ಪೊಲೀಸ್ ಇಲಾಖೆಯಲ್ಲಿ ಒಂದೇ ಕುಟುಂಬದ ಹಲವರು ಕರ್ತವ್ಯ ನಿರ್ವಹಿಸುವುದನ್ನು ನೋಡಿದ್ದೇವೆ, ಆದರೆ ಪೊಲೀಸ್ ಅಧಿಕಾರಿಯಾಗಿರುವ ಸ್ವತಃ ತಂದೆಯಿಂದಲೇ ಎಸ್ಐ ಆಗಿ ಅಧಿಕಾರ ಸ್ವೀಕರಿಸುವ ಅವಕಾಶ ಕೆಲವೇ ಕೆಲವು ಮಕ್ಕಳಿಗೆ ಲಭ್ಯವಾಗುತ್ತದೆ. ಅಂತಹ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಮಂಡ್ಯನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.

ಒಂದು ಕಡೆ ತಂದೆ ಬಿ.ಎಸ್.ವೆಂಕಟೇಶ್ ವರ್ಗಾವಣೆಯಾಗಿದ್ದರೆ, ಅದೇ ಹುದ್ದೆಗೆ ಮಗಳು ಬಿ.ವಿ.ವರ್ಷಾ ಎಸ್ಐ ಆಗಿ ನಿಯೋಜನೆಗೊಂಡಿದ್ದರು. ಇದು ಆಶ್ಚರ್ಯವಾದರೂ ವಾಸ್ತವವಾಗಿತ್ತು. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ.ಎಸ್.ವೆಂಕಟೇಶ್ ಎಸ್ಪಿ ಕಚೇರಿಗೆ ವರ್ಗಾವಣೆಯಾದರೆ, ಅದೇ ಹುದ್ದೆಗೆ ಮಗಳಾದ ನೂತನ ಎಸ್‌ಐ ಬಿ.ವಿ.ವರ್ಷಾ ಅವರನ್ನು ಸರ್ಕಾರ ನಿಯೋಜನೆ ಮಾಡಿತು. ನಿನ್ನೆಯಷ್ಟೆ (ಜೂನ್ 20) ತಂದೆ ಬಿ.ಎಸ್.ವೆಂಕಟೇಶ್, ತಮ್ಮ ಮಗಳು ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು, ಈ ಸಂದರ್ಭದಲ್ಲಿ ಅಪ್ಪ-ಮಗಳ ಕಣ್ಣಂಚಿನಲ್ಲಿ ನೀರಾಡಿದವು. ಇಡೀ ಠಾಣೆಯ ಸಿಬ್ಬಂದಿಗಳು ಈ ಭಾವನಾತ್ಮಕ ಸನ್ನಿವೇಶವನ್ನು ಕಣ್ತುಂಬಿಕೊಂಡು, ಸಿಹಿ ಹಂಚಿ ಸಂಭ್ರಮಿಸಿದರು.
ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ವರ್ಷಾ ಅವರು 2022ರ ಬ್ಯಾಚ್‌ನ ಪಿಎಸ್‌ಐ ಆಗಿದ್ದಾರೆ. ಇವರು ಗುಲ್ಬರ್ಗಾದಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೇಷನರಿ ಅಧಿಕಾರಿಯಾಗಿ ಕಾರ‍್ಯನಿರ್ವಹಿಸಿದ್ದರು. ಈಗ ಅವರ ಮೊದಲ ಪೋಸ್ಟಿಂಗ್ ಕೂಡ ಮಂಡ್ಯದಲ್ಲೇ ಆಗಿದ್ದು ತಂದೆಯಿಂದಲೇ ಅಧಿಕಾರ ಪಡೆದು ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನ ಆರಂಭಿಸಿದ್ದಾರೆ.




