ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ದಿಗೆ ಕೈಜೋಡಿಸಬೇಕು ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ರಾಜ್ಯ ನಿರ್ದೇಶಕ ತಿಮ್ಮರಾಯಿಗೌಡ ರೈತರಲ್ಲಿ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಕಚೇರಿಯಲ್ಲಿ ನೂತನ ಅಧ್ಯಕ್ಷೆ ಜಯಶೀಲ ರಾಮೇಗೌಡ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರೈತರಿಗೆ ಸುಲಭವಾಗಿ ಸಕಾಲಕ್ಕೆ ಸಾಲ ನೀಡುವ ವ್ಯವಸ್ಥೆ ಇರುವುದು ನಮ್ಮ ಪಿ.ಎಲ್.ಡಿ ಬ್ಯಾಂಕಿನಲ್ಲಿ ಮಾತ್ರ. ಹಾಗಾಗಿ ರೈತರು ಬ್ಯಾಂಕಿನ ಶೇರುದಾರರಾಗುವ ಮೂಲಕ ಶೇ.3ರಷ್ಟು ಬಡ್ಡಿ ದರದ ಸಾಲವನ್ನು ಪಡೆದುಕೊಳ್ಳಬೇಕು. ಸರ್ಕಾರವು ರೈತರ ಪರವಾಗಿ ಇಂತಿಷ್ಟು ಬಡ್ಡಿಯನ್ನು ಪಾವತಿ ಮಾಡುತ್ತಿದೆ. ಇದರ ಪ್ರಯೋಜನ ನಿಮಗೆ ಸಿಗಬೇಕಾದರೆ ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಮತ್ತೆ ಸಾಲ ಪಡೆದುಕೊಳ್ಳಬೇಕು. ಅನಾವಶ್ಯಕವಾಗಿ ಪಡೆದ ಸಾಲವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಬಾರದು. ಪಡೆದುಕೊಂಡ ಉದ್ದೇಶಗಳಿಗೆ ಮಾತ್ರ ಸಾಲವನ್ನು ಸದ್ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.
ಬ್ಯಾಂಕಿ ನಿರ್ದೇಶಕರು ಸಕಾಲಕ್ಕೆ ಮರು ಪಾವತಿ ಮಾಡುವಂತಹ ರೈತರಿಗೆ ಸಾಲ ಕೊಡಿಸಬೇಕು. ಸಾಲ ಪಡೆದು ಬ್ಯಾಂಕಿನ ಕಡೆ ತಿರುಗಿ ನೋಡದೇ ಇರುವ ರೈತರಿಗೆ ಸಾಲ ಕೊಡಿಸಬಾರದು. ಸಾಲ ಕೊಡಿಸಿದ ನಿರ್ದೇಶಕರು ಜವಾಬ್ದಾರಿ ತೆಗೆದುಕೊಂಡು ಸಾಲವನ್ನು ಮರುಪಾವತಿಸಲು ಕಾಳಜಿ ವಹಿಸುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿ ಬ್ಯಾಂಕಿಗೆ ಬಸ್ ನಿಲ್ದಾಣದ ಬಳಿ ಇರುವ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಬ್ಯಾಂಕಿಗೆ ಆಧಾಯ ಬರುವಂತೆ ನೆಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಮೊದಲ ಮಹಡಿಯಲ್ಲಿ ಬ್ಯಾಂಕಿನ ಶಾಖೆಯನ್ನು ಆರಂಭಿಸಬೇಕು ಎಂದು ಆಡಳಿತ ಮಂಡಳಿಯ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಹಾಲಿ ನಿರ್ದೇಶಕರಾದ ಕಬ್ಬಲಗೆರೆ ಪುಟ್ಟಸ್ವಾಮೀಗೌಡ, ಅಧ್ಯಕ್ಷರಾದ ಜಯಶೀಲ ರಾಮೇಗೌಡ. ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ರಾಜ್ಯ ನಿರ್ದೇಶಕ ತಿಮ್ಮರಾಯಿಗೌಡ ಅವರನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷೆ ಜಯಶೀಲರಾಮೇಗೌಡ, ಉಪಾಧ್ಯಕ್ಷ ಬಣ್ಣೇನಹಳ್ಳಿ ಧನಂಜಯ, ಮಾಜಿ ಅಧ್ಯಕ್ಷರಾದ ಕಬ್ಬಲಗರೆ ಪುಟ್ಟಸ್ವಾಮಿಗೌಡ, ಕೆ.ಎಸ್.ಬಸವೇಗೌಡ, ಬ್ಯಾಂಕ್ ನಿರ್ದೇಶಕರಾದ ಕಮಲಮ್ಮ, ಚಂದ್ರೇಗೌಡ, ರಾಮಕೃಷ್ಣೇಗೌಡ, ಅಣ್ಣೇಚಾಕನಹಳ್ಳಿ ನಾಗರಾಜು, ರಮೇಶ್, ಸುರೇಶ್, ರಾಮೇಗೌಡ, ಕಾಮನಹಳ್ಳಿ ಶ್ರೀಧರ್, ಪಿ ನಾಗೇಶ್, ಬ್ಯಾಂಕಿನ ವ್ಯವಸ್ಥಾಪಕ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.




