ಉತ್ತಮ ಆರೋಗ್ಯಕ್ಕಾಗಿ ಯೋಗ ಪ್ರತಿದಿನ ಪ್ರತಿನಿತ್ಯ ನಮ್ಮ ಜೀವನದ ಒಂದು ಭಾಗವಾಗಬೇಕು ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಆಯುರ್ ಮಟಂ ಆಯುರ್ವೇದ ಹೆಲ್ತ್ ವಿಲೇಜ್ ಇವರ ಸಹಯೋಗದೊಂದಿಗೆ ಕೃಷ್ಣರಾಜಸಾಗರದ ಬೃಂದಾವನ ಗಾರ್ಡನ್‍ನಲ್ಲಿ ಆಯೋಜಿಸಲಾಗಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪ್ರತಿದಿನದ ಕೆಲಸ ಪ್ರಾರಂಭವಾಗುವ ಮೊದಲು ಉತ್ತಮ ಆರೋಗ್ಯ ಹಾಗೂ ಬದುಕಿಗಾಗಿ, ಕುಟುಂಬದ ಸಂತೋಷಕ್ಕಾಗಿ ದಿನದ ಅರ್ಧಗಂಟಯನ್ನು ಬೆಳಗಿನ ಜಾವ ಯೋಗಕ್ಕೆ ಮೀಸಲಿಡಬೇಕು. ಯೋಗ ಮಾಡುವುದರಿಂದ ಬೇರೆ ಎಲ್ಲಾ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತದೆ. ಇದನ್ನು ಹಲವಾರು ಮಹಾನ್ ವ್ಯಕ್ತಿಗಳು ಅನುಸರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಯೋಗಕ್ಕೆ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದು ಗೂಡಿಸುವ ಶಕ್ತಿ ಇದೆ. ಭಾರತ ದೇಶವು ಯೋಗ ವಿದ್ಯೆಯಲ್ಲಿ ಇಡೀ ಪ್ರಪಂಚಕ್ಕೆ ವಿಶ್ವ ಗುರುವಾಗಿದೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿ ಆರೋಗ್ಯವನ್ನು ವೃದ್ಧಿಸುವ ಯೋಗವನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡಿ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳು ಪ್ರತಿದಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಯೋಗವನ್ನು ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳು ಅಭ್ಯಾಸ ಮಾಡಿದರೆ ಸಾರ್ವಜನಿಕರಿಗೆ ಇನ್ನೂ ಉತ್ತಮ ಸೇವೆ ಒದಗಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಸೌಮ್ಯ, ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೊಳಲುವಿನಲ್ಲಿ ವಿಶ್ವ ಯೋಗ ದಿನಾಚರಣೆ
ಮಂಡ್ಯ ತಾಲೂಕು ಹೊಳಲು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳು ಯೋಗ ಮಾಡುವುದರ ಮುಖಾಂತರ “ವಿಶ್ವ ಯೋಗ ದಿನಾಚರಣೆ”ಯನ್ನು ಆಚರಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಸುಮಾ ಜ್ಯೋತಿ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಸನ್ನ ಕುಮಾರ್ ರವರು ಯೋಗಾಸನದ ವಿವಿಧ ವಿವಿಧ ಬಂಗಿಗಳನ್ನು ಮಕ್ಕಳಿಗೆ ಹೇಳಿ ಯೋಗಾಸನವನ್ನು ಮಾಡಿಸಿದರು.
ಶಾಲೆ ಮುಖ್ಯ ಶಿಕ್ಷಕರಾದ ವೀಣಾ, ಶಿಕ್ಷಕರಾದ ಜವರೇಗೌಡ, ಕುಸುಮ ಪೂರ್ಣಿಮಾ, ಶಾಲೆ ಸಂಯೋಜಕರಾದ ಶೋಭಾ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಿಇಎಸ್ ಪ್ರೌಢಶಾಲೆಯಲ್ಲಿ ಯೋಗ ದಿನ
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಂಡ್ಯ ನಗರದ ಪಿಇಎಸ್ ಪ್ರೌಢಶಾಲೆಯ ಸುಮಾರು 150 ಮಕ್ಕಳು ದೈಹಿಕ ಶಿಕ್ಷಣ ಶಿಕ್ಷಕರಾದ ರವಿಚಂದ್ರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದರು. ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಶಾಲೆಯ ಮುಖ್ಯಶಿಕ್ಷಕಿ ಲತಾ, ಶಿಕ್ಷಕರಾದ ಶಿವಣ್ಣಮಂಗಲ, ಅಶೋಕ್, ಪವಿತ್ರ, ಚೇತನಾ ಈ ಸಮಯದಲ್ಲಿ ಹಾಜರಿದ್ದರು




