರ ಮಾತುಗಳನ್ನ ಆ ಪತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಅಂದು ಅಂತರರಾಷ್ಟ್ರೀಯ ಖ್ಯಾತಿಯ ಜಾಕ್ ಲಂಡನ್, ಸಿನ್ಕ್ಲೆರ್, ಹೆಮಿಂಗ್ವೇ, ಮ್ಯಾಕ್ಸಿಮ್ ಗೋರ್ಕಿ, ಜಾರೊಸ್ಲಾವ್ ಹಸೆಕ್, ಶೋಲೆಮ್ ಆಶ್ಚ ಬರಹಗಳ ಜೊತೆಗೆ ಹೆಲೆನ್ ಕೆಲ್ಲೆರ್ ಪುಸ್ತಕಗಳನ್ನ ಕೂಡ ಬೆಂಕಿಗೆ ಹಾಕಲಾಗಿತ್ತು.

ಬರ್ಲಿನ್ ನಗರದಲ್ಲಿ ಪುಸ್ತಕಗಳನ್ನ ಸುಟ್ಟ ಜಾಗದಲ್ಲಿ ಇಸ್ರೇಲಿ ಕಲಾವಿದ ಮಿಚಾ ಉಲ್ಮನ್ ಕಲಾತ್ಮಕ ಕೋಣೆಯೊಂದನ್ನು ಸೃಷ್ಟಿಸಿದ. ನೆಲಮಾಳಿಗೆಯಲ್ಲಿರುವ ಕೋಣೆಯಲ್ಲಿ ಬಿಳಿಯ ಬಣ್ಣದ ಖಾಲಿ ಶೆಲ್ಫ್ ಗಳಿವೆ. ಬೀದಿಯಲ್ಲಿ ಓಡಾಡುವರು ಕೂಡ ಪಾರದರ್ಶಕ ಗಾಜಿನ ಮೂಲಕ ಈ ಕೋಣೆಯನ್ನ ನೋಡಬಹುದು. ಅಲ್ಲೇ ಇರುವ ಫಲಕದಲ್ಲಿ “ಎಲ್ಲಿ ಪುಸ್ತಕಗಳನ್ನ ಸುಡುವರೋ, ಬಹುಬೇಗ ಅಲ್ಲಿ ಜನರನ್ನ ಕೂಡ ಸುಟ್ಟು ಹಾಕಲಾಗುತ್ತದೆ.” ಎಂದ ಬರೆಯಲಾಗಿದೆ. ಸ್ಪೇನ್ ನಲ್ಲಿ ಪುಸ್ತಕ ಗಳನ್ನ ಸುಟ್ಟುಹಾಕುವಾಗ ಐನ್ರಿಚ್ ಹೇನ್ ಬರೆದ ಈ ಸಾಲು ಜರ್ಮನಿಯಲ್ಲಿ ಭಯಾನಕವಾಗಿ ದಿಟವಾಯಿತು. ನಾಝಿಗಳು 1933ರಲ್ಲಿ ಪುಸ್ತಕಗಳನ್ನ ಸುಟ್ಟರು, 1938ರಲ್ಲಿ ಯುಹೂದಿಯರ ದೇವಾಳಗಳು ಬೂದಿಯಾದವು. 1942 ರಿಂದ ನಾಝಿಗಳು ಯುರೋಪಿಯನ್ ಯಹೂದಿಯರ ನರಮೇಧ ನೆಡೆಸಿದರು. ಈ ನರಮೇಧ “ಶೋಹ” (Shoah) ಎಂದೇ ಕುಖ್ಯಾತಿಯಾಯಿತು.

ನಾಝಿಗಳು ಪುಸ್ತಕ ಸುಡುವ ಸಂಸ್ಕೃತಿಯ ಜನಕರೂ ಅಲ್ಲ ಅಥವಾ ಆ ಸಂಸ್ಕೃತಿ ಅಲ್ಲಿಗೆ ಕೊನೆಗೊಳ್ಳಲಿಲ್ಲ ಕೂಡ. ನಾಝಿ ಪುಸ್ತಕ ಸುಡುವ ಬರ್ಬರ ಕೃತ್ಯದ ಅನ್ವೇಷಣೆ ಮಾಡಿದವರೂ ಅಲ್ಲ. ಪುಸ್ತಕ ಸುಡುವ ದೊಡ್ಡ ಪರಂಪರೆಯೇ ಇದೆ. ಇಸ್ಲಾಂ, ಕ್ರೈಸ್ತದಲ್ಲಿ ಪುಸ್ತಕ ಸುಡುವ ಸುದೀರ್ಘ ಇತಿಹಾಸವೇ ಇದೆ. ಪುರಾತನ ಗ್ರೀಸ್, ಚೀನಾ ಮತ್ತು ಇತ್ತೀಚಿಗೆ ಇರಾನ್ ಮತ್ತು ರಷ್ಯಾದಲ್ಲೂ ಪುಸ್ತಕ ಸುಡಲಾಯಿತು. ಸುಡುವ ಬದಲಾಗಿ ಕೆಳ ದಶಕಗಳ ಹಿಂದಿನ ಪ್ರಭುತ್ವಗಳು ಪುಸ್ತಕದ ಮೇಲೆ ನಿಷೇದ ಹೇರುವುದನ್ನ ಕಲಿತುಕೊಂಡವು.

ಜಾಹೀರಾತು

ಲಾರೆನ್ಸ್ ಬರೆದ “ಸನ್ಸ್ ಅಂಡ್ ಲವರ್ಸ್” ನಿಂದ ಹಿಡಿದು ಸಲ್ಮಾನ್ ರಶ್ಧೀಯವರ “ಸಟಾನಿಕ್ ವರ್ಸಸ್,” ತಸ್ಲೀಮಾ ನಸರೀನ್ ಅವರ “ಲಜ್ಜ”, ರೊಹಿಂಗ್ಟನ್ ಸ್ತ್ರಿಯವರ “ಸಚ್ ಆ ಲಾಂಗ್ ಜರ್ನಿ”ವರೆಗೆ ಇದು ನಡೆಯುತ್ತಲೇ ಬಂದಿದೆ. ಇಂದು ಪ್ರಭುತ್ವಗಳು ಮುಂದುವರೆದು ನಿಷೇಧಕ್ಕೂ ಕೈ ಹಾಕದೆ ಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಮಹಾಶ್ವೇತ ದೇವಿ, ಸೂಕಿರ್ತಾರಣಿ, ಎ ಕೆ ರಾಮಾನುಜನ್(ಮುನ್ನೂರು ರಾಮಾಯಣ) ಪಠ್ಯ ಪುಸ್ತಕದಿಂದ ತೆಗೆದುಹಾಕಿದರೆ, ಭಾರತೀಯ ಇತಿಹಾಸವನ್ನೇ ತಿರುಚಿ ಜನರ ಮನದಲ್ಲಿ ಹಗೆ ತುಂಬುವ ಕೆಲಸ ನಡೆದಿದೆ. Authoritarian regimes all over the world fear the power held by the free word to call their dominance into question. (ಪ್ರಭುತ್ವದ ಪ್ರಾಬಲ್ಯ, ಅಧಿಕಾರವನ್ನ ಸದಾ ಪ್ರಶ್ನಿಸುವ ಮುಕ್ತ ಪದಗಳಿಗೆ ಇರುವ ಅಗಾಧ ಶಕ್ತಿಗೆ ನಿರಂಕುಶಮತಿ, ಸರ್ವಾಧಿಕಾರಿಗಳು ಹೆದರುತ್ತಾರೆ ಎಂಬುದಂತೂ ಸರ್ವಕಾಲಿಕ ಸತ್ಯ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ