ಮಂಡ್ಯ ನಗರದ ಮುನಿಸಿಪಲ್ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಎಸ್.ಸಿ., ಎಸ್.ಟಿ ಪಂಗಡದ ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಅನ್ನು ಡಿ.ಡಿ.ಪಿ.ಯು ಎಸ್.ಉಮೇಶ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಅಂಗನವಾಡಿ ಇಂದ ಯೂನಿವರ್ಸಿಟಿ ವರೆಗೆ ಉಚಿತ ಶಿಕ್ಷಣವನ್ನು ಸರಕಾರ ನೀಡುತ್ತಿದೆ. ಹಳ್ಳಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಉತ್ತಮ ಗುಣ ಮಟ್ಟದ ಸಮವಸ್ತ್ರ, ಶೂ, ಉತ್ತಮ ಗುಣಮಟ್ಟದ ಉಚಿತ ಬಿಸಿಯೂಟ ನೀಡುತ್ತದೆ. ಸರಕಾರದ ಈ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡಾಗ ಆ ವಿಷಯದ ಬಗ್ಗೆ ಪರಿಣಿತಿ ಹೊಂದುವುದು ಮುಖ್ಯವಾಗುತ್ತದೆ. ಕಲೆ, ವಾಣಿಜ್ಯ ವಿಭಾಗದ ವಿಷಯಗಳನ್ನು ತೆಗೆದುಕೊಂಡವರು ಕೀಳರಿಮೆಯಿಂದ ಇರಬಾರದು. ಹಾಗೆಯೇ ವಿಜ್ಞಾನ ವಿಷಯ ತೆಗೆದುಕೊಂಡದಕ್ಕೆ ಬೀಗಬಾರದು. ತಮ್ಮ ತಮ್ಮ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬೇಕು. ಆ ವಿಷಯಗಳಲಿ ಪರಿಣಿತರಾಗಬೇಕು ಎಂದು ತಿಳಿಸಿದರು.
ಸರ್.ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಸರ್ ಸಿ.ವಿ.ರಾಮನ್ ಅವರಂತಹ ಮಹನೀಯರಂತೆ ಆದರ್ಶಮಯ ಜೀವನ ನಡೆಸಬೇಕು. ಅವರಂತೆ ಈ ದೇಶಕ್ಕೆ ಕೊಡುಗೆ ನೀಡಬೇಕು. ತಂದೆ, ತಾಯಿ ಹಾಗೂ ಈ ದೇಶಕ್ಕೆ ಹೊರೆಯಾಗಬಾರದು. ತಂದೆ ತಾಯಂದಿರನ್ನು ಗೌರವಿಸಿ, ಅವರಿಗೆ ಹೆಮ್ಮೆ ತರುವಂತ ಕೆಲಸ ಮಾಡಬೇಕು ಎಂದು ಹೇಳಿದರು. ಈ ವೇಳೆ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಶುಪಾಲರ ಸಂಘದ ಅಧ್ಯಕ್ಷ ಡಿ.ನಾಗರಾಜು, ಇಲಾಖೆಯ ಶಾಖಾಧಿಕಾರಿ ರಾಜೇಗೌಡ, ಸಂಘದ ಖಚಾಂಚಿ ಗುರುಲಿಂಗಯ್ಯ, ಸ್ವಾಮಿ, ಎಸ್.ನಾಗೇಶ್ ಉಪಸ್ಥಿತರಿದ್ದರು.




